ಕುಶಾಲನಗರ, ಜು 11:ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯಲ್ಲಿ ಕಾಡಾನೆಗಳು ಮತ್ತು ಕಾಡುಕೋಣಗಳ ಹಾವಳಿ ಮಿತಿಮೀರಿದ್ದು ಕೃಷಿ ಪ್ರದೇಶಗಳನ್ನು ಹಾನಿಗೊಳಿಸುತ್ತಿರುವ ಘಟನೆಗಳು ಮರುಕಳಿಸುತ್ತಿವೆ.
ಮೀನುಕೊಲ್ಲಿ ಅರಣ್ಯ ಪ್ರದೇಶದಿಂದ ಗ್ರಾಮಕ್ಕೆ ಲಗ್ಗೆಯಿಡುವ ಕಾಡಾನೆಯೊಂದು
ಚಿನ್ನೂರು ಮತ್ತು ದಾಸವಾಳ ಗ್ರಾಮಗಳಿಗೆ ದಾಳಿಯಿಡುವ ಕಾಡಾನೆ ತೋಟ ಹಾಗೂ ಕೃಷಿ ಭೂಮಿಯನ್ನು ಹಾಳು ಮಾಡುತ್ತಿವೆ.
ನಂಜರಾಯಪಟ್ಟಣ ಗ್ರಾಪಂ ಅಧ್ಯಕ್ಷರೂ ಆದ ಕೃಷಿಕ ಸಿ.ಎಲ್.ವಿಶ್ವ ಅವರ ಜಮೀನಿಗೆ ದಾಳಿ ನಡೆಸಿದ ಕಾಡಾನೆಯೊಂದು ಕಳೆದೊಂದು ವಾರದಿಂದ ನಿರಂತರವಾಗಿ ಉಪಟಳ ನೀಡುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಕಾಡಾನೆ ದಾಳಿಗೆ
ಕಾಫಿ, ಬಾಳೆ ಹಾಗೂ ಅಡಿಕೆ ಗಿಡಗಳು ನೆಲಕಚ್ಚಿವೆ. ಹಲಸು ಮತ್ತು ಕಿತ್ತಳೆ ಗಿಡಗಳ ಫಸಲನ್ನು ನಾಶಗೊಳಿಸಿ ಮನೆಯ ಸಮೀಪದ ಶೆಡ್ ನೊಳಗೆ ಹಂದಿಗಳಿಗೆ ತಂದಿಟ್ಟಿದ್ದ ತವಡು ಪುಡಿ ಯನ್ನು ಲಪಟಾಯಿಸಿ ಸ್ವಾಹ ಮಾಡಿರುವ ಕಾಡಾನೆ ಬಿತ್ತನೆಗೆ ಇರಿಸಿದ್ದ ಎರಡು ಮೂಟೆ ಬಿತ್ತನೆ ಭತ್ತವನ್ನು ಕೂಡ ತಿಂದು ಮುಗಿಸಿರುವುದು ಕಂಡುಬಂದಿದೆ. ನಾಟಿ ಮಾಡಿದ್ದ ಭತ್ತದ ಗದ್ದೆಗಳಲ್ಲಿ ಅಡ್ಡಾಡಿ ಗದ್ದೆಯನ್ನು ಹಾನಿಗೊಳಿಸಿದೆ.
ಕಾಡಾನೆ ನಿಯಂತ್ರಣಕ್ಕೆ ಅರಣ್ಯಕ್ಕೆ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕಿದೆ ಎಂದು ಆಗ್ರಹಿಸಿರುವ ಸಿ.ಎಲ್.ವಿಶ್ವ, ಆನೆ ಕಂದಕವನ್ನು ಸಮರ್ಪಕವಾಗಿ ಹೂಳೆತ್ತಬೇಕಿದೆ. ಹಾಂಗಿಂಗ್ ಫೆನ್ಸ್ ಗಳು ಕಾಡು ಪಾಲಾಗಿದೆ. ಇದರಿಂದಾಗಿ ಕಾಡಾನೆಗಳು ಸಲೀಸಾಗಿ ಕೃಷಿ ಭೂಮಿಯತ್ತ ಲಗ್ಗೆಯಿಟ್ಟು ಬೆಳೆ ಹಾನಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ರೇಡಿಯೋ ಕಾಲರ್ ಅಳವಡಿಸಿ ಸ್ಥಳಾಂತರ ಮಾಡಿದ್ದ ಕುಶ ಆನೆ ಮತ್ತೆ ಈ ಭಾಗಕ್ಕೆ ಆಗಮಿಸಿದ್ದು, ನಿರಂತರವಾಗಿ ಬೆಳೆ ಹಾನಿ ಮಾಡುತ್ತಿದೆ. ಇದರೊಂದಿಗೆ ಹೊಸ ಕಾಡಾನೆಯೊಂದು ಈ ಭಾಗದಲ್ಲಿ ನಿರಂತರ ಉಪಟಳ ನೀಡುತ್ತಿದೆ. ಬೆಳೆ ಹಾನಿ, ಜೀವಹಾನಿಗೆ ಪರಿಹಾರ ಒದಗಿಸುವುದು ಮಾತ್ರವಲ್ಲದೆ ಶಾಶ್ವತ ಪರಿಹಾರ ಕ್ರಮಕ್ಕೆ
ಜಿಲ್ಲೆಯ ಹೊಸ ಶಾಸಕದ್ವಯರು ಚಿಂತನೆ ಹರಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.
Back to top button
error: Content is protected !!