ಆರೋಗ್ಯ

ಕೂಡಿಗೆಯಲ್ಲಿ ರಕ್ತದಾನ ಶಿಬಿರ:ಗ್ರಾಮೀಣ ಜನರಿಗೆ ರಕ್ತದಾನದ ಮಹತ್ವ ತಿಳಿಸಲು ಡಾ‌.ಕರುಂಬಯ್ಯ ಕರೆ

ಕುಶಾಲನಗರ, ನ 08 : ರಕ್ತದಾನದ ಮಹತ್ವ ಹಾಗೂ ರಕ್ತದಾನದಿಂದ ಆಗುವ ಪ್ರಯೋಜನಗಳ ಕುರಿತು ಗ್ರಾಮೀಣ ಜನರಿಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂದು ಜಿಲ್ಲಾ ರಕ್ತ ನಿಧಿ ಘಟಕದ ಮುಖ್ಯಸ್ಥರಾದ ಡಾ.ಕರುಂಬಯ್ಯ ಹೇಳಿದರು.
ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಸಹಕಾರ ಭವನದಲ್ಲಿ ಶುಕ್ರವಾರ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್, ಮಡಿಕೇರಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಘಟಕ, ಕೂಡಿಗೆ ವಿಎಸ್ಸೆನ್, ಕೂಡಿಗೆ ಗ್ರಾಮ ಪಂಚಾಯಿತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಒಬ್ಬರು ನೀಡುವ ರಕ್ತ ಮೂವರ ಜೀವವನ್ನು ಉಳಿಸುತ್ತದೆ.
ರಕ್ತದಾನದ ಬಗ್ಗೆ ಗ್ರಾಮೀಣ ಜನರಲ್ಲಿ ಇರುವ ಮೌಢ್ಯವನ್ನು ಹೋಗಲಾಡಿಸಿ ಅವರಲ್ಲಿ ಜಾಗೃತಿ ಮೂಡಿಸಬೇಕು.
ಪ್ರತೀ ಸಂಘ ಸಂಸ್ಥೆಗಳು ವರ್ಷಕ್ಕೊಮ್ಮೆ ಇಂತಹ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳಬೇಕು.
ರಕ್ತದಾನಿಗಳು ಯಾವುದೇ ಫಲಾಪೇಕ್ಷೆಗಳಿಲ್ಲದೇ ಸ್ವಯಂ ಪ್ರೇರಿತರಾಗಿ ರಕ್ತ ನೀಡುವಂತಾಗಬೇಕು.
18 ರಿಂದ 60 ರ ವಯೋಮಿತಿಯವರು ವರ್ಷಕ್ಕೆ 4 ಬಾರಿ ರಕ್ತದಾನ ನೀಡಬಹುದು. ರಕ್ತ ನೀಡಿದಲ್ಲಿ ಬಿಪಿ, ಶುಗರ್, ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತದೆ ಎಂದು ಡಾ.ಕರುಂಬಯ್ಯ ವಿವರಿಸಿದರು.
ಶಿಬಿರ ಉದ್ಘಾಟಿಸಿದ ಕೂಡಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತಕುಮಾರ್ ದಾನಗಳಲ್ಲಿ ಶ್ರೇಷ್ಟದಾನವಾದ ರಕ್ತದಾನ ಮಾಡುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯುವಕರಿಗೆ ಕರೆಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಯೂತ್ ಮೂವ್ ಮೆಂಟಿನ ಸಲಹಾ ಸಮಿತಿ ಸದಸ್ಯ ಎಂ.ಡಿ.ರಂಗಸ್ವಾಮಿ ಮಾತನಾಡಿ, ಕೇವಲ ಒಡಹುಟ್ಟಿದವರು ರಕ್ತಸಂಬಂಧಿಗಳಲ್ಲ.
ನಾವು ನೀಡಿದ ರಕ್ತವನ್ನು ಪಡೆಯುವ ಮಂದಿಯೂ ನಮಗರಿವಲ್ಲದಂತೆ ರಕ್ತಸಂಬಂಧಿಗಳಾಗುತ್ತಾರೆ.
ಆದ್ದರಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಸಂಘ ಸಂಸ್ಥೆಗಳು ಇಂತಹ ಸಾಮಾಜಿಮ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಕರೆಕೊಟ್ಟರು.
ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ದೀಪಿಕಾ ಮೂರ್ತಿ, ಕೂಡಿಗೆ ಸಹಕಾರ ಸಂಘದ ನಿರ್ದೇಶಕರಾದ ಕೃಷ್ಣ, ಕುಮಾರ್, ಕೃಷ್ಣೇಗೌಡ, ಜಿಲ್ಲಾ ರಕ್ತನಿಧಿ ಘಟಕದ ಶುಶ್ರೂಷಕಿಯರಾದ ಸೌಮ್ಯ, ಜೂಲಿಯೇಟ್ ಕ್ರಾಸ್ತಾ, ಪಂಚಲಿಂಗೇಶ್ವರ, ಪವಿತ್ರ, ಪೂರ್ಣಿಮಾ ಹಾಗೂ ಮಡಿಕೇರಿ ವೈದ್ಯ ಆಸ್ಪತ್ರೆಯ ತರಬೇತಿ ವೈದ್ಯ ಸಿಬ್ಬಂದಿಗಳಿದ್ದರು.
ವಿವೇಕಾನಂದ ಯೂತ್ ಮೂವ್ ಮೆಂಟಿನ ಸಹಾಯಕ ವ್ಯವಸ್ಥಾಪಕ ಭೋರಪ್ಪ ಸ್ವಾಗತಿಸಿದರು. ಹೇಮಂತ್ ನಿರೂಪಿಸಿದರು.
ಶಿಬಿರದಲ್ಲಿ 70 ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!