ಕುಶಾಲನಗರ, ಫೆ 15:ಕುಶಾಲನಗರದ ಬೈಚನಹಳ್ಳಿ ಯೋಗಾನಂದ ಬಡಾವಣೆಯ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಮುತ್ತಪ್ಪ ಸ್ವಾಮಿ ದೇವಾಲಯದಲ್ಲಿ ಶ್ರೀಮುತ್ತಪ್ಪಸ್ವಾಮಿಯ ತೆರೆ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಾಲಯ ಸಮಿತಿ ಆಶ್ರಯದಲ್ಲಿ ಶನಿವಾರ ಬೆಳಿಗ್ಗೆ 5.30 ಗಂಟೆಗೆ ಗಣಪತಿ ಹೋಮದೊಂದಿಗೆ ಎರಡು ದಿನಗಳ ಕಾಲ ಜರುಗುವ ತೆರೆ ಮಹೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಬೆಳಿಗ್ಗೆ 10.30 ಕ್ಕೆ ದೇವಾಲಯ ಆವರಣದಲ್ಲಿರುವ ಗರುಡ ಸ್ತಂಭದಲ್ಲಿ ಧ್ವಜಾರೋಹಣ ನೆರವೇರಿಸಿದರು.ಇದೇ ವೇಳೆ ವಿಭಿನ್ನತೆಯಲ್ಲಿ ಏಕತೆ ಎಂಬ ಸಾಮರಸ್ಯದ ಸಂದೇಶ ಸಾರುವ ಹಿನ್ನೆಲೆಯಲ್ಲಿ ವಿವಿಧ ಸಮಾಜಗಳ ಅಧ್ಯಕ್ಷರು ಹಾಗೂ ಪಟ್ಟಣದಲ್ಲಿರುವ ವಿವಿಧ ದೇವಾಲಯಗಳ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿ ಮುತ್ತಪ ಸ್ವಾಮಿ ದೇವರ ಕೃಪೆಗೆ ಪಾತ್ರರಾದರು. ದೇವಾಲಯದ ಆವರಣದಲ್ಲಿ ಚಂಡೆ ವಾದ್ಯಗಳೊಂದಿಗೆ ಮಧ್ಯಾಹ್ನ 2 ಗಂಟೆಗೆ ಮುತ್ತಪ್ಪನ ಮಲೈ ಇರಕ್ಕಲ್, ಸಂಜೆ 4 ಗಂಟೆಗೆ ಮುತ್ತಪ್ಪನ ವೆಳ್ಳಾಟಂ ನಡೆಯಿತು. ಸಂಜೆ 5 ಗಂಟೆಗೆ ಅಯ್ಯಪ್ಪ ದೇವಸ್ಥಾನದಿಂದ ಊರಿನ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಗಳ ಅಲಂಕಾರದೊಂದಿಗೆ ಕೇರಳದ ಪ್ರಖ್ಯಾತ ಚಂಡೆ ವಾದಕರ ವಾದ್ಯ ಘೋಷದೊಂದಿಗೆ ನೂರಾರು ಮಹಿಳೆಯರು, ಮಕ್ಕಳು ಜ್ಯೋತಿ ಬೆಳಗಿಸಿಕೊಂಡು ಮೆರವಣಿಗೆಯಲ್ಲಿ ಸಾಗಿ ದೇವಾಲಯಕ್ಕೆ ಆಗಮಿಸಿದರು.
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ಗುಡ್ಡೆಹೊಸೂರು, ಹಾರಂಗಿ,ಗುಮ್ಮನಕೊಲ್ಲಿ,ಮುಳ್ಳುಸೋಗೆ, ಚಿಕ್ಕತ್ತೂರು,ಕೂಡಿಗೆ,ಸಿದ್ದಲಿಂಗಪುರ ಗ್ರಾಮಗಳ ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು. ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಸ್ಥಳೀಯ ಕಲಾವಿದರು ಮತ್ತು ಮಕ್ಕಳಿಂದ ಸಾಂಸ್ಕೃತಿಕ ವೇದಿಕೆಯಲ್ಲಿ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿ ಪ್ರೇಕ್ಷಕರ ಮನ ರಂಜಿಸಿತು.ರಾತ್ರಿ 11 ಗಂಟೆಗೆ ಕಳಿಗ ಪಾಟು, 12 ಗಂಟೆಗೆ ಕಳಸ ಆಗಮನವಾಯಿತು. ಸಮಿತಿ ವತಿಯಿಂದ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಈ ಸಂದರ್ಭ ಶ್ರೀ ಮುತ್ತಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ವರದ,ಉಪಾಧ್ಯಕ್ಷ ಎಂ.ಹರೀಂದ್ರನ್,ವಿ.ಬೋಬಿ,ಕೆ.ಕೆ.ದಿನೇಶ್, ಎಂ.ಡಿ.ರಂಜಿತ್ ಕುಮಾರ್, ಎ.ಕೆ.ಶೇಖರನ್,ಕೆ.ಎಂ.ಹರೀಂದ್ರನ್ ಟ್ರಸ್ಟ್ ಪದಾಧಿಕಾರಿಗಳು ಮತ್ತು ದೇವಾಲಯ ಸಮಿತಿಯ ಸದಸ್ಯರುಗಳು ಪಾಲ್ಗೊಂಡಿದ್ದರು.
ಭಾನುವಾರವೂ (ಫೆ.16) ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.