ಕುಶಾಲನಗರ, ಅ 16 : ಜಿಲ್ಲೆಯಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ವಾಣಿಜ್ಯ ನಗರಿ ಕುಶಾಲನಗರ ಪಟ್ಟಣಕ್ಕೆ ಅಮೃತ್ 2.0 ಯೋಜನೆಯಡಿ ರೂ.44 ಕೋಟಿ ವೆಚ್ಚದಲ್ಲಿ ಕಾವೇರಿ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸಲು ಬುಧವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಜಯಲಕ್ಷ್ಮಿಚಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪಟ್ಟಣದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಮೃತ್ 2.0 ಯೋಜನೆಯಡಿ ಕಾವೇರಿ ಕುಡಿಯುವ ನೀರಿನ ಪೂರೈಕೆ ಮಾಡುವ ಬಗ್ಗೆ ಚರ್ಚೆ ನಡೆಯಿತು. ಕರ್ನಾಟಕ ನಗರ ನೀರ ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಉಮೇಶ್ ಚಂದ್ರ ಮಾತನಾಡಿ, ಪಟ್ಟಣದ 20 ಕಿಲೋಮೀಟರ್ ವ್ಯಾಪ್ತಿಯ ಎರಡು ಸಾವಿರಕ್ಕೂ ಹೆಚ್ಚಿನ ಮನೆಗಳಿಗೆ ನೀರು ಪೂರೈಸಲು ಉದ್ದೇಶಿಸಿಸಲಾಗಿದೆ.ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ದಿಂಡಿಗಾಡು ಬಳಿ ಕಾವೇರಿ ನದಿಯಲ್ಲಿ ಜ್ಯಾಕ್ ವೆಲ್ ನಿರ್ಮಿಸಲು ಜಾಗ ಪರಿಶೀಲನೆ ನಡೆಸಲಾಗಿದೆ.ಈ ಯೋಜನೆ ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳಲಿದೆ.ಇದಕ್ಕಾಗಿ ಕೇಂದ್ರ ಸರ್ಕಾರ ಶೇ.50, ರಾಜ್ಯ ಸರ್ಕಾರ ಶೇ.40 ಹಾಗೂ ಸ್ಥಳೀಯ ಸಂಸ್ಥೆ ಶೇ.10 ರಷ್ಟು ಪಾಲು ಹಣವನ್ನು ಭರಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಬಿ. ಅಮೃತ್‌ರಾಜ್, ‘ನಾವು ಪಟ್ಟಣ ಪಂಚಾಯಿತಿ ಸದಸ್ಯರೋ ಅಥವಾ ಪುರಸಭೆ ಸದಸ್ಯರೋ ?’ ಎಂದು ಪ್ರಶ್ನೆ ಮಾಡಿದರು. ನಾವುಗಳು ಪುರಸಭೆ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದೇವೆ. ಆದರೆ ಈಗ 2ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸಂದರ್ಭ ಸರ್ಕಾರ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಎಂದು ಅಧಿಸೂಚನೆ ಹೊರಡಿಸಿ ಅದರಂತೆಯೇ ಚುನಾವಣೆಯನ್ನೂ ನಡೆಸಲಾಗಿದೆ. ಹಾಗಾಗಿ ಈಗ ನಡೆಯುತ್ತಿರುವುದು ಪುರಸಭೆ ಸಾಮಾನ್ಯ ಸಭೆಯೋ ಅಥವಾ ಪ.ಪಂ. ಸಾಮಾನ್ಯ ಸಭೆಯೋ ಎನ್ನುವ ಗೊಂದಲ ಇದೆ. ಈ ಸಭೆಯ ಸಿಂಧುತ್ವದ ಬಗ್ಗೆಯೂ ಅನುಮಾನವಿದೆ ಎಂದು ಹೇಳಿದರು. ಇದಕ್ಕೆ ಬಿಜೆಪಿಯ ಡಿ.ಕೆ. ತಿಮ್ಮಪ್ಪ, ಜಯವರ್ಧನ್, ಜೆಡಿಎಸ್‌ನ ಜಗದೀಶ್ ಬಿ.ಎಲ್. ಧ್ವನಿಗೂಡಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ನ ಪ್ರಮೋದ್ ಮುತ್ತಪ್ಪ ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ಇಲ್ಲಿ ಈಗ ಈ ಪ್ರಸ್ತಾಪ ಸರಿಯಲ್ಲ ಎಂದರು.
ಸದಸ್ಯರ ಗೊಂದಲಗಳಿಗೆ ಉತ್ತರ ನೀಡಿದ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಕುಶಾಲನಗರ ಪುರಸಭೆಯಾಗಿ ಮೇಲ್ದರ್ಜೆಗೆ ಏರಿದೆ. ಈ ಸಂಬಂಧ ಸರ್ಕಾರ ಅಧಿಸೂಚನೆಯನ್ನೂ ಹೊರಡಿಸಿದೆ. ನ್ಯಾಯಾಲಯದ ನಿರ್ದೇಶನದಂತೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣಾ ಪ್ರಕ್ರಿಯೆ ನಡೆಸಲಾಗಿದೆ. ಈಗ ಪುರಸಭೆ ಸಾಮಾನ್ಯ ಸಭೆ ನಡೆಯುತ್ತಿದ್ದು, ಈ ಸಭೆಗೆ ಸಿಂಧುತ್ವ ಇದೆ ಎಂದರು.
ಯುಜಿಡಿ ಕಾಮಗಾರಿಯ ವಿಷಯ ಈ ಸಭೆಯಲ್ಲೂ ಪ್ರತಿಧ್ವನಿಸಿತು. ಇನ್ನು ಒಂದು ತಿಂಗಳ ಒಳಗಾಗಿ ಕಾಮಗಾರಿ ಮುಗಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಡಿ.ಕೆ. ತಿಮ್ಮಪ್ಪ ಎಚ್ಚರಿಸಿದರು.
‘ಕಾವೇರಿ ನದಿ ಸೇರುತ್ತಿರುವ ತ್ಯಾಜ್ಯಕ್ಕೆ ಮೊದಲು ತಡೆ ನೀಡಬೇಕು. ಹಾಗಾಗಿ ಕೂಡಲೇ ಚಾಲನೆ ನೀಡಬೇಕು,’ ಎಂದು ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಯುಜಿಡಿ ಅಧಿಕಾರಿಗಳಿಗೆ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಉಮೇಶ್ ಚಂದ್ರ ವಿದ್ಯುತ್ ಸಂಪರ್ಕ ಆದ ಕೂಡಲೇ ಯುಜಿಡಿ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದರು.
ಪಟ್ಟಣದಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆ ಆಗುತ್ತಿರುವ ಬಗ್ಗೆ ಜೆಡಿಎಸ್‌ನ ಸುರಯ್ಯಾಭಾನು ವಿಷಯ ಪ್ರಸ್ತಾಪಿಸಿದರು. ಸರ್ಕಾರಿ ಆಸ್ಪತ್ರೆ ಬಳಿ ಆರಂಭವಾಗಿರುವ ಮಾಲ್‌ನಿಂದಾಗಿ ಈ ಭಾಗದಲ್ಲಿ ವಾಹನ ದಟ್ಟಣೆ, ಪಾರ್ಕಿಂಗ್ ಸಮಸ್ಯೆ ಆಗುತ್ತಿದ್ದು, ಈ ಮಾಲ್ ಮುಚ್ಚಿಸಿ ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಆ ಮಾಲ್‌ಗೆ ಪುರಸಭೆಯಿಂದ ಎನ್‌ಒಸಿ ಕೊಟ್ಟಿಲ್ಲ. ಪರವಾನಗಿಯೂ ಇಲ್ಲ ಎಂದು ಮಾಹಿತಿ ನೀಡಿದರು. ‘ಹಾಗಾದರೆ ಆ ಮಾಲ್ ತೆರೆಯಲು ಹೇಗೆ ಅವಕಾಶ ಕೊಟ್ಟಿದ್ದೀರಿ ? ಕೂಡಲೇ ಮುಚ್ಚಿಸಿ,’ ಎಂದು ಬಹುತೇಕ ಸದಸ್ಯರು ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಡಿ.ಕೆ. ತಿಮ್ಮಪ್ಪ, ‘ತಪ್ಪು ಮಾಡಿದವರಿಗೆ ತಿದ್ದಿಕೊಳ್ಳಲು ಒಮ್ಮೆ ಅವಕಾಶ ಕೊಡಿ, ನಂತರ ಕ್ರಮ ತೆಗೆದುಕೊಳ್ಳಿ’ ಎಂದು ಸಲಹೆ ನೀಡಿದರು.
ಪಟ್ಟಣದಲ್ಲಿ ಫುಟ್‌ಪಾತ್ ಅತಿಕ್ರಮಣ ತೆರವು ಮಾಡುವಂತೆ ಸದಸ್ಯ ಶೇಖ್ ಕಲೀಮುಲ್ಲಾ ಒತ್ತಾಯಿಸಿದರು. ಇದಕ್ಕೆ ಕೆ.ಆರ್.ರೇಣುಕಾ, ವಿ.ಎಸ್. ಆನಂದಕುಮಾರ್ ಧ್ವನಿಗೂಡಿಸಿದರು. ಎಲ್ಲೆಂದರಲ್ಲಿ ವಾಹನ ನಿಲ್ಲಿಸಲಾಗುತ್ತಿದೆ. ಪಾದಚಾರಿಗಳು ನಡೆದಾಡಲು ಜಾಗವಿಲ್ಲದಂತಾಗಿದೆ. ಯಾವುದೇ ತಾರತಮ್ಯ ಮಾಡದೇ ನಿರ್ಧಾಕ್ಷಿಣ್ಯವಾಗಿ ಫುಟ್‌ಪಾತ್ ಒತ್ತುವರಿ ತೆರವು ಆಗಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಡೆಲ್ಟಾ ಯೋಜನೆ ಅಡಿಯಲ್ಲಿ ಬಿಎಂ ರಸ್ತೆ ಬದಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಸಂದರ್ಭ ಎಂಜಿನಿಯರಿಂಗ್ ಕಾಲೇಜಿನಿಂದ ಕೊಪ್ಪ ಗೇಟ್ ತನಕ ಫುಟ್‌ಪಾತ್ ನಿರ್ಮಿಸಲಾಗುವುದು. ಎಲ್ಲಾ ಒತ್ತುವರಿ ತೆರವು ಮಾಡಲಾಗುವುದು ಎಂದರು.
ಪಟ್ಟಣದಲ್ಲಿ ಸೆಸ್ಕ್ ಇಲಾಖೆಗೆ ಸಂಬಂಧಿಸಿದ ಅನೇಕ ವಿಷಯಗಳು ಸೆಸ್ಕ್ ಇಲಾಖೆ ಅಧಿಕಾರಿ ಸಮ್ಮುಖದಲ್ಲಿ ಚರ್ಚೆಗೆ ಬಂತು. ಈ ಸಂದರ್ಭ ಮಧ್ಯಪ್ರವೇಶಿಸಿದ ಅಧ್ಯಕ್ಷ ಜಯಲಕ್ಷ್ಮಿ ಪಟ್ಟಣದಲ್ಲಿ ವಿದ್ಯುತ್ ಸಂಬಂಧಿ ಸಮಸ್ಯೆ ಬಗೆಹರಿಸಲು ಶಾಸಕರ ನೇತೃತ್ವದಲ್ಲಿ ಸದ್ಯದಲ್ಲೇ ಸಭೆ ಕರೆಯಲಾಗುವುದು ಎಂದರು. ಇದೇ ಮಾದರಿಯಲ್ಲಿ ಕಾನೂನು ಮತ್ತು ಸಂಚಾರಿ ವ್ಯವಸ್ಥೆ ಬಗ್ಗೆ ಚರ್ಚಿಸಲು ಪೊಲೀಸರೊಂದಿಗೆ ಪ್ರತ್ಯೇಕ ಸಭೆ ನಡೆಸಲು ಕೂಡ ಸದಸ್ಯರು ಸಲಹೆ ಮಾಡಿದರು.
ಇತ್ತೀಚೆಗೆ ನಿಧನರಾದ ಉದ್ಯಮಿ ರತನ್ ಟಾಟಾ ಅವರಿಗೆ ಸಭೆಯ ಆರಂಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಉಪಾಧ್ಯಕ್ಷೆ ಪುಟ್ಟಲಕ್ಷ್ಮೀ, ಸದಸ್ಯರು ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
Back to top button
error: Content is protected !!