ಕುಶಾಲನಗರ, ಮಾ 27: ಸರಕಾರದ ಪಂಚ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್ ಅವರ ಅಧ್ಯಕ್ಷತೆಯಲ್ಲಿ ಪುರಸಭೆ ಸಭಾಂಗಣದಲ್ಲಿ ನಡೆಯಿತು.
ಹಿಂದಿನ ಸಭೆಯ ಅನುಪಾಲನಾ ವರದಿ ಬಗ್ಗೆ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಳ್ಳಲಾಯಿತು.
ಸಭೆಗೆ ಪಾಲ್ಗೊಳ್ಳದೆ ಸಿಬ್ಬಂದಿ ಕಳುಹಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಿರಿಯ ಅಧಿಕಾರಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಲಾಯಿತು. ಸಮರ್ಪಕ ಮಾಹಿತಿ ಇಲ್ಲದ ಸಿಬ್ಬಂದಿಗಳನ್ನು ಸಭೆಗೆ ಕಳುಹಿಸುವ ಪರಿಪಾಠದ ಬಗ್ಗೆ ಸಭಾಧ್ಯಕ್ಷರು ಹರಿಹಾಯ್ದರು. ಇಲಾಖೆಗೆ ಒಳಪಡುವ ಅಂಗನವಾಡಿ ಹುದ್ದೆಗೆ ನೇಮಕಾತಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿದ ಇಬ್ಬರು ವಿಧವಾ ಮಹಿಳೆಯರ ಅರ್ಜಿ ಕಾಣೆಯಾದ ಪ್ರಕರಣದ ಬಗ್ಗೆ ಸಂಶಯ ವ್ಯಕ್ತಪಡಿಸಲಾಯಿತು. ಪ್ರಥಮ ಪ್ರಾಶಸ್ತ್ಯ ನೀಡಬೇಕಾದ ಅರ್ಜಿ ಬದಿಗೊತ್ತಿ ಸೂಕ್ತ ಕಾರಣ ನೀಡದೆ ನುಣುಚಿಕೊಳ್ಳುವ ಪ್ರಹಸನ ಆಮೀಷಕ್ಕೆ ಒಳಗಾಗಿರುವ ಬಗ್ಗೆ ಸಂಶಯ ಮೂಡುತ್ತಿದೆ ಎಂದು ಅಧಿಕಾರಿಗಳಿಗೆ ಛೀಮಾರಿ ಹಾಕಿದರು. ಸಧ್ಯದಲ್ಲೆ ನಡೆಯುವ ಕೆಡಿಪಿ ಸಭೆಯಲ್ಲಿ ಹಿರಿಯ ಅಧಿಕಾರಿ ಪಾಲ್ಗೊಂಡು ಸೂಕ್ತ ಉತ್ತರ ನೀಡಬೇಕಿದೆ ಎಂದು ಶಶಿಧರ್ ಸಿಬ್ಬಂದಿಗೆ ಸೂಚಿಸಿದರು.
ಉದ್ದಿಮೆ ಆರಂಭಿಸಲು ಸಾಲಸೌಲಭ್ಯ ಯೋಜನೆಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಯಲ್ಲಿ ಕೂಡ ಸ್ವಜನಪಕ್ಷಪಾತ ನಡೆದಿರುವ ಬಗ್ಗೆ ಕಿಡಿಕಾರಿದರು.
ಸಭೆಗೆ ಸತತವಾಗಿ ಗೈರಾಗುತ್ತಿರುವ ಅಧಿಕಾರಿ ಶ್ರೀದೇವಿ ವಿರುದ್ದ ಸೂಕ್ತ ಕ್ರಮಕ್ಕೆ ಸಭೆ ಆಗ್ರಹಿಸಿತು.
ಬಸವನಹಳ್ಳಿಯಲ್ಲಿ ನೂತನ ಡಿಪೋ ನಿರ್ಮಾಣ ಕಾಮಗಾರಿ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಯಿತು. ಕೂಡ್ಲೂರು ಕೈಗಾರಿಕಾ ಘಟಕದ ಕಾರ್ಮಿಕರಿಗೆ ಶಕ್ತಿ ಯೋಜನೆ ಸೌಲಭ್ಯ ದೊರೆಯದಿರುವ ಬಗ್ಗೆ ವಿ.ಪಿ.ಶಶಿಧರ್ ವಿಷಯ ಪ್ರಸ್ತಾಪಿಸಿದರು. ಬೆಳಗ್ಗೆ ಮತ್ತು ಸಂಜೆ ಮಡಿಕೇರಿ ಡಿಪೋ ಬಸ್ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ಸಂಚಾರಿ ನಿಯಂತ್ರಣಾಧಿಕಾರಿಗೆ ಸೂಚಿಸಿದರು.
ಹೆಬ್ಬಾಲೆ, ಶಿರಂಗಾಲ ಭಾಗದಿಂದ ಬರುವ ಕೂಲಿ ಕಾರ್ಮಿಕರಿಗೆ ಸಾರಿಗೆ ಬಸ್ ಸೌಲಭ್ಯ ದೊರಕದೆ ಖಾಸಗಿ ವಾಹನಗಳಿಗೆ ಹೆಚ್ಚುವರಿ ಹಣ ನೀಡಿ ಕೆಲಸಕ್ಕೆ ಬರುವ ಪರಿಸ್ಥಿತಿ ಇರುವ ಬಗ್ಗೆ ಸದಸ್ಯ ಕೆ.ಎಸ್.ಕೃಷ್ಣೇಗೌಡ ವಿವರಿಸಿದರು. ಸುಂದರನಗರ ಮಾರ್ಗವಾಗಿ ಕೂಡ ಬಸ್ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ ಒದಗಿಸಲು ಸದಸ್ಯ ಶೇಖರ್ ಕೋರಿದರು.
ಪಡಿತರ ಚೀಟಿ ರದ್ದತಿ, ಹೊಸ ಬಿಪಿಎಲ್ ಕಾರ್ಡ್ ವಿತರಣೆ ಬಗ್ಗೆ ಆಹಾರ ನಿರೀಕ್ಷಕರಿಂದ ಮಾಹಿತಿ ಪಡೆಯಲಾಯಿತು.
ಈಗಾಗಲೆ ಬಿಪಿಎಲ್ ನಿಂದ ಎಪಿಎಲ್ ಗೆ ವರ್ಗವಾವಣೆಗೊಂಡ ಪಡಿತರ ಚೀಟಿ ಪರಿಶೀಲನೆಗೆ ಅವಕಾಶ ಕಲ್ಪಿಸಿದ್ದು ಅರ್ಹ ಫಲಾನುಭವಿಗಳು ತಹಸೀಲ್ದಾರ್ ಗೆ ಅರ್ಜಿ ಸಲ್ಲಿಸುವಂತೆ ಸಭೆಯ ಮೂಲಕ ವಿ.ಪಿ.ಶಶಿಧರ್ ಕೋರಿದರು.
ಬಿಪಿಎಲ್ ಪಡಿತರ ಚೀಟಿ ಪಡೆದುಕೊಳ್ಳಲು ಇದ್ದ ನಿಯಮಗಳ ಸಡಿಲಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ. ಮೆಡಿಕಲ್ ಎಮರ್ಜೆನ್ಸಿ ಗೆ ಬಿಪಿಎಲ್ ಕಾರ್ಡ್ ಒದಗಿಸುವ ಅವಕಾಶವಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ
ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್, ಜಿಲ್ಲಾ ಗ್ಯಾರೆಂಟಿ ಸಮಿತಿ ಉಪಾಧ್ಯಕ್ಷ ಕೆ.ಸಿ. ಭೀಮಯ್ಯ ಸೇರಿದಂತೆ ಸದಸ್ಯರು ಇದ್ದರು.
Back to top button
error: Content is protected !!