ಕುಶಾಲನಗರ, ಜು 04: ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಸೋಲಿಗ ಜನಾಂಗದವರು ಕುಟುಂಬಗಳಿಗೆ ತಿರುಗಾಡಲು ರಸ್ತೆಯೇ ಇಲ್ಲದೆ ಕಳೆದ 6 ದಶಕಗಳಿಂದ ಸರಕಾರದ ನಿರ್ಲಕ್ಷ್ಯಕ್ಕೆ ಒಳಗಾಗುವ ಶೋಚನೀಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿರುವ ಪ್ರಸಂಗ ಕಂಡುಬಂದಿದೆ. ತಿರುಗಾಡಲು ರಸ್ತೆ ಸೌಲಭ್ಯ ಒದಗಿಸಿಕೊಡುವಂತೆ ಒತ್ತಾಯಿಸಿ ಸಲ್ಲಿಸಿದ ಯಾವುದೇ ಮನವಿಗೆ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ಗ್ರಾಮಪಂಚಾಯತ್ ಅಧಿಕಾರಿಗಳು, ಜನಪ್ರತಿನಿಧಿಗಳು ಇದುವರೆಗೆ ತಿರುಗಿಯೂ ನೋಡಿಲ್ಲ.
ಇದು ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮಪಂಚಾಯತ್ ವ್ಯಾಪ್ತಿಯ ದೊಡ್ಡಹೊಸೂರು ಗ್ರಾಮದ ಸರ್ವೆ ನಂ 62ರಲ್ಲಿರುವ 16ನೇ ಸೈಟ್ ನಂ ಪ್ರದೇಶದಲ್ಲಿ ವಾಸವಿರುವ ಸೋಲಿಗ ಕುಟುಂಬಗಳ ಅಳಲಾಗಿದೆ.
ಇಲ್ಲಿ 15 ಕುಟುಂಬಗಳ 100 ಮಂದಿ ವಾಸವಾಗಿದ್ದು ಕೃಷಿಯನ್ನು ಅವಲಂಬಿಸಿದ್ದಾರೆ. ಇವರು ವಾಸವಿರುವ ಪ್ರದೇಶಕ್ಕೆ ತೆರಳಬೇಕಾದ ಸಂಪರ್ಕ ರಸ್ತೆಯಿಂದ 500 ಮೀಟರ್ ದೂರದಷ್ಟು ಖಾಸಗಿ ಜಮೀನಿನ ಮೇಲೆ ತೆರಳಬೇಕಿದೆ. ಈ ಮನೆಗಳಿಗೆ ಯಾವುದೇ ರಸ್ತೆಯಿಲ್ಲದ ಕಾರಣ ಖಾಸಗಿ ವ್ಯಕ್ತಿಗಳ ಜಮೀನಿನ ಮೇಲೆ ಹಾದುಹೋಗಬೇಕಿದೆ.
1965 ರಿಂದಲೂ ಕೂಡ ಇದೇ ಪರಿಸ್ಥಿತಿ ಇಲ್ಲಿ ಮುಂದುವರೆದುಕೊಂಡು ಬಂದಿದೆ ಎಂದು ಗ್ರಾಮದ ಹಿರಿಯರಾದ 80 ವರ್ಷದ ಚಿಕ್ಕಮ್ಮ ತಾವು ಅನುಭವಿಸಿದ ಸಂಕಷ್ಟವನ್ನು ವಿವರಿಸುತ್ತಾರೆ. ಒಂದು ತಲೆಮಾರು ಕಳೆದರೂ ಕೂಡ ಇದುವರೆಗೆ ಇವರ ಈ ಸಮಸ್ಯೆ ಬಗೆಹರಿದಿಲ್ಲ. ಸಂಪರ್ಕ ರಸ್ತೆ ಕೂಡ ಹದಗೆಟ್ಟಿದೆ. ಅಲ್ಲಿಂದ ಮನೆಗಳಿಗೆ ತೆರಳಲು ರಸ್ತೆಯೇ ಇಲ್ಲ ಎಂದು ಇಲ್ಲಿನ ನಿವಾಸಿಗಳಾದ ಗಣೇಶ್, ಮಂಜ, ರುದ್ರ, ಚಿಕ್ಕಮ್ಮ, ಬಸವರಾಜು, ಗಿಲನ್,
ಕವಿತಾ, ಸಾವಿತ್ರಿ, ಇಂದಿರಮ್ಮ, ಪ್ರೇಮ, ರವಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದೀಗ ನಡೆದಾಡಲು ಬಳಸುತ್ತಿದ್ದ ಜಮೀನಿನವರು ಸುತ್ತಲೂ ಬೇಲಿಯನ್ನು ನಿರ್ಮಿಸಿಕೊಂಡಿದ್ದಾರೆ. ಇದರಿಂದಾಗಿ ನಮಗೆ ರಸ್ತೆ ಸಂಪರ್ಕವೇ ಕಡಿತಗೊಂಡಿದೆ. ಒಂದು ತುಂಡು ಭೂಮಿಯನ್ನು ಕ್ರಮಕ್ಕೆ ಪಡೆದುಕೊಂಡಿರುವ ಕಾರಣ ಕಾಲ್ನಡಿಗೆ ಅವಕಾಶ ಕಲ್ಪಿಸಿದ್ದಾರೆ. ಲೀಸ್ ಅವಧಿ ಮುಕ್ತಾಯಗೊಂಡ ಬಳಿಕ ಸಂಪೂರ್ಣವಾಗಿ ರಸ್ತೆ ಬಂದ್ ಮಾಡುವ ಸಾಧ್ಯತೆಯಿರುವ ಕಾರಣ ಕೂಡಲೆ ನಮಗೆ ರಸ್ತೆ ವ್ಯವಸ್ಥೆ ಒದಗಿಸಿಕೊಡಬೇಕಿದೆ ಎಂದು ಇಲ್ಲಿನ ಯುವ ಮುಖಂಡ, ರಾಜ್ಯ ಸೋಲಿಗ ಅಭಿವೃದ್ಧಿ ಸಂಘದ ನಿರ್ದೇಶಕ ರಾಜೇಂದ್ರ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.
ಕೇವಲ ಕಾಲ್ನಡಿಗೆಗೆ ಮಾತ್ರ ಜಾಗವಿರುವ ಕಾರಣ ದ್ವಿಚಕ್ರ ವಾಹನ ಮಾತ್ರ ಬಳಸುವ ಅವಕಾಶವಿದೆ. ಶಾಲಾ ಮಕ್ಕಳಿಗೆ ಇದರಿಂದ ತೀವ್ರ ಅನಾನುಕೂಲ ಎದುರಾಗಿದೆ.
ಕೃಷಿಗೆ ಬೇಕಾದ ಗೊಬ್ಬರ ಮತ್ತಿತರ ಪರಿಕರಗಳನ್ನು ಹೊತ್ತುಕೊಂಡೆ ತರಬೇಕಿದೆ. ಕೃಷಿ ಫಸಲಿನ ಮೂಟೆಗಳನ್ನು ಹೊತ್ತುಕೊಂಡು ಜಮೀನು ದಾಟಿ ವಾಹನಗಳಿಗೆ ತುಂಬಿಸಿ ಕೊಂಡೊಯ್ಯಬೇಕಿದೆ. ತುರ್ತು ಪರಿಸ್ಥಿತಿ ಸಂದರ್ಭ ಗರ್ಭಿಣಿಯರು, ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಸಾಗಿಸುವುದೇ ದೊಡ್ಡ ಸಾಹಸದ ಕೆಲಸವಾಗಿದೆ.
ಖಾಸಗಿ ಜಮೀನಿನ ಮಾಲೀಕರನ್ನು ಕೂಡ ನಾವು ದೂಷಿಸುವಂತಿಲ್ಲ. ಆದ್ದರಿಂದ ಸಂಬಂಧಿಸಿದವರು ಆದಷ್ಟು ಬೇಗ ನಮ್ಮ ರಸ್ತೆ ಒದಗಿಸಿಕೊಡಲು ಮುಂದಾಗಬೇಕಿದೆ ಎಂದು ನಿವಾಸಿಗಳು ಅಗ್ರಹಿಸಿದ್ದಾರೆ.
Back to top button
error: Content is protected !!