ಕಾರ್ಯಕ್ರಮ

ಸುತ್ತೂರು ಜಗದ್ಗುರು ಡಾ.ರಾಜೇಂದ್ರ ಶ್ರೀಗಳ ಜಯಂತಿ ಸರ್ಕಾರದ ಕಾರ್ಯಕ್ರಮವಾಗಲೀ

ಶರಣ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆಯಲ್ಲಿ ವಿ.ಪಿ.ಶಶಿಧರ್ ಆಶಯ

ಕುಶಾಲನಗರ, ಆ – 29 : ಮನುಕುಲದ ಒಳಿತಿಗೆ ವಚನ ಸಾಹಿತ್ಯದ ಮಹತ್ವ ಹಾಗೂ ಜಾಗೃತಿಯನ್ನು ಮೂಡಿಸುತ್ತಿರುವ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನವಾಗಿ ಸುತ್ತೂರು ಮಹಾಸಂಸ್ಥಾನದ 23 ನೇ ಜಗದ್ಗುರು ಡಾ.ರಾಜೇಂದ್ರ ಸ್ವಾಮೀಜಿ ಜನ್ಮದಿನಾಚರಣೆಯನ್ನು ಆಚರಿಸುತ್ತಿರುವುದರಿಂದ ಇದು ಸರ್ಕಾರವೇ ಆಚರಿಸುವಂತಾಗಬೇಕೆಂದು ಚಿಂತಕರೂ, ವಾಗ್ಮಿಗಳೂ ಆದಂತಹ ಶರಣ ವಿ.ಪಿ.ಶಶಿಧರ್ ಜಿಲ್ಲಾಡಳಿತವನ್ನು ಆಗ್ರಹಿಸಿದರು.

ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುತ್ತೂರು ಮಠದ 23 ನೇ ಜಗದ್ಗುರು ಡಾ.ರಾಜೇಂದ್ರ ಸ್ವಾಮೀಜಿಯವರ 109 ನೇ ಪುಣ್ಯಸ್ಮರಣೆ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಜನಸಾಮಾನ್ಯರ ಬದುಕು ಸಂಕೀರ್ಣವಾಗಿದ್ದಂತಹ ಕಾಲಘಟ್ಟದಲ್ಲಿ ಹೊರ ಬಂದಂತಹ ವಚನಗಳು ಹಾಗೂ ಹನ್ನೆರಡನೇ ಶತಮಾನದ ಶರಣರ ಚಿಂತನೆಗಳು ಮನುಷ್ಯರ ಉತ್ತಮ ಬದುಕಿಗೆ ಸಿಕ್ಕಂತಹ ಮುತ್ತು ರತ್ನಗಳು. ಮೂಢನಂಬಿಕೆ, ಕಂದಾಚಾರ, ಬಡವ – ಬಲ್ಲಿದ, ಮೇಲು – ಕೀಳು ಬೇಧಗಳು ಜನಸಾಮಾನ್ಯರ ಜೀವ ಹಿಂಡುತ್ತಿದ್ದ ಕಾಲದಲ್ಲಿ ಬಸವಾದಿ ಶರಣರ ವಚನಗಳು ಮನುಷ್ಯನಿಗೆ ಲೌಕಿಕ ಜೀವನ ದರ್ಶನ ಗೈದ ಮಾಣಿಕ್ಯಗಳು ಎಂದು ಶಶಿಧರ್ ಬಣ್ಣಿಸಿದರು.

ಪ್ರತಿಯೊಬ್ಬರು ವಚನಗಳನ್ನು ಓದಿ ಅರ್ಥೈಸಿಕೊಂಡರೆ ಸಮಾಜದಲ್ಲಿ

ಉದ್ವಿಘ್ನತೆ ಹಾಗೂ ಪ್ರಕ್ಷುಬ್ಧತೆಯ ವಾತಾವರಣವೇ ಘಟಿಸುವುದಿಲ್ಲ. ನಾಡು ಕಂಡಂತಹ
ಶ್ರೇಷ್ಠ ಚಿಂತಕ ಡಾ.ಕಲ್ಬುರ್ಗಿಯವರ ವಚನ ಸಾಹಿತ್ಯ ಸಂಶೋಧನೆಯ ಪುಸ್ತಕಗಳು ಹೊರಬಂದಿದ್ದರೆ ವಚನ ಸಾಹಿತ್ಯದ ಹೊಳಹು ಮತ್ತಷ್ಟು ಹೆಚ್ಚುತ್ತಿತ್ತು.
ಸಮರಸದ ಬಾವನೆಗಳಿಂದ ಸಾಮಾಜಿಕವಾದ ಸತ್ಯದರ್ಶನ ಕಲ್ಬುರ್ಗಿಯವರ ಗ್ರಂಥಗಳಲ್ಲಿ ಅಡಕವಾಗಿದ್ದವು ಎಂದು ಶಶಿಧರ್ ಬಣ್ಣಿಸಿದರು.
ತನ್ನತನ ಹಾಗೂ ತಾನು ಸಮಾಜದಲ್ಲಿ ಗೈದ ಅಪಾರ ಕೊಡುಗೆಗಳನ್ನು ನೆನೆಯದೇ ವಚನ ಸಾಹಿತ್ಯವನ್ನು ಸ್ಮರಿಸಿದ ಶ್ರೇಷ್ಠ ದಾರ್ಶನಿಕ ಡಾ.ರಾಜೇಂದ್ರ ಸ್ವಾಮೀಜಿಗಳ ಜಯಂತಿಯನ್ನು
ಸರಕಾರ ಸಾರ್ವಜನಿಕರನ್ನು ಒಳಗೊಂಡಂತೆ ವರ್ಷಂಪ್ರತೀ ಆಚರಿಸುವಂತಾಗಬೇಕು.
ಅಂದು ಅಂಬೇಡ್ಕರ್ ಕೂಡ ಶರಣ ಸಾಹಿತ್ಯವನ್ನು ಓದಿ ಅರ್ಥೈಸಿಕೊಂಡೇ ಸಂವಿಧಾನವನ್ನು ಬರೆದಿದ್ದರು.
ಹಾಗಾಗಿ ಎಲ್ಲರೂ ವಚನ ಸಾಹಿತ್ಯ ಓದಿಕೊಂಡು ಅದರಲ್ಲಿನ ತಿರುಳಿನಂತೆ ನಡೆದುಕೊಂಡಿದ್ದರೆ ಮೀಸಲಾತಿಯ ಅಗತ್ಯವೇ ಇರುತ್ತಿರಲಿಲ್ಲ.
ಬಸವಣ್ಣನಬರು ಬರೆದಿರುವ ಕಲಬೇಡ ಕೊಲಬೇಡ ಎಂಬ ಸಪ್ತಸೂತ್ರಗಳು ಮನುಷ್ಯನ ಅಂತರಂಗ ಹಾಗೂ ಬಹಿರಂಗ ಗಳೆರಡನ್ನು ಸ್ವಚ್ಛವಾಗಿಡುತ್ತವೆ.
ಹಾಗಾಗಿ
ಶರಣ ತತ್ವಗಳ ಬಗ್ಗೆ ಹೇಳದೆಯೇ ಅಳವಡಿಸಿಕೊಳ್ಳುವಂತಾಗಬೇಕು ಎಂದು ಶಶಿಧರ್ ಹೇಳಿದರು. ಸಾನಿಧ್ಯ ವಹಿಸಿದ್ದ ಕೊಡ್ಲಿಪೇಟೆ
ಕಿರಿಕೊಡ್ಲಿ ಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಮನುಷ್ಯನ ಆಯುಷ್ಯದ ಬಹುತೇಕ ಸಮಯ ನಿದ್ದೆಯಲ್ಲಿಯೇ ಕಳೆಯುತ್ತದೆ.
ಆದರೆ ಉಳಿವ ಅಲ್ಪ ಅವಧಿಯನ್ನು ಶರಣರ ತತ್ವಗಳು ಹಾಗೂ ಸಮಾಜಮುಖಿ ಚಿಂತನೆಗಳಿಗೆ ಬಳಸುವ ಮೂಲಕ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಸುತ್ತೂರು ಮಠದ 23 ನೇ ಜಗದ್ಗುರು
ಡಾ.ರಾಜೇಂದ್ರ ಸ್ವಾಮೀಜಿಯವರ ಅನ್ನ, ಅರಿವು, ಆರೋಗ್ಯ ಎಂಬ ತ್ರಿವಿಧ ದಾಸೋಹದ ಫಲವಾಗಿ ಇಡೀ ನಾಡು ಸಾಕಷ್ಟು ಸುಶಿಕ್ಷಿತವಾಗಿದೆ.
ಸಾವಿರ ವರ್ಷಗಳ ಪರಂಪರೆ ಇರುವ ಸುತ್ತೂರು ಮಠ ಇಂದು ಜಗದಗಲ
400 ಕ್ಕೂ ಹೆಚ್ಚಿನ ವಿದ್ಯಾಸಂಸ್ಥೆಗಳನ್ನು ತೆರೆದುಕೊಂಡು ಒಂದು ಆಡಳಿತ ಸರ್ಕಾರಕ್ಕಿಂತ ಹೆಚ್ಚಾಗಿ ಲಕ್ಷಾಂತರ ಮಂದಿಯ ಮನೆಗಳನ್ನು ಬೆಳಗಿದೆ.
ಹಾಗಾಗಿ ಇಡೀ ಮನುಕುಲಕ್ಕೆ ಶರಣರ ಚಿಂತನೆಗಳನ್ನು ಹರಡಲು 1986 ರಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತನ್ನು ಡಾ.ರಾಜೇಂದ್ರ ಶ್ರೀಗಳು ಆರಂಭಿಸಿದರು.
ಇದರ ಮೂಲಗುರಿಯೇ ಅಂತರಂಗ ಹಾಗೂ ಬಹಿರಂಗ ಶುದ್ದಿ ಎಂದು ಶ್ರೀಗಳು ವ್ಯಾಖ್ಯಾನಿಸಿದರು.
ಡಾ.ರಾಜೇಂದ್ರ ಶ್ರೀಗಳ ಜೀವನ ದರ್ಶನದ ಕುರಿತು ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾಧ್ಯಕ್ಷ ಹೆಚ್.ವಿ.ಶಿವಪ್ಪ ಹಾಗೂ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಕೆ.ಪ್ರಕಾಶ್ ಮಾತನಾಡಿದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕೋಷಾಧಿಕಾರಿ ಪರಮೇಶ್,
ಕುಶಾಲನಗರ ತಾಲ್ಲೂಕು ಕದಳಿ ವೇದಿಕೆ ಅಧ್ಯಕ್ಷೆ ಹೇಮಲತಾ ವಿರೂಪಾಕ್ಷ, ಮಾಜಿ ಅಧ್ಯಕ್ಷೆ ಲೇಖನಾ ಧರ್ಮೇಂದ್ರ ಇದ್ದರು.
ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತಾ ಶಿಕ್ಷಕ ಪುಟ್ಟರಾಜು ಅಲ್ಲಮಪ್ರಭುಗಳ ವಚನಗಳನ್ನು ಹಾಡಿದರು.
ಇದೇ ಸಂದರ್ಭ ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಅವರನ್ನು ಪರಿಷತ್ತು ವತಿಯಿಂದ ಗೌರವಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!