ಕಾರ್ಯಕ್ರಮ

ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ ಭಿತ್ತಿ ಪತ್ರಗಳ ಬಿಡುಗಡೆ

ಕುಶಾಲನಗರ, ಜ 14: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ 9ನೇ ವರ್ಷದ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮಕ್ಕೆ ಕುಶಾಲನಗರದಲ್ಲಿ ಚಾಲನೆ ನೀಡಲಾಯಿತು.
ಕುಶಾಲನಗರ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ, ಕುಶಾಲನಗರ ಪುರಸಭೆ, ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ಟ್ರಸ್ಟ್, ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಕಾವೇರಿ ಆರತಿ ಕ್ಷೇತ್ರದಲ್ಲಿ ನಡೆದ ಸರಳ ಕಾರ್ಯಕ್ರಮವನ್ನು ಕುಶಾಲನಗರ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು ಅವರು ಉದ್ಘಾಟಿಸಿ ಶುಭ ಕೋರಿದರು.

9ನೇ ವರ್ಷದ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮಕ್ಕೆ ಕುಶಾಲನಗರ ಡಿ ವೈ ಎಸ್ ಪಿ. ಆರ್ ವಿ ಗಂಗಾಧರಪ್ಪ ಅವರು ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಗಂಗಾಧರಪ್ಪ ಅವರು ಸ್ವಚ್ಛತೆ ಪ್ರತಿಯೊಬ್ಬರ ಮನಸ್ಸು ಹಾಗೂ ಮನೆಮನೆಗಳಿಂದ ಆರಂಭವಾಗಬೇಕು ಪ್ರತಿಯೊಬ್ಬರಿಗೂ ಸ್ವಚ್ಛತೆಯ ಅರಿವು ಇರಬೇಕು. ಆ ಮೂಲಕ ಸ್ವಚ್ಛ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಸಮರ್ಪಕ ತ್ಯಾಜ್ಯ ವಿಲೇವಾರಿ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು.
ಜನ ಜಾನುವಾರುಗಳ ಜೀವ ಸೆಲೆಯಾಗಿರುವ ಕಾವೇರಿ ನದಿ ಸಂರಕ್ಷಣೆ ಬಗ್ಗೆ ಕಾಳಜಿ ಹೊಂದಬೇಕು ಎಂದು ಅವರು ಹೇಳಿದರು.
ಈ ಸಂಬಂಧ ಕಳೆದ 15 ವರ್ಷಗಳಿಂದ ನಿರಂತರ ಸ್ವಚ್ಛ ಕಾವೇರಿಗಾಗಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿರುವ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕರಾದ ಲೀಲಾವತಿ ಮಾತನಾಡಿ, ಡಾ ಡಿ ವೀರೇಂದ್ರ ಹೆಗ್ಗಡೆ ಮತ್ತು ಶ್ರೀಮತಿ ಹೇಮಾವತಿ ಹೆಗ್ಗಡೆ ಅವರ ಮಾರ್ಗದರ್ಶನದೊಂದಿಗೆ ಕಳೆದ ಒಂಬತ್ತು ವರ್ಷಗಳಿಂದ ರಾಜ್ಯದಾದ್ಯಂತ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತಿದೆ. ಪ್ರತೀ ಗ್ರಾಮಗಳಲ್ಲಿ ಸಂಸ್ಥೆಯ ಕಾರ್ಯಕರ್ತರು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಒಂದು ವಾರಗಳ ಕಾಲ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮ ಹಾಗೂ ನದಿ ಪರಿಸರಗಳ ಸ್ವಚ್ಛತೆ ಕಾರ್ಯ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ನಮ್ಮ ನಡಿಗೆ ಶ್ರದ್ದಾ ಕೇಂದ್ರ ಸ್ವಚ್ಛತೆಯಡೆಗೆ ಎನ್ನುವ ಘೋಷವಾಕ್ಯ ದೊಂದಿಗೆ ನಾಡಿನ ಎಲ್ಲ ಜನರ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ ಸ್ವಚ್ಛತಾ ಕಾರ್ಯಕ್ರಮವನ್ನು ವಿವಿಧ ಕೇಂದ್ರಗಳಲ್ಲಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭ ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್ ಮತ್ತಿತರರು ಮಾತನಾಡಿದರು.
ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ಟ್ರಸ್ಟ್ ಅಧ್ಯಕ್ಷರಾದ ಬಿ ಪಿ ಗಣಪತಿ,ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸದಸ್ಯರಾದ ಎಂ ಎನ್ ಚಂದ್ರಮೋಹನ್, ವಿ ಡಿ ಪುಂಡರಿಕಾಕ್ಷ, ಕೆ ಎಸ್ ರಾಜಶೇಖರ್, ಪತ್ರಕರ್ತ ಹೆಚ್ಎಂ ರಘು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ರೋಹಿತ್, ಮೇಲ್ವಿಚಾರಕರಾದ ಪೂರ್ಣಿಮಾ ಮತ್ತು ಯೋಜನೆಯ ಪ್ರತಿನಿಧಿಗಳು ಕಾರ್ಯಕರ್ತರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!