ರಾಜಕೀಯ

ಇದು ನ್ಯಾಯಸಮ್ಮತವಾದ ಚುನಾವಣೆ: ಶಾಸಕ‌ ಡಾ.ಮಂತರ್ ಗೌಡ

ಕುಶಾಲನಗರ, ಸೆ 25: ಕುಶಾಲನಗರ ಪಟ್ಟಣ‌ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರ ಸ್ಥಾನ ಕಾಂಗ್ರೆಸ್ ಪಾಲಾಗಿದೆ.
ಅಧ್ಯಕ್ಷರಾಗಿ ಜಯಲಕ್ಷ್ಮಿ ಚಂದ್ರು, ಉಪಾಧ್ಯಕ್ಷರಾಗಿ ಪುಟ್ಟ ಲಕ್ಷ್ಮಮ್ಮ ಅವಿರೋಧವಾಗಿ ಆಯ್ಕೆಯಾದರು.
ಸದರಿ ಚುನಾವಣೆ ಕಾನೂನುಬಾಹಿರವಾಗಿದೆ ಎಂದು ಆರೋಪಿಸಿ ಬಿಜೆಪಿಗರು ಚುನಾವಣೆಗೆ ಬಹಿಷ್ಕರಿಸಿದ‌ ಕಾರಣ ಅವಿರೋಧ ಆಯ್ಕೆ ನಡೆದಿದೆ.
ಅಧ್ಯಕ್ಷೆ ಸ್ಥಾನದ ಅಭ್ಯರ್ಥಿ ಪರ ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ‌ ಹಾಗೂ ಉಪಾಧ್ಯಕ್ಷ ಸ್ಥಾನ ಅಭ್ಯರ್ಥಿ ಪರ ಪುರಸಭೆ ಸದಸ್ಯ ಕಲೀಮುಲ್ಲಾ ಚುನಾವಣಾಧಿಕಾರಿ ತಹಸೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಕಾಂಗ್ರೆಸ್ ಮುಖಂಡರೊಂದಿಗೆ ಜೆಡಿಎಸ್ ಸದಸ್ಯರು ಇದ್ದರು.
ಪುರಸಭೆ ಕಛೇರಿ ಆವರಣಕ್ಕೆ ಆಗಮಿಸಿದ ಬಿಜೆಪಿ ಮುಖಂಡರು ಹಾಗೂ ಸದಸ್ಯರು ಚುನಾವಣೆ ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿ ಧಿಕ್ಕಾರ ಕೂಗಿ ಚುನಾವಣೆ ಬಹಿಷ್ಕರಿಸುವುದಾಗಿ ತಹಸೀಲ್ದಾರ್ ಗೆ ಪತ್ರ ಸಲ್ಲಿಸಿದರು.
ನಿಗದಿತ ಅವಧಿಯ ನಂತರ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ ಬಗ್ಗೆ ಚುನಾವಣಾಧಿಕಾರಿ ಘೋಷಣೆ ಮಾಡಿದರು.
ನಂತರ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಜೆಡಿಎಸ್ ಸದಸ್ಯರುಗಳು ಪಟ್ಟಣದಲ್ಲಿ ವಿಜಯೋತ್ಸವ ಆಚರಿಸಿದರು.
ವಿಜಯೋತ್ಸವದಲ್ಲಿ ಪಾಲ್ಗೊಂಡ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಮಾಲಾರ್ಪಣೆ ಮಾಡಿ ಶುಭ ಕೋರಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಸದಸ್ಯರ ಸಹಕಾರ, ಪಕ್ಷದ ಸದಸ್ಯರು ಹಾಗೂ ಮುಖಂಡರ ಪ್ರಯತ್ನದಿಂದ ನಮ್ಮ‌ ಪಕ್ಷದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಲ್ಲಿ ಮತ ಚಲಾವಣೆಯ ಅಗತ್ಯ ಬಾರದಿದ್ದರೂ ಕೂಡ ಈ ಒಗ್ಗಟ್ಟು ಪ್ರದರ್ಶನ ಮೂಲಕ ಪಟ್ಟಣದ ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಬಜೆಪಿಗರು ಚುನಾವಣೆ ಬಹಿಷ್ಕರಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನ್ಯಾಯಾಲಯದ ಸೂಚನೆಯಂತೆ, ನ್ಯಾಯಸಮ್ಮತವಾಗಿ ಚುನಾವಣೆ ಪ್ರಕ್ರಿಯೆ ನಡೆದಿದೆ. ಇಲ್ಲಿ ನಮ್ಮ ಪರ ಆದೇಶ ಬಂದ ಕಾರಣ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿದೆ. ನ್ಯಾಯ ಎಲ್ಲರಿಗೂ ಒಂದೇ. ನ್ಯಾಯಾಲಯದ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಸಿದ್ದರಾಮಯ್ಯ ವಿರುದ್ದ ಬಂದ ತೀರ್ಪಿಗ ಸಂಭ್ರಮಿಸುವ ಬಿಜೆಪಿಯವರು ಇಲ್ಲಿ ವಿರುದ್ದವಾಗಿ ವರ್ತಿಸುತ್ತಿದ್ದಾರೆ ಎಂದರು.
ಕಾನೂನಿನ ಚೌಕ್ಕಟ್ಟಿನಲ್ಲಿಯೇ ನಾಮನಿರ್ದೇಶನ ಪ್ರಕ್ರಿಯೆ ನಡೆದಿದೆ. ಮುಳ್ಳುಸೋಗೆ ಭಾಗಕ್ಕೆ ಐವರನ್ನು ನೇಮಿಸಲಾಗಿದ್ದು ಅಧಿಕಾರ ಕಳೆದುಕೊಂಡ ಇಬ್ಬರಿಗೆ ಹೆಚ್ಚುವರಿ ಸೇರ್ಪಡೆ ಮಾಡಲಾಗಿದೆ. ಕಾನೂನಿನಲ್ಲಿದ್ದ ಅವಕಾಶದಂತೆ ನಾವು ಮಾಡಿದ್ದೇವೆ ಎಂದರು.
ಈ ಸಂದರ್ಭ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್,ಪುರಸಭೆ ಸದಸ್ಯರಾದ ಎಂ.ಕೆ.ದಿನೇಶ್, ಜಯಲಕ್ಷ್ಮಮ್ಮ ನಂಜುಂಡಸ್ವಾಮಿ, ಜೆಡಿಎಸ್ ಸದಸ್ಯರಾದ ಜಗದೀಶ್, ಸುರಯ್ಯಭಾನು, ಆನಂದಕುಮಾರ್, ಸುರೇಶ್, ನಾಮನಿರ್ದೇಶಿತ ಸದಸ್ಯರಾದ ಶಿವಶಂಕರ್, ಜಗದೀಶ್, ನವೀನ್, ಹರೀಶ್, ಪ್ರಕಾಶ್, ಪದ್ಮಾ, ಖಾದರ್, ಕುಡಾ ಸದಸ್ಯ ಕಿರಣ್ ಸೇರಿದಂತೆ ಪ್ರಮುಖರು, ಕಾರ್ಯಕರ್ತರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!