ಕಾರ್ಯಕ್ರಮ
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ
ಕುಶಾಲನಗರ ಏ 6: ರಕ್ತದಾನ ಮಾಡುವ ಮೂಲಕ ಒಂದು ಜೀವವನ್ನು ಬದುಕಿಸಲು ಸಹಾಯವಾಗಲಿದೆ ಎಂದು ಮಡಿಕೇರಿ ರಕ್ತ ನಿಧಿ ಕೇಂದ್ರ ಮುಖ್ಯಸ್ಥ ಡಾ.ಕರುಂಬಯ್ಯ ತಿಳಿಸಿದರು.
ಕುಶಾಲನಗರ ಹಾರಂಗಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್, ರೋವರ್ಸ್ ಮತ್ತು ರೇಂಜರ್ಸ್, ವಿದ್ಯಾರ್ಥಿ ಸಂಘ, ದೈಹಿಕ ಶಿಕ್ಷಣ ವಿಭಾಗ, ಎನ್‌ಎಸ್.ಎಸ್, ಹಳೇ ವಿದ್ಯಾರ್ಥಿಗಳ ಸಂಘ, ಪಿ.ಟಿ.ಎ, ಕುಶಾಲನಗರ ವಾಸವಿ ಯುವಜನ ಚಾರಿಟೇಬಲ್ ಟ್ರಸ್ಟ್ ಮತ್ತು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಯ ಸಹಭಾಗಿತ್ವದಲ್ಲಿ ಶನಿವಾರ ಕಾಲೇಜಿನ ಸಭಾಂಗದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ಇತ್ತಿಚಿನ ದಿನಗಳಲ್ಲಿ ರಕ್ತನಿಧಿ ಕೇಂದ್ರದಲ್ಲಿ ರಕ್ತದ ಕೊರತೆ ಇದೆ.ಇಂತಹ ಶಿಬಿರದ ಮೂಲಕ ರೋಗಿಗಳ ತುರ್ತು ಚಿಕಿತ್ಸೆಗೆ ಅವಕಾಶವಾಗಲಿದೆ.ಯುವ ಜನಾಂಗ ಕೆಟ್ಟ ಚಟಗಳಿಗೆ ದಾಸರಾಗದೇ ಒಳ್ಳೆಯ ಆಹಾರವನ್ನು ಸೇವಿಸಿ ಆರೋಗ್ಯವಂತರಾಗಿ ಇನ್ನೊಂದು ಜೀವವನ್ನು ಉಳಿಸುವ ಮಹತ್ಕಾರ್ಯದಲ್ಲಿ ಕೈ ಜೋಡಿಸಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಶಾಲನಗರ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಎಸ್.ಕೆ.ಸತೀಶ್, ರಕ್ತದಾನ ಮಹಾದಾನ.ಆರೋಗ್ಯ ವಂತ ವ್ಯಕ್ತಿಯು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹದು.ಕೆಲವರಿಗೆ ರಕ್ತ ದಾನ ಮಾಡುವ ವಿಚಾರದಲ್ಲಿ ಗೊಂದಲ ಮತ್ತು ಭಯವಿದೆ.ರಕ್ತ ನೀಡಿದ ಕೆಲವೇ ದಿನದಲ್ಲಿ ಪರಿಶುದ್ಧವಾದ ರಕ್ತ ಸೇರ್ಪಡೆಗೊಳ್ಳಲಿದೆ. ಮದ್ಯಪಾನ, ದೂಮಪಾನದಿಂದ ದೂರವಿದ್ದು ಆರೋಗ್ಯದ ಕಡೆ ಗಮನಹರಿಸಿ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಬಿ.ಎಂ.ಪ್ರವೀಣ್ ಕುಮಾರ್ ವಹಿಸಿದ್ದರು.
ಕುಶಾಲನಗರ ಎಂ.ಜಿ.ಎಂ ಪದವಿ ಕಾಲೇಜಿನ ಪ್ರಾಂಶುಪಾಲೆ ಟಿ.ಎ.ಲಿಖಿತ, ವಾಸವಿ ಯುವಜನ ಸಂಘದ ಅಧ್ಯಕ್ಷ ಕೆ.ಪ್ರವೀಣ್, ಕಾಲೇಜಿನ ವಿದ್ಯಾರ್ಥಿ ಸಂಘದ ಸಂಚಾಲಕ ಡಾ.ಬಿ.ಡಿ.ಹರ್ಷ, ಐ.ಕ್ಯೂ.ಎ.ಸಿ.ಸಂಚಾಲಕಿ ಕೆ.ರಶ್ಮಿ, ಕಾಲೇಜಿನ ಯುವ ರೆಡ್ ಕ್ರಾಸ್ ಸಂಸ್ಥೆ ಯ ಸಂಚಾಲಕ ರಮೇಶ್ ಚಂದ್ರ ಸೇರಿದಂತೆ ಇತರರು ಇದ್ದರು.
ಸಹ ಪ್ರಾದ್ಯಾಪಕರಾದ ಡಾ.ಬಿ.ಡಿ.ಹರ್ಷ, ಕೆ.ಪಿ.ಕುಸುಮ, ಉಪನ್ಯಾಸಕ ಎಸ್.ಎಂ.ನಟರಾಜು, ಗ್ರಂಥಪಾಲಕ ಮಹಾದೇವ ಅವರು ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕುಶಾಲನಗರ ಸರ್ಕಾರಿ ಪದವಿ ಕಾಲೇಜು, ಹಳೇ ವಿದ್ಯಾರ್ಥಿಗಳು, ಎಂ.ಜಿ.ಎಂ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ 40 ಮಂದಿ ರಕ್ತದಾನ ಮಾಡಿದರು.