ಧಾರ್ಮಿಕ

ಹುಲುಸೆ ಬಸವೇಶ್ವರ ದೇವಾಲಯ ಗೋಪುರ ಕಳಶ ಪ್ರತಿಷ್ಠಾಪನೆ

ಕುಶಾಲನಗರ, ಫೆ 10: ಇಲ್ಲಿಗೆ ಸಮೀಪದ ಹುಲುಸೆ ಗ್ರಾಮದ ಬಸವೇಶ್ವರ ದೇವಾಲಯದ ವಿಮಾನ ಗೋಪುರ ಕಳಶ ಪ್ರತಿಷ್ಠಾಪನಾ ಮಹಾ ಪೂಜೋತ್ಸವ ಸೋಮವಾರ ನೆರವೇರಿತು.

ಶನಿವಾರಸಂತೆ ಮನೇಹಳ್ಳಿ ತಪೋಕ್ಷೇತ್ರದ ಪೀಠಾಧಿಪತಿ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಸಾನಿಧ್ಯದಲ್ಲಿ ಜರುಗಿದ ಪೂಜೋತ್ಸವದಲ್ಲಿ ಗ್ರಾಮದ ನೂರಾರು ಮಹಿಳೆಯರು ಗ್ರಾಮದ ಪೂರ್ವ ದಿಕ್ಕಿನಲ್ಲಿ ಹರಿದಿರುವ ಕಾವೇರಿ ನದಿಯಲ್ಲಿ ಗಂಗಾ ಪೂಜೆ ನೆರವೇರಿಸಿ ಮೆರವಣಿಗೆಯಲ್ಲಿ ತಂದ ಪವಿತ್ರ ಗಂಗೆಯನ್ನು ನೂತನ ವಿಮಾನ ಗೋಪುರಕ್ಕೆ ಪ್ರೋಕ್ಷಣೆ ಗೈದರು.
ದೇವಾಲಯದಲ್ಲಿ ಮುಂಜಾನೆಯ ಬ್ರಾಹ್ಮೀ ಮುಹೂರ್ತದಲ್ಲಿ ಪಂಚಾಮೃತ ಅಭಿಷೇಕ, ಮಹಾರುದ್ರಾಭಿಷೇಕ ನೆರವೇರಿತು.
ನಂತರ ಮಂತ್ರ ಪುಷ್ಪಗಳೊಂದಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು.
ಗುಮ್ಮನಕೊಲ್ಲಿ ಬಸವೇಶ್ವರ ದೇವಾಲಯದ ಅರ್ಚಕ ಚಂದ್ರಶೇಖರ ಹಿರೇಮಠ ತಂಡ ಪೂಜಾ ಕಾರ್ಯ ನೆರವೇರಿಸಿತು.
ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಶನಿವಾರಸಂತೆ ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಯೋಗಿ ಸ್ವಾಮೀಜಿ, ಪ್ರತಿಯೊಬ್ಬರು ಸದಾ ಕಾಲ
ಸತ್ಕಾರ್ಯಗಳನ್ನು ಮಾಡುವ ಮೂಲಕ ಸತ್ಪಾತ್ರರಾಗಬೇಕಿದೆ.
ದೇವಾಲಯಗಳು, ಮಠ, ಮಂದಿರಗಳು ಸತ್ಸಂಗದ ಆಲಯಗಳು.
ನಿರಾಕಾರನಾದ ಪರಮಾತ್ಮನನ್ನು ಕಾಣುವ ಪವಿತ್ರ ಕ್ಷೇತ್ರಗಳು ದೇವಾಲಯಗಳು.
ಇಷ್ಟಲಿಂಗ ಪೂಜೆ ಮಾಡುವ ಮೂಲಕ ವಿಭೂತಿ ಧಾರಣೆ ಮಾಡಿಕೊಂಡು ವೀರಶೈವ ಲಿಂಗಾಯಿತ ಪರಂಪರೆಯನ್ನು ಸಂರಕ್ಷಿಸಲು ಕರೆ ನೀಡಿದರು.
ನಮ್ಮ ದೇವಾಲಯಗಳು, ಊರಿನ ರಸ್ತೆ, ಚರಂಡಿಗಳ ಸ್ವಚ್ಛತೆಯ ಮೂಲಕ ಉತ್ತಮ ಆರೋಗ್ಯವಂತರಾಗಲು ಶ್ರೀಗಳು ಕರೆ ಕೊಟ್ಟರು.
ನಿವೃತ್ತ ಪ್ರಾಂಶುಪಾಲ ಸಿ.ಎಂ.ಧರ್ಮಪ್ಪ ಮಾತನಾಡಿ, ಮನುಷ್ಯ ಬಾಹ್ಯ ಶುದ್ದಿಗಿಂತ ಅಂತರಂಗ ಶುದ್ದೀಕರಣಕ್ಕೆ ಹೆಚ್ಚು ಒತ್ತು ನೀಡಬೇಕಿದೆ.
ಬಸವೇಶ್ವರರ ಕಲಬೇಡ ಕೊಲಬೇಡ ಎಂಬ ಸಪ್ತಸೂತ್ರವನ್ನು ಅನುಸರಿಸಿದರೆ ಮಾನವ ಜೀವನವೇ ಪರಮ ಪಾವನವಾಗುತ್ತದೆ.
ಲಿಂಗಾಯಿತರು ತಮ್ಮ ಕೊರಳಲ್ಲಿ ಲಿಂಗವನ್ನು ಆಯಿತ ಮಾಡಿಕೊಳ್ಳುವ ಮೂಲಕ ನಮ್ಮ ವೀರಶೈವ ಲಿಂಗಾಯಿತ
ಸಂಸ್ಕ್ರತಿ ಹಾಗೂ ಸಂಸ್ಕಾರವನ್ನು ಗೌರವಿಸಿ ಕಾಪಾಡಿಕೊಳ್ಳಬೇಕೆಂದು ಧರ್ಮಪ್ಪ ಕರೆ ಕೊಟ್ಟರು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡುತ್ತಾ,
ಆಧುನಿಕತೆ ಹೆಚ್ಚಾದಂತೆ ಜನರಲ್ಲಿ ದೈವತ್ವ ಮರೆಯಾಗುತ್ತಿದೆ.
ಗುರು ಹಿರಿಯರ ಮೇಲಿನ ಶ್ರದ್ಧೆ ಕ್ಷೀಣವಾಗುತ್ತಿದೆ.
ದೇವಾಲಯಗಳು ಮನುಷ್ಯನಿಗೆ ಬೇಕಾದ ಶಾಂತಿ ನೆಮ್ಮದಿಯ ತಾಣಗಳು. ತಾಯಂದಿರು ಮಕ್ಕಳಿಗೆ ಎಳೆಯ ಹಂತದಿಂದಲೇ ಉತ್ತಮ ಸಂಸ್ಕಾರಗಳನ್ನು ರೂಢಿಸಬೇಕು.
ಮಾನವೀಯತೆ ಹಾಗೂ ಉತ್ತಮ ಸಂಸ್ಕಾರಕ್ಕಿರುವ ಮೌಲ್ಯಕ್ಕೆ ಬೆಲೆ ಕಟ್ಟಲಾಗದು ಎಂದು ಸದಾಶಿವ ಸ್ವಾಮೀಜಿ ಹೇಳಿದರು.
ಕೆ.ಆರ್.ನಗರದ ಅರಕೆರೆ ವಿರಕ್ತ ಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಕೊಡಗು ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ಹೆಚ್.ವಿ.ಶಿವಪ್ಪ ಮಾತನಾಡಿದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ನಿವೃತ್ತ ಪ್ರಾಧ್ಯಾಪಕಿ ಗಿರಿಜಮ್ಮ,
ಹುಲುಸೆ ಗ್ರಾಮದ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಹೆಚ್.ಎನ್.ಶಿವನಂಜಪ್ಪ, ಕಾರ್ಯದರ್ಶಿ ಹೆಚ್.ಎನ್.ಶಂಕರಾಚಾರಿ, ಸದಸ್ಯರಾದ ಹೆಚ್.ಬಿ.ಸೋಮಶೇಖರ, ಹೆಚ್.ಕೆ.ರಾಜಪ್ಪ, ಶಿವರುದ್ರಪ್ಪ, ನಾಗಪ್ಪ, ಹೆಚ್.ಸಿ.ರವಿ, ಮಹದೇವಪ್ಪ, ನಂಜುಂಡ, ಹೆಚ್.ಎಸ್.ಬಸಪ್ಪ, ಸದಾಶಿವ,ರವಿ, ಚಂದ್ರಪ್ಪ, ಸೋಮಾಚಾರಿ, ರಾಜ, ದಿನೇಶ ಮೊದಲಾದವರಿದ್ದರು.
ಹರ್ಷಿತಾ ಲಿಂಗೇಶ್ ಪ್ರಾರ್ಥಿಸಿದರು.
ನಿವೃತ್ತ ಉಪನ್ಯಾಸಕ ಕಪನಪ್ಪ ಸ್ವಾಗತಿಸಿದರು.
ಶಿಕ್ಷಕ ಬಸವರಾಜು ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!