ಪ್ರತಿಭಟನೆ
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕುಶಾಲನಗರದಲ್ಲಿ ಬಿಜೆಪಿ ಪ್ರತಿಭಟನೆ
ಕುಶಾಲನಗರ, ಜೂ 20: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ರಾಜ್ಯ ಸರಕಾರದ ವಿರುದ್ದ ಕುಶಾಲನಗರ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು.
ಕುಶಾಲನಗರ ಗಣಪತಿ ದೇವಾಲಯ ಮುಂಭಾಗ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಕಾಂಗ್ರೆಸ್ ಸರಕಾರದ ವಿರುದ್ದ ಧಿಕ್ಕಾರ ಕೂಗಿದರು. ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆ ತಡೆ ನಡೆಸಿ ಆಕ್ರೋಷ ವ್ಯಕ್ತಪಡಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ನಿರಂತರವಾಗಿ ಬೆಲೆ ಏರಿಕೆ ಮಾಡುವ ಮೂಲಕ ಜನವಿರೋಧಿ ಸರಕಾರವಾಗಿ ರೂಪುಗೊಂಡಿದೆ. ಪಂಚಭಾಗ್ಯ ಹೆಸರಿನಲ್ಲಿ ಜನರಿಂದ ಕಿತ್ತು ಜನರಿಗೆ ಕೊಡುಗೆ ನೀಡುವ ಮೂಲಕ ಜನರಿಗೆ ಮೋಸ ಮಾಡುತ್ತಿದೆ. ಇದರಿಂದ ಜನತೆ ಬೇಸತ್ತಿದ್ದಾರೆ.ಇದಕ್ಕೆ ಲೋಕಸಭಾ ಚುನಾವಣಾ ಫಲಿತಾಂಶವೇ ಸಾಕ್ಷಿ. ಇದೀಗ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಿಸುವ ಮೂಲಕ ಇದನ್ನು ಅವಲಂಬಿಸಿರುವ ಇತರೆ ಕ್ಷೇತ್ರಗಳಿಗೆ ಕೂಡ ಹೊರೆ ಉಂಟಾಗಿದೆ. ರೈತರ ಕೃಷಿ ಚಟುವಟಿಕೆಗಳಿಗೆ ಕೂಡ ವಿದ್ಯುತ್ ಪೂರೈಸದೆ ಸತಾಯಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ನಿರಂತರವಾಗಿ ಹಳ್ಳಿಹಳ್ಳಿಗಳಲ್ಲಿ ಸರಕಾರದ ವಿರುದ್ದ ಬಿಜೆಪಿ ಪ್ರತಿಭಟನೆ ಹಮ್ಮಿಕೊಳ್ಳಲಿದೆ. ಕೂಡಲೆ ಸರಕಾರ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕಿದೆ ಎಂದರು.
ಕುಶಾಲನಗರ ಬಿಜೆಪಿ ಅಧ್ಯಕ್ಷ ಎಂ.ಎಂ.ಚರಣ್ ಮಾತನಾಡಿ, ಬಿಜೆಪಿ ಸರಕಾರವಿದ್ದಾಗ ಬೆಲೆ ಏರಿಕೆ ವಿರುದ್ದ ಆರೋಪಿಸಿದ್ದ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದೀಗ ರಾವೇ ಸ್ವತಃ ಬೆಲೆ ಏರಿಕೆಯಲ್ಲಿ ಮಗ್ನರಾಗಿದ್ದಾರೆ. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಮೂಲಕ ಕಾಂಗ್ರೆದ್ ಸರಕಾರ ಜನಸಾಮಾನ್ಯರು ಪರಿತಪಿಸುವಂತೆ ಮಾಡಿರುವುದು ಖಂಡನೀಯ. ಕೂಡಲೆ ಬೆಲೆ ಏರಿಕೆಗೆ ಕಡಿವಾಣ ಹಾಕಿ ಸಮರ್ಪಕವಾಗಿ ವಿದ್ಯುತ್ ಪೂರೈಸಲು ಕ್ರಮ ವಹಿಸಬೇಕಿದೆ ಎಂದರು.
ಮಂಡಲ ಬಿಜೆಪಿ ಅಧ್ಯಕ್ಷ ಗೌತಮ್ ಮಾತನಾಡಿ, ಬೆಲೆ ಏರಿಕೆಯಿಂದ ಮಧ್ಯಮ ಹಾಗೂ ಬಡ ವರ್ಗದ ಜನತೆಗೆ ಅನಾನುಕೂಲ ಉಂಟಾಗಿದೆ. ರಾಜ್ಯದ ಕಾಂಗ್ರೆಸ್ ಆಡಳಿತ ಆರ್ಥಿಕ ಸುವ್ಯವಸ್ಥೆ ಕಾಪಾಡಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆರ್.ಕೆ.ಚಂದ್ರ, ಪ್ರಧಾನ ಕಾರ್ಯದರ್ಶಿ ಅಮೃತ್ ರಾಜ್, ನಗರ ಪ್ರಧಾನ ಕಾರ್ಯದರ್ಶಿ ಮಧುಸೂದನ್, ಯುವ ಮೋರ್ಚಾ ಅಧ್ಯಕ್ಷ ರಾಮನಾಥನ್, ಪ್ರಧಾನ ಕಾರ್ಯದರ್ಶಿ ಸಚಿನ್, ಪುರಸಭೆ ಸದಸ್ಯ ಜೈವರ್ಧನ್ ಸೇರಿದಂತೆ ಮುಖಂಡರಾದ ಕೃಷ್ಣಪ್ಪ, ಪುಂಡರೀಕಾಕ್ಷ, ಗಣಿಪ್ರಸಾದ್, ಪ್ರವೀಣ್, ಚಂದ್ರಶೇಖರ್ ಹೇರೂರು, ಜಿ.ಎಲ್.ನಾಗರಾಜ್, ಸೋಮಶೇಖರ್, ಪ್ರಭಾಕರ್, ಮಹಿಳಾ ಘಟಕದ ಸರಳರಾಮಣ್ಣ, ಅನಿತಾ ಉತ್ತಪ್ಪ, ಗಂಗಮ್ಮ, ಶೋಭಾ, ಗೀತಾಂಜಲಿ ಮತ್ತಿತರರು ಇದ್ದರು.