ಕುಶಾಲನಗರ, ನ 07: ಕುಶಾಲನಗರದ ಹೃದಯ ಭಾಗದಲ್ಲಿರುವ ಇಂದಿರಾ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸುಮಾರು15 ದಿನ ಕಳೆದರೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಸಂಪೂರ್ಣಗೊಳ್ಳದಿರುವುದು ನಾಗರಿಕರಲ್ಲಿ ತೀವ್ರ ಅಸಮಾಧಾನ ಉಂಟುಮಾಡಿದೆ. ಅಲ್ಲಿನ ನಿವಾಸಿಗಳು, ವಿದ್ಯಾರ್ಥಿಗಳು, ಹಾಗೂ ವ್ಯಾಪಾರಸ್ಥರು ಪರದಾಡುವಂತಾಗಿದೆ.
ಸುಮಾರು 2 ವರ್ಷಗಳಿಂದ ಈ ರಸ್ತೆ ಹಾಳಾದರು ಯಾರೋಬ್ಬರು ಈ ಬಗ್ಗೆ ಗಮನ ಹರಿಸದೆ ನಿರ್ಲಕ್ಷ್ಯ ವಹಿಸಿದ್ದರು. ಸ್ಥಳೀಯ ನಿವಾಸಿಗಳು ಪುರಸಭೆಗೆ ಅನೇಕ ಭಾರಿ ಮನವಿ ಸಲ್ಲಿಸಿದ್ದರು ಪ್ರಯೋಜನವಾಗಿರಲಿಲ್ಲ. ಆದರೆ ಈಗ ದುರಸ್ತಿ ಕಾಮಗಾರಿ ಆರಂಭಗೊಂಡಿದೆ. ಆದರೆ ಕಾಮಗಾರಿ ಕುಂಟುತ್ತಾ ಸಾಗುತ್ತಿರುವುದು ಸಂಚಾರ ಸಮಸ್ಯೆ ಉಲ್ಬಣವಾಗಲು ಕಾರಣವಾಗಿದೆ ಎನ್ನುತ್ತಾರೆ ಸಾರ್ವಜನಿಕರು.
ಈ ವೇಳೆ ಅಂಬೇಡ್ಕರ್ ಜನಪರ ವೇದಿಕೆಯ ತಾಲ್ಲೂಕು ಅಧ್ಯಕ್ಷ ಹಾಗೂ ಸ್ಥಳೀಯ ನಿವಾಸಿಯಾದ ಆದಂ ಎಸ್. ಮಾತನಾಡಿ, ಈ ರಸ್ತೆ ಕಾಮಗಾರಿ ಆರಂಭವಾದಾಗಿನಿಂದ ಮಕ್ಕಳಿಗೆ, ವಯಸ್ಸಾದವರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಓಡಾಡೊಕೆ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯನ್ನು ಅಗೆದು 15 ದಿನಗಳು ಕಳೆದರು ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿರುವ ಪರಿಣಾಮ ಪಾದಚಾರಿಗಳಿಗೆ, ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಸ್ಥಳೀಯ ನಿವಾಸಿಗಳ ಸಹಕಾರದಿಂದ ಪುರಸಭೆ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ದಿನನಿತ್ಯ ನೂರಾರು ಮಂದಿ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಪೂರ್ಣಗೊಳ್ಳದ ಕಾಮಗಾರಿಯಿಂದ ಸಂಚರಿಸುವ ಸಂದರ್ಭದಲ್ಲಿ ಅಪಾಯ ಸಂಭವಿಸುವ ಪೂರ್ವದಲ್ಲಿಯೇ ಸಂಬಂದಪಟ್ಟವರು ಜಾಗೃತೆವಹಿಸುವುದು ಅತೀ ಅವಶ್ಯವೆಂದು ಸ್ಥಳೀಯ ನಿವಾಸಿ ಅಭಿ ಆಗ್ರಹಿಸಿದ್ದಾರೆ.
ಆದಷ್ಟು ಬೇಗ ಕಾಮಗಾರಿ ಮುಗಿಸಿದರೆ ಜನರಿಗೆ ಅನುಕೂಲವಾಗುತ್ತದೆ ಎನ್ನುವುದು ಸದ್ಯ ಈ ಭಾಗದ ಜನರ ಮನವಿಯಾಗಿದೆ.
Back to top button
error: Content is protected !!