ರಾಜಕೀಯ

ಕುಶಾಲನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಎಂಎಲ್ಸಿ ಡಾ.ಡಿ.ತಿಮ್ಮಯ್ಯ ಮತಯಾಚನೆ

ಕುಶಾಲನಗರ, ಏ 20: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಸಭೆ ಕುಶಾಲನಗರದ ಖಾಸಗಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಎಂ ಎಲ್ ಸಿ ಡಾ.ಡಿ.ತಿಮ್ಮಯ್ಯ ಮಾತನಾಡಿ, ದೇಶಕ್ಕೆ ಕಾಂಗ್ರೆಸ್ ಕೊಡುಗೆ ಅಪಾರವಿದೆ. ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನಗೈದವರು ಕಾಂಗ್ರೆಸಿಗರು. ಕಾಂಗ್ರೆಸ್ ಪಕ್ಷದ ಸುದೀರ್ಘ ಆಡಳಿತದಿಂದ ಇಂದು ದೇಶ ಸ್ವಾವಲಂಬಿಯಾಗಿ, ಸುಭದ್ರವಾಗಿದೆ. ಆದರೆ ಇಂದಿನ‌ ಮೋದಿ ಸರಕಾರ ಪೊಳ್ಳು ಭರವಸೆಯಲ್ಲಿ ತಮ್ಮ ಅಧಿಕಾರಾವಧಿ ಮುಗಿಸಿ ಜನರನ್ನು ಮೂರ್ಖರಾಗಿಸಿದೆ. ಬಿಜೆಪಿ ಪಕ್ಷ ಕೇವಲ ಉಳ್ಳವರ ಪರವಾದ ಪಕ್ಷ ಎಂದು ಆರೋಪಿಸಿದ ಅವರು, ರಾಜ್ಯದ ಕಾಂಗ್ರೆಸ್ ಸರಕಾರ ಪಂಚ ಗ್ಯಾರೆಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಇಡೀ ಪ್ರಪಂಚದಲ್ಲಿ ಎಲ್ಲೂ‌ ಇಲ್ಲದ ಕೊಡುಗೆ ನೀಡಿರುವುದು ಶ್ಲಾಘನೀಯ ಎಂದರು. ಭವಿಷ್ಯದಲ್ಲಿ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಕಾಂಗ್ರೆಸ್ ಬೆಂಬಲಿಸಿ ಮತ ನೀಡುವಂತೆ ಕರೆ ನೀಡಿದರು.

ಕಾಂಗ್ರೆಸ್ ಮುಖಂಡ ರಾಚಪ್ಪ ಮಾತನಾಡಿ,
ಕೊಡಗು-ಮೈಸೂರು ಕ್ಷೇತ್ರದಲ್ಲಿ ಸಂಚರಿಸಿ ಪ.ಜಾತಿ ಸಮುದಾಯದವರ ಕುಂದುಕೊರತೆ ಆಲಿಸಲು ಖುದ್ದು ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಎಲ್ಲೆಡೆ ಸಭೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಮುದಾಯದವರಿಗೆ ದೊರೆಯುತ್ತಿದ್ದ ಸೌಲಭ್ಯಗಳನ್ನು ಹಂತಹಂತವಾಗಿ ಕಡಿತಗೊಳಿಸಿದ ಬಿಜೆಪಿ ಪಕ್ಷ ಮೀಸಲಾತಿಗೆ ವಿರುದ್ದವಾಗಿದೆ. ಈ ಹಿನ್ನಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವುದು ಅಗತ್ಯವಿದೆ ಎಂದರು.

ಆದಿಜಾಂಬವ ಸಂಘದ ವಿಭಾಗೀಯ ಅಧ್ಯಕ್ಷ, ಕೆಪಿಸಿಸಿ ಎಸ್.ಸಿ.ಘಟಕದ ಸಂಚಾಲಕ ಎಡತೊರೆ ಎಂ.ನಿಂಗರಾಜು ಮಾತನಾಡಿ,
ಬಡವರ ಪರವಾಗಿರುವ ಕಾಂಗ್ರೆಸ್ ಪಕ್ಷ ಬೆಂಬಲಿಸುವ ಅನಿವಾರ್ಯತೆ ಇದೆ. ಕೇಂದ್ರದ ಬಿಜೆಪಿ ಸರಕಾರದಿಂದ ಜನಸಾಮಾನ್ಯರ ಜೀವನ ಅಧಃಪತನ‌ ಕಂಡಿದೆ. ಭರವಸೆಯ ಬದುಕಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಅಗತ್ಯವಿದೆ ಎಂದರು.

ಕುಶಾಲನಗರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪರ ಚಟುವಟಿಕೆಗಳಲ್ಲಿ ಕಾರ್ಮಿಕ ಘಟಕದ ಪಾತ್ರ ಹೆಚ್ಚಿನದಾಗಿದೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ತಿಳಿಸಿದರು.

ಕುಶಾಲನಗರ ಪುರಸಭಾ ನಾಮನಿರ್ದೇಶಿತ ಸದಸ್ಯ, ಕುಶಾಲನಗರ ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷ ಶಿವಶಂಕರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಕುಶಾಲನಗರ ಪುರಸಭೆ ಸದಸ್ಯರಾದ ಪುಟ್ಟಲಕ್ಷ್ಮಮ್ಮ, ಖಲೀಮುಲ್ಲಾ, ಪ್ರಕಾಶ್, ಪ.ಜಾತಿ ಸಮುದಾಯದ ಮುಖಂಡರಾದ ದಾಮೋದರ್, ಬೇಲೂರಯ್ಯ, ಸಣ್ಣಸ್ವಾಮಿ, ಪುಟ್ಟಪ್ಪ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!