ಕುಶಾಲನಗರ, ಮೇ 19: ಸಮಾಜಕ್ಕೆ ಮಹತ್ತರವಾದ ಕೊಡುಗೆಗಳನ್ನು ನೀಡುವಂತಹ ಮಹದವಕಾಶಗಳನ್ನು ನೀಡುವಂತಹ ವ್ಯಕ್ತಿಗಳಾಗಿ ವಿದ್ಯಾರ್ಥಿಗಳು ಸಾಧಕರಾಗಬೇಕೆಂದು ಕುಶಾಲನಗರದ ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ನಾಗೇಂದ್ರ ಕರೆಕೊಟ್ಟರು.
ಕುಶಾಲನಗರದ ಅನುಗ್ರಹ ಕಾಲೇಜಿನ ಪದವಿ ವಿಭಾಗದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾಧನೆಯ ಹಾದಿಯಲ್ಲಿ ಯಾವುದೇ ಟೀಕೆಗಳು ಬಂದರೂ ಕೂಡ ವಿದ್ಯಾರ್ಥಿಗಳು ಧೃತಿಗೆಡದೇ ಮುಂದೆ ಹೆಜ್ಜೆಯಿಡಬೇಕು.
ಹಾಗೆಯೇ ವಿದ್ಯಾರ್ಥಿಗಳು ಯಾವುದೇ ಸಮಾಜ ಬಾಹಿರ ಚಟುವಟಿಕೆಗಳಿಗೆ ತೊಡಗದೇ ಸಜ್ಜನ ನಾಗರಿಕರಾಗಬೇಕೆಂದು ಕರೆಕೊಟ್ಟರು.
ಕಾಲೇಜಿನ ದ್ವಿತೀಯ ಬಿಸಿಎ ವಿದ್ಯಾರ್ಥಿ ಬಿ.ಎಂ.ದರ್ಶನ್ ಅವರು ಹೊರತಂದ ” ಪ್ರಬೋಧಿನಿ ” ಕಿರು ಕಾದಂಬರಿ ಹೊತ್ತಿಗೆ ಬಿಡುಗಡೆ ಮಾಡಿದ ಸಾಹಿತಿ ಕಣಿವೆ ಭಾರಧ್ವಜ್ ಕೆ.ಆನಂದ ತೀರ್ಥ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತರಾಗದೇ ಶಾಲಾ ಕಾಲೇಜು ಹಂತದಿಂದಲೇ ಸಾಹಿತ್ಯದತ್ತ ಆಸಕ್ತಿ ಬೆಳೆಸಿಕೊಳ್ಳಬೇಕು. ಕಲಿಕೆಯ ಹಂತದಿಂದಲೇ ತಾವು ಗ್ರಹಿಸಿದ ವಿಚಾರಗಳನ್ನು ಬರಹಕ್ಕೆ ಇಳಿಸುವ ಮೂಲಕ ವಿದ್ಯಾರ್ಥಿ ದರ್ಶನ್ ಮಾದರಿಯಲ್ಲಿ ಸಾಹಿತ್ಯಾಸಕ್ತರಾಗಲು ಸಾಧ್ಯವಾಗುತ್ತದೆ ಎಂದ ಅವರು, ದರ್ಶನ್ ಅವರ ಬಹುಮುಖ ಪ್ರತಿಭೆಯನ್ನು ಶ್ಲಾಘಿಸಿದರು.
ಕಾದಂಬರಿ ಲೇಖಕ ವಿದ್ಯಾರ್ಥಿ ದರ್ಶನ್ ಮಾತನಾಡಿ, ಪಿಯು ಹಂತದಿಂದಲೇ ಸಾಹಿತ್ಯದತ್ತ ಆಸಕ್ತಿ ಬೆಳೆಸಿಕೊಂಡೆ.
ಕಾಲೇಜಿನ ಉಪನ್ಯಾಸಕರು ನನಗೆ ಪೂರಕವಾಗಿ ಸಹಕಾರ ನೀಡಿದರು.
ಪ್ರಬೋಧಿನಿ ಕಾದಂಬರಿ ಕಾಲ್ಪನಿಕವಾದ ವಾಸ್ತವಕ್ಕೆ ದೂರವಾದ ಕಥಾ ಹಂದರವಾಗಿದೆ ಎಂದರು.
ಅನುಗ್ರಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಕೆ.ಸತೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸಮಾಜೋಪಯೋಗಿ ಕಾಯಕ ಹಾಗೂ ಚಿಂತನೆಗಳಿಂದಾಗಿ ಜೀವನದ ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕಿದೆ ಎಂದರು.
ಕಾಲೇಜು ಪ್ರಾಂಶುಪಾಲ ಪ್ರೊ.ಹೆಚ್.ಬಿ.ಲಿಂಗಮೂರ್ತಿ, ಉಪನ್ಯಾಸಕರಾದ ಬಿ.ಎನ್.ಹರ್ಷಿತಾ, ಶ್ವೇತಾ, ವಿದ್ಯಾರ್ಥಿ ಪರಿಷತ್ತು ಉಪಾಧ್ಯಕ್ಷ ಬಿ.ಜಿ.ಭುವನ್, ಕಾರ್ಯದರ್ಶಿ ಕೆ.ಎಸ್.ಅಂಜು, ಜಂಟಿ ಕಾರ್ಯದರ್ಶಿ ಎಂ.ವಿ.ವಿನಯ್, ಕ್ರೀಡಾ ಕಾರ್ಯದರ್ಶಿ ಬಿ.ಎಸ್.ಮಹೇಶ್, ಸಾಂಸ್ಕ್ರತಿಕ ಕಾರ್ಯದರ್ಶಿ ಡಿ.ಹೆಚ್.ಇಂಚನಾ ಇದ್ದರು.
ಪ್ರಾಂಶುಪಾಲ ಪ್ರೊ.ಹೆಚ್.ಬಿ.ಲಿಂಗಮೂರ್ತಿ ಸ್ವಾಗತಿಸಿದರು.
ಉಪನ್ಯಾಸಕಿ ಲೀಲಾಕುಮಾರಿ ತೊಡಿಕಾನ ಕಾರ್ಯಕ್ರಮ ನಿರೂಪಿಸಿದರು.
ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಕ್ರೀಡೆ ಹಾಗೂ ಸಾಂಸ್ಕ್ರತಿಕ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಇದೇ ಸಂದರ್ಭ ಬಹುಮಾನ ವಿತರಿಸಲಾಯಿತು.
Back to top button
error: Content is protected !!