ಕುಶಾಲನಗರ, ಫೆ 10: ಹಾರಂಗಿ ಅಣೆಕಟ್ಟೆಯ ಸ್ವಾಗತ ಕಮಾನು ಸಂಪೂರ್ಣ ಆಂಗ್ಲಭಾಷೆಯಲ್ಲಿರುವ ಕಾರಣ ಕನ್ನಡ ಭಾಷೆಯಲ್ಲಿ ಸ್ವಾಗತ ಕಮಾನು ಅಳವಡಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕುಶಾಲನಗರ ತಾಲೂಕು ಅಧ್ಯಕ್ಷ ಬಿ.ಜೆ.ಅಣ್ಣಯ್ಯ ನೇತೃತ್ವದಲ್ಲಿ ಅಣೆಕಟ್ಟೆ ಮುಂಭಾಗ ಪ್ರತಿಭಟನೆ ನಡೆಯಿತು.
ಜಲಾಶಯದ ಸ್ವಾಗತ ಕಮಾನು ಮುಂಭಾಗ ಪ್ರತಿಭಟಿಸಿದ ಕರವೇ ಕಾರ್ಯಕರ್ತರು, ಕನ್ನಡ ವಿರೋಧಿಗಳು ಹಾಗೂ ನೀರಾವರಿ ನಿಗಮದ ವಿರುದ್ದ ಧಿಕ್ಕಾರ ಕೂಗಿದರು. ಕನ್ನಡ ಭಾಷೆ ಬಳಸುವಂತೆ ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ದೀಪಕ್, ರಾಜ್ಯ ಸರಕಾರ ಈಗಾಗಲೆ ಕನ್ನಡ ಭಾಷೆಗೆ ಪ್ರಾತಿನಿಧ್ಯ ನೀಡುವಂತೆ ಆದೇಶ ಹೊರಡಿಸಿದೆ. ಆದರೆ ಸರಕಾರದ ಭಾಗವಾಗಿರುವ ನೀರಾವರಿ ನಿಗಮದ ಅಧಿಕಾರಿಗಳು ಇತರರಿಗೆ ಮಾದರಿಯಾಗುವ ಬದಲು ಕನ್ನಡ ವಿರೋಧಿ ನೀತಿ ಅನುಸರಿಸಿದ್ದಾರೆ ಎಂದು ಆರೋಪಿಸಿದರು. ಈಗಾಗಲೆ ನಮ್ಮ ಪದಾಧಿಕಾರಿಗಳು ಕನ್ನಡ ಬಳಕೆಗೆ ಸೂಚನೆ ನೀಡಿದರೂ ಕೂಡ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಮುಂದಿನ 7 ರಿಂದ 15 ದಿನಗಳ ಒಳಗಾಗಿ ಕನ್ನಡ ನಾಮಫಲಕ ಅಳವಡಿಸದಿದ್ದರೆ ನಿಗಮದ ಕಛೇರಿ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕರವೇ ತಾಲೂಕು ಅಧ್ಯಕ್ಷ ಬಿ.ಜೆ.ಅಣ್ಣಯ್ಯ ಮಾತನಾಡಿ, ಕರ್ನಾಟಕದಲ್ಲಿ ಕನ್ನಡ ಭಾಷೆ ಕಡೆಗಣೆಯಾಗುತ್ತಿರುವುದು ವಿಷಾದದ ಸಂಗತಿ. ಪ್ರತಿ ಬಾರಿ ಕೂಡ ಕರವೇ ಕನ್ನಡ ಭಾಷೆ ಪರವಾಗಿ ಹೋರಾಟ ಹಮ್ಮಿಕೊಳ್ಳಬೇಕಿರುವುದು ದುರಂತದ ಸಂಗತಿ. ಎಷ್ಟೇ ಹೋರಾಟಗಳನ್ನು ಕೈಗೊಂಡರೂ ಕೂಡ ಹಲವು ಕಡೆ ಕನ್ನಡ ಬದಲು ಇಂಗ್ಲೀಷ್ ಗೆ ಹೆಚ್ಚಿನ ಪ್ರಾತಿನಿಧ್ಯ ಕಂಡುಬರುತ್ತಿರುವುದು ಬೇಸರದ ಸಂಗತಿ. ಪ್ರತಿಯೊಬ್ಬರೂ ಕೂಡ ಕನ್ನಡ ಭಾಷೆಗೆ ಆದ್ಯತೆ ನೀಡಬೇಕಿದೆ. ಇಂಗ್ಲೀಷ್ ನಾಮಫಲಕಗಳ ವಿರುದ್ದ ಹೋರಾಟಕ್ಕೆ ಮುಂದಾದ ಕೂಡಲೆ ನಾಮಫಲಕ ಬದಲಾಯಿಸುವ ಬದಲು ಆರಂಭದಲ್ಲೇ ಕನ್ನಡ ಬಳಕೆಗೆ ಮುಂದಾಗಬೇಕಿದೆ ಎಂದು ಅವರು, ಕನ್ನಡ ವಿರೋಧಿಗಳ ವಿರುದ್ದ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಎಚ್ಚರಿಸಿದರು.
ಕನ್ನಡ ನಾಮಫಲಕ ಅಳವಡಿಸುವಂತೆ ನೀರಾವರಿ ನಿಗಮದ ಸಹಾಯಕ ಅಭಿಯಂತರರಾದ ಸೌಮ್ಯ ಅವರಲ್ಲಿ ಮನವಿ ಮಾಡಿಕೊಳ್ಳಲಾಯಿತು.
ತಾಲೂಕಿನಾದ್ಯಂತ ಅಂಗಡಿ ಮುಂಗಟ್ಟುಗಳು ನಾಮಫಲಕ ಅಳವಡಿಕೆ ಸಂದರ್ಭ ಕನ್ನಡಭಾಷೆಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವಂತಾಗಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ಕೂಡ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಕರವೇ ರಾಜ್ಯ ಸಂಚಾಲಕಿ ದೀಪಾ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್,
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸಂಧ್ಯಾ ಗಣೇಶ್, ತಾಲೂಕು ಉಪಾಧ್ಯಕ್ಷ ಚಂದ್ರು ಕೆ, ಮಹಿಳಾ ಘಟಕದ
ತಾಲೂಕು ಅಧ್ಯಕ್ಷೆ ಹಾನಗಲ್ ರೂಪಾ ಗಣೇಶ್, ಕಾರ್ಯದರ್ಶಿ ಶೈಲಾ ದೇವಾಂಗ
ಸಹ ಕಾರ್ಯದರ್ಶಿ ರಾಣಿ, ಸದಸ್ಯರಾದ ಇಂಚರ,
ಆನಂದ್, ಮುರಳಿ, ಕುಮಾರ್, ಮಂಜುನಾಥ್ ರೈ, ರೊನಾಲ್ಡ್, ಯೋಗೇಶ್, ಪರಮೇಶ್ ಮಂಡ್ಯ ಇದ್ದರು.
Back to top button
error: Content is protected !!