ವಿರಾಜಪೇಟೆ, ಜು 02 : ಬಸವಾದಿ ಶರಣರು ರಚಿಸಿದ ವಚನಗಳನ್ನು ಸಂರಕ್ಷಿಸಿ ನವಪೀಳಿಗೆಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಾತಃ ಸ್ಮರಣೀಯ ಫಕೀರಪ್ಪ ಗುರಪ್ಪಾ ಹಳಕಟ್ಟಿ ವಚನ ಸಾಹಿತ್ಯದ ಅನರ್ಘ್ಯ ರತ್ನ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಷ್ಟ್ರಾಧ್ಯಕ್ಷ ಡಾ.ಸಿ.ಸೋಮಶೇಖರ್ ಹೇಳಿದರು.
ವಿರಾಜಪೇಟೆ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಘಟಕದ ವತಿಯಿಂದ ಬಾಳುಗೋಡು ಏಕಲವ್ಯ ವಸತಿ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಚನ ಸಾಹಿತ್ಯದ ಸಂರಕ್ಷಕ ಫ.ಗು.ಹಳಕಟ್ಟಿ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು ಬಸವಾದಿ ಶರಣರು ಹನ್ನೆರಡನೇ ಶತಮಾನದಲ್ಲಿ ತಾಳೆಗರಿಯಲ್ಲಿ ರಚಿಸಿದ ವಚನಗಳನ್ನು ಪರಿಶೋಧಿಸಿ ಜತನದಿಂದ ಕಾದಿಟ್ಟು ಅವುಗಳನ್ನು ಪುಸ್ತಕಗಳ ರೂಪದಲ್ಲಿ ಪ್ರಕಟಿಸಿ ಜನಮಾನಸದಲ್ಲಿ ಜಾಗೃತಿಗೊಳಿಸಿದ ಕೀರ್ತಿ ಫ.ಗು.ಹಳಕಟ್ಟಿ ಅವರಿಗೆ ಸಲ್ಲುತ್ತದೆ.
ಇಂದಿನ ಮಕ್ಕಳು ಜೀವಮಾನವಿಡಿ ನೆಮ್ಮದಿಯ ಬದುಕು ಕಟ್ಟಲು ವಚನಗಳ ಬಾಯಿ ಪಾಠ ಮಾಡಿ ಅವುಗಳ ಸಾರ ತಿಳಿಯಬೇಕು. ಇಂದಿನ ಮಕ್ಕಳು ಮೌಲ್ಯಗಳ ಉತ್ತರಾಧಿಕಾರಿಗಳಾಗಬೇಕೆ ಹೊರತು ಆಸ್ತಿಯ ವಾರಸುದಾರಿಕೆಯಲ್ಲ ಎಂದು ಡಾ.ಸೋಮಶೇಖರ್ ಹೇಳಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಶರಣರು ತಾಳೆಗರಿಯಲ್ಲಿ ರಚಿಸಿದ ವಚನ ಸಾಹಿತ್ಯದ ಮುಂದೆ ಇಸ್ಲಾಂ ಹಾಗೂ ಕ್ರೈಸ್ತ ಧರ್ಮಸಾರ ಕ್ಷೀಣವಾಗುತ್ತದೆ ಎಂದು ಮನಗಂಡ ಮಂಗಳೂರಿನ ಬ್ಲಾಸಂ ಮಿಷನ್ ಪ್ರಿಂಟಿಂಗ್ ಪ್ರೆಸ್ ನವರು ವಚನಗಳನ್ನು ಅಚ್ಚುಹಾಕಲು ಒಪ್ಪದ ಸಂದರ್ಭದಲ್ಲಿ ತನ್ನಲ್ಲಿದ್ದ ಮನೆ ಮಾರಿ ವಚನ ಸಾಹಿತ್ಯದ ಪುಸ್ತಕಗಳನ್ನು ಪ್ರಕಟಿಸಿ ಜನಮಾನಸಕ್ಕೆ ಭಿತ್ತಿದ ಫ.ಗು.ಹಳಕಟ್ಟಿ ಬಹು ದೊಡ್ಡ ಮಾಣಿಕ್ಯರಾಗಿದ್ದಾರೆ. ಆದ್ದರಿಂದ ಇಂದಿನ ವಿದ್ಯಾರ್ಥಿಗಳು ಕಲಬೇಡ ಕೊಲಬೇಡ ಎಂಬ ವಚನಗಳ ಸಪ್ತಸೂತ್ರಗಳನ್ನು ಅರಿತು ಶ್ರೇಷ್ಠ ವ್ಯಕ್ತಿತ್ವ ಹೊಂದಲು ಶ್ರೀಗಳು ಕರೆಕೊಟ್ಟರು.
ಶನಿವಾರಸಂತೆ ಬಳಿಯ ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಶರಣ ಚಳುವಳಿಯ ಅತೀ ಅಗ್ರಗಣ್ಯವಾದ ಭಕ್ತಿ, ಕಾಯಕ, ದಾಸೋಹ ಹಾಗೂ ಸಮಾನತೆಯ ಕುರಿತಾಗಿ ವಿಶ್ಲೇಷಿಸಿದರಲ್ಲದೇ ಭಗವಂತನು ಮನುಕುಲಕ್ಕೆ ಕೊಟ್ಟ ಗಾಳಿ, ನೀರು, ಮಣ್ಣನ್ನು ಅಪವಿತ್ರಗೊಳಿಸದೇ ಜೋಪಾನವಾಗಿಡಲು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಪ್ರಾಸ್ತಾವಿಕ ನುಡಿಗಳಾಡಿದರು.
ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಎ.ಆರ್.ಮಹದೇವಪ್ಪ ಮಾತನಾಡಿದರು.
ತುಮಕೂರಿನ ಶರಣ ಡಾ.ರಾಘವೇಂದ್ರ, ಡಾ.ಸುರೇಶ್, ಚಿದಾನಂದ, ಸರ್ವಮಂಗಳ ಸೋಮಶೇಖರ್, ಜಿಲ್ಲಾ ಶಸಾಪ ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕೋಶಾಧಿಕಾರಿ ಪರಮೇಶ್ ಇದ್ದರು.
ಬಾಳುಗೋಡು ವಸತಿ ಶಾಲೆಯ ಪ್ರಾಂಶುಪಾಲರೂ ಆದ ಪೊನ್ನಂಪೇಟೆ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ದಿಲನ್ ಮುತ್ತಣ್ಣ ಸ್ವಾಗತಿಸಿದರು.
ಕನ್ನಡ ಶಿಕ್ಷಕಿ ಶೃತಿ ನಿರೂಪಿಸಿದರು.
ಸುಜಾತ ವಂದಿಸಿದರು. ವಿದ್ಯಾರ್ಥಿಗಳಿಂದ ವಚನ ಗಾಯನ ನಡೆಯಿತು.
Back to top button
error: Content is protected !!