ಕಾರ್ಯಕ್ರಮ

ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು: ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಕೆ.ಕುಮಾರ್

ಪಿರಿಯಾಪಟ್ಟಣ, ಸೆ 17: ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವವಾಗಿದ್ದು, ಇವರ ಶಿಸ್ತು ಮತ್ತು ಸಮಯಪಾಲನೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಪಿರಿಯಾಪಟ್ಟಣ ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಕೆ.ಕುಮಾರ್ ತಿಳಿಸಿದರು.

ಪಟ್ಟಣದ ಒಳಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಸಕರ ಮಾದರಿ ಶಾಲೆಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಜಿಲ್ಲಾ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದಲ್ಲಿ ಬಹುತೇಕ ಎಲ್ಲಾ ಶಿಕ್ಷಕರೂ ಸಹ ಉತ್ತಮ ಶಿಕ್ಷಣ ನೀಡುವಲ್ಲಿ ಸದಾ ಜಾಗೃತರಾಗಿದ್ಧಾರೆ. ಆದರೆ, ಶಿಕ್ಷಣ ಇಲಾಖೆಯು ಕೆಲವು ಶಿಕ್ಷಕರಿಗೆ ಮಾತ್ರ ಉತ್ತಮ ಶಿಕ್ಷಕ ಪ್ರಶಸ್ತಿ ನೀಡುತ್ತಿದ್ದು, ಪ್ರಶಸ್ತಿ ಪಡೆದ ಶಿಕ್ಷಕರಷ್ಟೇ ಇರುವ ಎಲ್ಲಾ ಗೌರವ ವಿಶ್ವಾಸ ಬೇರೆ ಶಿಕ್ಷಕರ ಮೇಲೂ ಸಹ ಸದಾ ಇರುತ್ತದೆ ತಾಲೂಕಿನ ಜಿಲ್ಲಾ ಮಟ್ಟದಲ್ಲಿ ಪಿರಿಯಾಪಟ್ಟಣ ತಾಲೂಕಿನ ಮಹಾದೇವಮ್ಮ, ಜಯಲಕ್ಷ್ಮಿ ಹಾಗೂ ಗಿರೀಶ್ ಎಂಬ ಮೂವರು ಶಿಕ್ಷಕರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆಯುವ ಮೂಲಕ ತಾಲೂಕಿನ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿರುವುದು ಸಂತಸದ ಸಂಗತಿ, ಪ್ರಶಸ್ತಿ ಪಡೆದ ಎಲ್ಲಾ ಶಿಕ್ಷಕರು ತಾಲ್ಲೂಕಿಗೆ ವಿಶೇಷ ಗೌರವವನ್ನು ತಂದುಕೊಟ್ಟಿದ್ಧಾರೆ. ಪ್ರತಿವರ್ಷವೂ ಸಹ ಇಂತಹ ಪ್ರಶಸ್ತಿ ಪಡೆಯುವ ಶಿಕ್ಷಕರ ಸಂಖ್ಯೆ ಮತ್ತಷ್ಟು ಹೆಚ್ಚಬೇಕಿದೆ ಎಂದರು.
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದು ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನ ಸ್ವೀಕರಿಸಿದ ಮಹಾದೇವಮ್ಮ, ಜಯಲಕ್ಷ್ಮಮ್ಮ ಹಾಗೂ ಜವನಿಕುಪ್ಪೆ ಗಿರೀಶ್ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಕರ ಅನ್ನದಾತರು ಆದ್ದರಿಂದ ಶಿಕ್ಷಕರು ಮಕ್ಕಳಿಗೆ ವಂಚನೆ ಮಾಡಬಾರದು, ಈ ಪ್ರಶಸ್ತಿಗಳು ಕೇವಲ ನಮಗಷ್ಟೇ ಸೀಮಿತವಲ್ಲ ಇದು ಎಲ್ಲ ಶಿಕ್ಷಕರಿಗೂ ಸಂದ ಗೌರವವಾಗಿದೆ. ಪ್ರಶಸ್ತಿ ಶಿಕ್ಷಕರ ಜವಾಬ್ದಾರಿ ಹೆಚ್ಚಿಸುತ್ತದೆ ಹಾಗೂ ಉಳಿದ ಶಿಕ್ಷಕರಿಗೆ ಇದು ಸ್ಫೂರ್ತಿ ಮತ್ತು ಮಾದರಿಯಾಗಿರುತ್ತದೆ. ಪ್ರತಿಯೊಬ್ಬ ಶಿಕ್ಷಕನೂ ಸಹ ಸಮಾಜದ ಹಿತದೃಷ್ಠಿಯಿಂದ ಶಿಕ್ಷಣವನ್ನು ಸವಾಲಾಗಿ ಸ್ವೀಕರಿಸಿ ವಿದ್ಯಾರ್ಥಿಗಳ ಬೌದ್ಧಿಕ ಶಕ್ತಿಯನ್ನು ಹೆಚ್ಚಿಸಲು ಶ್ರಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಒಳಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಸಕರ ಮಾದರಿ ಶಾಲೆಯ ಮುಖ್ಯ ಶಿಕ್ಷಕ ಹೆಚ್.ಬಸವರಾಜು ರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಮಂಜುನಾಥ್ ಸಿಂಗ್, ಕಾರ್ಯದರ್ಶಿ ಗಿರೀಶ್, ಖಜಾಂಚಿ ಲವಕುಮಾರ್ ಸದಸ್ಯರಾದ ಹುಣಸೆ ಕುಪ್ಪೆ ಸ್ವಾಮಿ, ಮೇದರ್ ಬ್ಲಾಕ್ ಆನಂದ್, ನಿವೃತ್ತ ಸಂಚಾರಿ ನಿಯಂತ್ರಣಾಧಿಕಾರಿ ಪಾಪಣ್ಣ ನಾಯ್ಕ, ಶಾಲಾ ಶಿಕ್ಷಕರಾದ ಎಸ್.ಆರ್.ರಮೇಶ್, ಅಶೋಕ್, ಎಂ.ನಟರಾಜ್, ಮೇರಿ ಸ್ಟೆರ್ಲಾ, ವಿಂಧ್ಯಾ, ಪ್ರಗತಿ ಪರ ರೈತ ಚಂದ್ರಶೇಖರ್ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!