ಪ್ರಕಟಣೆ

ಕೊಡಗು ವಿವಿ: ಪ್ರಥಮ ವರ್ಷದ ಸ್ನಾತಕ ಪದವಿ ವಿದ್ಯಾರ್ಥಿಗಳ ಪ್ರಥಮ ಸೆಮಿಸ್ಟರ್‌ನ ಫಲಿತಾಂಶ ಪ್ರಕಟ

ಕೊಡಗು ವಿಶ್ವವಿದ್ಯಾಲಯದ ಪ್ರಥಮ ವರ್ಷದ ಸ್ನಾತಕ ಪದವಿ ವಿದ್ಯಾರ್ಥಿಗಳ ಪ್ರಥಮ ಸೆಮಿಸ್ಟರ್‌ನ ಫಲಿತಾಂಶ ಪ್ರಕಟ

ಕುಶಾಲನಗರ ಮಾ 05: ಕೊಡಗು ವಿಶ್ವವಿದ್ಯಾಲಯದ ಘಟಕ ಮತ್ತು ಸಂಯೋಜಿತ ಮಹಾವಿದ್ಯಾಲಯಗಳಲ್ಲಿ 2023-24ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ಬಿಎ, ಬಿಕಾಂ, ಬಿಬಿಎ, ಬಿಸಿಎ ಮತ್ತು ಬಿಎಸ್ಸಿ ಪ್ರಥಮ ವರ್ಷದ ಸ್ನಾತಕ ವಿದ್ಯಾರ್ಥಿಗಳ ಪ್ರಥಮ ಸೆಮಿಸ್ಟರ್ ಪರೀಕ್ಷಾ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಗಿದಿದ್ದು ಮೊದಲ ಹಂತದಲ್ಲಿ ಬಿಕಾಂ, ಬಿಬಿಎ, ಬಿಸಿಎ ಮತ್ತು ಬಿಎಸ್ಸಿ ಪದವಿಗಳ ಫಲಿತಾಂಶವನ್ನು ದಿ:05.03.2024ರ ಮಂಗಳವಾರದಂದು ಪ್ರಕಟಿಸಲಾಗಿದೆ. ಎರಡನೇ ಹಂತದಲ್ಲಿ ಬಿಎ ಪದವಿಯ ಫಲಿತಾಂಶವನ್ನು ಸಹ ಅತೀ ಶೀಘ್ರವಾಗಿ ಪ್ರಕಟಿಸಲಾಗುತ್ತದೆ.

ಕೊಡಗು ವಿಶ್ವವಿದ್ಯಾಲಯದ ಪ್ರಥಮ ವರ್ಷದ ಸ್ನಾತಕ ವಿದ್ಯಾರ್ಥಿಗಳ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳು ದಿ:25.01.2024 ರಿಂದ ಆರಂಭಗೊಂಡು ಬಿಎ ಪದವಿಯ ಕೊನೆಯ ಪರೀಕ್ಷೆಯು ದಿ:04.03.2024 ರಂದು ಪೂರ್ಣಗೊಂಡಿದೆ. ಘಟಕ ಮಹಾವಿದ್ಯಾಲಯವಾಗಿರುವ ಮಡಿಕೇರಿಯ ಎಫ್‌ಎಂಕೆಎಂಸಿ ಕಾಲೇಜಿನಲ್ಲಿ ವ್ಯವಸ್ಥಿತವಾಗಿ ಮೌಲ್ಯಮಾಪನ ಕೇಂದ್ರವನ್ನು ಸಿದ್ಧಪಡಿಸಿಕೊಂಡು, ಜಿಲ್ಲೆಯ ವಿವಿಧ ಸ್ನಾತಕ ಪದವಿ ಕಾಲೇಜುಗಳ ವಿಷಯವಾರು ಮೌಲ್ಯಮಾಪಕರು ಬಹುಉತ್ಸಾಹದಿಂದ ಸಕ್ರಿಯವಾಗಿ ಭಾಗವಹಿಸಿ ಮೌಲ್ಯಮಾಪನ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಪ್ರಥಮ ವರ್ಷದ ಸ್ನಾತಕ ವಿದ್ಯಾರ್ಥಿಗಳ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳಿಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (UUCMS) ಮೂಲಕ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದ್ದು, ಸ್ನಾತಕ ಪದವಿ ವಿದ್ಯಾರ್ಥಿಗಳು ಪರೀಕ್ಷಾ ಫಲಿತಾಂಶವನ್ನು ಕೊಡಗು ವಿಶ್ವವಿದ್ಯಾಲಯದ ವೆಬ್‌ಸೈಟ್ kuk.karnataka.gov.in ಮುಖಾಂತರ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಮೂಲಕ ನೋಡಲು ಲಭ್ಯವಿದೆ. 2023-2024ನೇ ಶೈಕ್ಷಣಿಕ ಸಾಲಿನ ಪ್ರಥಮ ಸೆಮಿಸ್ಟರ್‌ನ ಪದವಿ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಿದ ರಾಜ್ಯದ ಮೊದಲ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ನಮ್ಮ ಕೊಡಗು ವಿಶ್ವವಿದ್ಯಾಲಯವು ಭಾಜನವಾಗಿದೆ.

ಇದೇ ಸಂದರ್ಭದಲ್ಲಿ ಸ್ನಾತಕ ಪದವಿ ಪರೀಕ್ಷಾ ಫಲಿತಾಂಶಗಳನ್ನು ಕುರಿತು ಮಾತನಾಡಿದ ಕೊಡಗು ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ. ಅಶೋಕ ಸಂ ಆಲೂರ ಅವರು, ಕರ್ನಾಟಕ ಸರ್ಕಾರವು 2022-23ನೇ ಸಾಲಿನಲ್ಲಿ ಕೊಡಗಿನಲ್ಲಿ ನೂತನವಾಗಿ ಕೊಡಗು ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಿ ದಿನಾಂಕ:28.04.2023 ರಂದು ಅದನ್ನು ಅಧಿಕೃತವಾಗಿ ಉದ್ಘಾಟನೆ ಮಾಡಿತ್ತು. ಕರ್ನಾಟಕದ ಘನತೆವೆತ್ತ ರಾಜ್ಯಪಾಲರು ಮತ್ತು ಕೊಡಗು ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆದ ಸನ್ಮಾನ್ಯ ಶ್ರೀ ಥಾವರ್ ಚಂದ್ ಗೆಹ್ಲೋಟ್‌ರವರು ಕೊಡಗು ವಿಶ್ವವಿದ್ಯಾಲಯದ ವೆಬ್‌ಸೈಟ್ kuk.karnataka.gov.in ಅನ್ನು 2023 ಮೇ 05 ರಂದು ರಾಜಭವನದಲ್ಲಿ ಅನಾವರಣಗೊಳಿಸಿದ್ದರು. ಕೊಡಗು ವಿಶ್ವವಿದ್ಯಾಲಯಕ್ಕೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (UGC) ತನ್ನ ಅಧಿನಿಯಮ 1956 ರ ಪ್ರಕರಣ 2 (ಎಫ್) ಅಡಿಯಲ್ಲಿ 2023 ರ ಜುಲೈ 25 ರಂದು ಮಾನ್ಯತೆಯನ್ನು ನೀಡಿ ಪ್ರಕಟಣೆ ಹೊರಡಿಸಿತ್ತು. ಯುಜಿಸಿ ಮಾನ್ಯತೆ ಸಿಕ್ಕಿರುವುದರಿಂದ ಯುಜಿಸಿ ಅಡಿಯಲ್ಲಿ ಬರುವಂತಹ ವಿವಿಧ ಪದವಿಗಳನ್ನು ನೀಡಲು ಕೊಡಗು ವಿಶ್ವವಿದ್ಯಾಲಯವು ಅಧಿಕೃತ ಮಾನ್ಯತೆ ಪಡೆದಕೊಂಡಿದೆ. ಮುಂದುವರೆದು, ಕೊಡಗು ವಿಶ್ವವಿದ್ಯಾಲಯವು ಘಟಕ ಮತ್ತು ಸಂಯೋಜಿತ ಮಹಾವಿದ್ಯಾಲಯಗಳಲ್ಲಿ 2023-24ನೇ ಶೈಕ್ಷಣಿಕ ಸಾಲಿನಲ್ಲಿ ಬಿಎ, ಬಿಕಾಂ, ಬಿಬಿಎ, ಬಿಸಿಎ ಮತ್ತು ಬಿಎಸ್ಸಿ ಪ್ರವೇಶಾತಿಗೆ ಅವಕಾಶವನ್ನು ಕಲ್ಪಿಸಿಕೊಟ್ಟಿತ್ತು. ಪ್ರಥಮ ವರ್ಷದ ಸ್ನಾತಕ ವಿದ್ಯಾರ್ಥಿಗಳ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳಲ್ಲಿ 1025 ಪುರುಷ ವಿದ್ಯಾರ್ಥಿಗಳು ಮತ್ತು 999 ಮಹಿಳಾ ವಿದ್ಯಾರ್ಥಿಗಳು ಸೇರಿ ಒಟ್ಟು 2024 ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆದಿದ್ದಾರೆ. ಈ ಚೊಚ್ಚಲ ಸ್ನಾತಕ ಪದವಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವುದು ಶ್ಲಾಘನೀಯವಾಗಿದ್ದು, ನಮ್ಮ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಹಾಗೂ ಸರ್ವತೋಮುಖ ಪ್ರಗತಿಗಾಗಿ ಇದು ಪೂರಕವಾಗಿದೆ ಎಂದು ತಿಳಿಸಿದರು.

ಕೊಡಗು ವಿಶ್ವವಿದ್ಯಾಲಯದ ಕುಲಸಚಿವರು (ಮೌಲ್ಯಮಾಪನ) ಆದ ಡಾ. ಸೀನಪ್ಪ ಅವರು ಮಾತನಾಡಿ, ನಮ್ಮ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದಂತಹ ವಿದ್ಯಾರ್ಥಿಗಳು ಭವಿಷ್ಯದಲ್ಲಿ ತಮ್ಮ ಉನ್ನತ ವ್ಯಾಸಂಗ ಮತ್ತು ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ತೊಡಕುಗಳು ಆಗಬಾರದು ಎಂಬ ಸದುದ್ದೇಶದಿಂದ ಮೌಲ್ಯಮಾಪನ ಪ್ರಕ್ರಿಯೆಗೆ ತ್ವರಿತ ಚಾಲನೆ ನೀಡಲಾಗಿತ್ತು. ಪರೀಕ್ಷೆಗಳು ಮುಗಿದ 20 ದಿನಗಳೊಳಗೆ ಫಲಿತಾಂಶವನ್ನು ಪ್ರಕಟಿಸಬೇಕು ಎಂಬ ಯುಜಿಸಿಯ ನಿರ್ದೇಶವಿದ್ದು ಅದರಂತೆಯೇ ನಮ್ಮ ಕೊಡಗು ವಿಶ್ವವಿದ್ಯಾಲಯವು ಪರೀಕ್ಷೆಗಳು ನಡೆದ ಕೇವಲ ಒಂದು ದಿನದೊಳಗೆ ಮೊದಲ ಹಂತದ ಫಲಿತಾಂಶವನ್ನು ಪ್ರಕಟಿಸುವಲ್ಲಿ ಸಫಲವಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕೊಡಗು ವಿಶ್ವವಿದ್ಯಾಲಯದ ಸ್ನಾತಕ ಪದವಿ ಪರೀಕ್ಷೆಗಳ ಸಂಯೋಜಕರಾದ ಪ್ರೊ. ರವಿಶಂಕರ್, ಪರೀಕ್ಷಾ ಮೇಲ್ವಿಚಾರಕರಾದ ಪ್ರೊ. ರಾಘವ್ ಹಾಗೂ ಉಪ ಮೇಲ್ವಿಚಾರಕರಾದ ಡಾ. ಶೈಲಶ್ರೀ ಹಾಗೂ ಕೊಡಗು ವಿಶ್ವವಿದ್ಯಾಲಯದ UUCMS ತಂಡ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!