ಕುಶಾಲನಗರ, ಜ 21: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಸಮುದ್ರ ಬಳಿಯ ಚಿಕ್ಲಿಹೊಳೆ ಆವರಣದಲ್ಲಿ ಮಾವಿನಹಳ್ಳಹಾಡಿ ಹಾಗೂ ಕಟ್ಟೆಹಾಡಿಯ ಅರಣ್ಯ ಹಕ್ಕು ಸಮಿತಿಯ ವಿಶೇಷ ಗ್ರಾಮಸಭೆ ನಡೆಯಿತು.
ಗಿರಿಜನ ಸಮುದಾಯದ ಹಿರಿಯ ಮುಖಂಡ ಜೆ.ಪಿ.ರಾಜು ವಿಶೇಷ ಗ್ರಾಮಸಭೆಯನ್ನು ಉದ್ಘಾಟಿಸಿದರು.
ಸಭೆಯ ಆರಂಭದಲ್ಲಿ ಅರಣ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಸಮಿತಿಯ ಸದಸ್ಯ ಕಾರ್ಯದರ್ಶಿಯೂ ಆದ ಗ್ರಾಪಂ ಪಿಡಿಒ ರಾಜಶೇಖರ್ ಮಾತನಾಡಿ ಸಭೆಗೆ ಅಗತ್ಯ ಮಾಹಿತಿ ಒದಗಿಸಿದರು.
ಗ್ರಾಮಸಭೆಗೆ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಜರಾಗಬೇಕು. ತಮ್ಮ ಬದಲು ಮಾಹಿತಿ ಕೊರತೆ ಇರುವವರನ್ನು ಇಲಾಖೆಯಿಂದ ಸಭೆಗೆ ಕಳಿಸಲಾಗುತ್ತಿದೆ ಎಂದು ಸಭೆಗೆ ಗೈರಾದ ಇಲಾಖೆ ಅಧಿಕಾರಿಗಳ ವಿರುದ್ದ ಆಕ್ರೋಷ ವ್ಯಕ್ತಗೊಂಡಿತು.
ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಮಾತನಾಡಿ,ಗಿರಿಜನ ಸಮಗ್ರ ಅಭಿವೃದ್ಧಿ ಯೋಜನೆಯಡಿ ಹಾಗೂ ಪಂಚಾಯತಿ ವತಿಯಿಂದಲೂ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಹಕ್ಕುಪತ್ರ ಪಡೆದ ಕುಟುಂಬಗಳು ಸರ್ಕಾರದ ವತಿಯಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಜೊತೆಗೆ ಜಾತಿ,ಆಧಾರ್ ಕಾರ್ಡ್ ಹೊಂದಿಲ್ಲದ ಕುಟುಂಬಗಳನ್ನು ಗುರುತಿಸಿ ವಿಶೇಷ ಕ್ಯಾಂಪ್ ನಡೆಸಿ ನೊಂದಾಯಿಸಿಕೊಂಡು ಜಾತಿ ಪ್ರಮಾಣ ಪತ್ರ, ಆಧಾರ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಗ್ರಾಮ ಪಂಚಾಯತಿ ಸದಸ್ಯ ರಕ್ಷಿತ್ ಮಾವಾಜಿ ಮಾತನಾಡಿ, ಅರಣ್ಯ ಸಂರಕ್ಷಣೆಗೆ ಗಿರಿಜನ, ಆದಿವಾಸಿಗಳ ಕೊಡುಗೆ ಅಪಾರವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗಿರಿಜನರ ಅಭಿವೃದ್ಧಿಗೆ ವಿಶೇಷ ಒತ್ತು ನೀಡುತ್ತಿದ್ದು, ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಹಕ್ಕುಪತ್ರ ವಿತರಣೆ ಮಾಡುತ್ತಿದೆ.ಜೊತೆಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಗಿರಿಜನರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುವ ಮೂಲಕ ಪಡೆದುಕೊಳ್ಳಬೇಕು. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಕೇವಲ ಭೂಮಿ ಪಡೆದುಕೊಳ್ಳುವುದಕ್ಕೆ ಮಾತ್ರ ಸೀಮಿತವಾಗದೆ, ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಗಿರಿಜನರು ಪಡೆದುಕೊಂಡು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ತಮ್ಮ ಜೀವನ ಮಟ್ಟವನ್ನು ಉತ್ತಮ ಪಡಿಸಿಕೊಳ್ಳಬೇಕು ಎಂದರು.
ಗಿರಿಜನ ಮುಖಂಡ ಆರ್.ಕೆ.ಚಂದ್ರು ಮಾತನಾಡಿ, 42 ವರ್ಷ ಗಳಿಂದ ನಿರಂತರ ಅನ್ಯಾಯ ಸಹಿಸಿಕೊಂಡು ಬರುತ್ತಿದ್ದೇವೆ. ಗಿರಿಜನರ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪಡೆದು ಹಲವರು ಸರಕಾರದ ಸೌಲಭ್ಯಗಳನ್ನು ಕಬಳಿಸಿಕೊಂಡಿದ್ದಾರೆ. ಆದರೆ ನೈಜ ಫಲಾನುಭವಿಗಳು ಇದರಿಂದ ವಂಚಿತರಾಗಿದ್ದಾರೆ.
ನಮಗೆ ದೊರಕಬೇಕಾದ ಹಕ್ಕುಗಳನ್ನು ಒದಗಿಸುವುದು ಅಧಿಕಾರಿಗಳ ಕರ್ತವ್ಯ. ಆದರೆ ನಮ್ಮ ಬಗ್ಗೆ ಅಧಿಕಾರಿ ವರ್ಗ ನಿರ್ಲಕ್ಷ್ಯ ತಾಳಿದ್ದಾರೆ.
ಕಾಡಿನಲ್ಲಿರುವ ವಸ್ತುಗಳು ನಮ್ಮದು, ಮರ ಕಡಿದು ಸಾಗಿಸುವವರನ್ನು ಬಿಡುವ ಅರಣ್ಯ ಅಧಿಕಾರಿಗಳು ಕಾಡಿನಲ್ಲಿ
ಜೇನು, ನಲ್ಲಿ,ಸೀಗೆ ಕುಯ್ಯುವ ಗಿರಿಜನರ ಮೇಲೆ ಕೇಸು ಹಾಕುತ್ತ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶೀಘ್ರದಲ್ಲೇ ಜಿಲ್ಲಾಡಳಿತದ ಮುಂದೆ
ಅರೆಬೆತ್ತಲೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಆರ್.ಕೆ.ಚಂದ್ರು ಎಚ್ಚರಿಕೆ ನೀಡಿದರು
ಗಿರಿಜನ ಮುಖಂಡ ಜೆ.ಟಿ.ಕಾಳಿಂಗ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆ ಅಡಿ ವೈಯಕ್ತಿಕ ಹಕ್ಕು,
ಸಮುದಾಯ ಹಕ್ಕು ನೀಡಬೇಕು.ಅನುಭವದಲ್ಲಿದ್ದ ಅಷ್ಟೂ ಪ್ರಮಾಣದ ಜಮೀನಿಹೆ ಹಕ್ಕುಪತ್ರ ನೀಡಬೇಕು. ಗ್ರಾಮ ಅರಣ್ಯ ಸಮಿತಿ ಗಮನಕ್ಕೆ ತಾರದೆ ನಮ್ಮ ಸಮುದಾಯದ ಅಭಿವೃದ್ದಿ ಯೋಜನೆಗಳು ಹಾಗೂ ಹಾಡಿಯ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಕೂಡದು. ಒಂದು ವೇಳೆ ನಡೆಸಿದಲ್ಲಿ ಅಂತಹ ಅಧಿಕಾರಿಗಳ ವಿರುದ್ದ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದರು.
ಮಾವಿನಹಳ್ಳ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಜೆ.ಎಂ.
ನಾಗೇಶ್ ಅಧ್ಯಕ್ಷತೆ ವಹಿಸಿದ್ದರು.
ಕಟ್ಟೆಹಾಡಿ ಸಮಿತಿಯ ಅಧ್ಯಕ್ಷ ಅಪ್ಪು, ವಿರೂಪಾಕ್ಷಪುರ ಗ್ರಾಮ ಅರಣ್ಯ ಸಮಿತಿ ಗಿರಿ, ಸಜ್ಜಹಳ್ಳಿ ಸಮಿತಿ ಅಧ್ಯಕ್ಷ ವಿಶ್ವ, ಮುಖಂಡ ಧರ್ಮ, ಗ್ರಾ.ಪಂ.ಕಾರ್ಯದರ್ಶಿ ಶೇಷಗಿರಿ ಉಪಸ್ಥಿತರಿದ್ದರು.
ಜೆ.ಪಿ.ಮುತ್ತಮ್ಮ ಸ್ವಾಗತಿಸಿದರು.
Back to top button
error: Content is protected !!