ಶಿಕ್ಷಣ
ಹೆಬ್ಬಾಲೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ಗಮನ ಸೆಳೆದ ಮಕ್ಕಳ ವಿಜ್ಞಾನ ವಸ್ತು ಪ್ರದರ್ಶನ
ಕುಶಾಲನಗರ, ಫೆ.28: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ , ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಹಾಗೂ ಹೆಬ್ಬಾಲೆ ಕ್ಲಸ್ಟರ್ ಕೇಂದ್ರದ ಸಹಯೋಗದೊಂದಿಗೆ ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ
ಶಾಲೆಯ ವಿಜ್ಞಾನ ಸಂಘದ ವತಿಯಿಂದ ‘ವಿಕಸಿತ್ ಭಾರತ ನಿರ್ಮಾಣಕ್ಕಾಗಿ
ಸ್ಥಳೀಯ ತಂತ್ರಜ್ಞಾನಗಳು’ ಎಂಬ ಕೇಂದ್ರ ವಿಷಯದಡಿ
ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ಭೌತ, ರಸಾಯನ, ಜೀವಶಾಸ್ತ್ರ, ಗಣಿತ ಹಾಗೂ ಪರಿಸರಕ್ಕೆ ಸಂಬಂಧಿಸಿದಂತೆ ಸ್ವತಃ ತಾವೇ ತಯಾರಿಸಿ ಪ್ರದರ್ಶಿಸಿದ ವಿಜ್ಞಾನ ವಸ್ತು ಪ್ರದರ್ಶನ ಗಮನ ಸೆಳೆಯಿತು. ಭೌತಶಾಸ್ತ್ರದ ಖಗೋಳ ವಿಜ್ಞಾನ, ಸೌರವ್ಯೂಹ ವ್ಯವಸ್ಥೆ, ಜೀರ್ಣಾಂಗವ್ಯೂಹ, ಬಾಹ್ಯಾಕಾಶ ಸೇರಿದಂತೆ ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಚಿತ್ರಪಟದ ಮೂಲಕ
ಪ್ರದರ್ಶಿಸಿದ ವಿವಿಧ ಮಾದರಿಗಳು ಗಮನ ಸೆಳೆದವು. ವಿದ್ಯಾರ್ಥಿಗಳು ತಾವು ತಯಾರಿಸಿದ ವಿವಿಧ ಮಾದರಿಗಳ ಕುರಿತು ಪ್ರೇಕ್ಷಕರಿಗೆ ವಿವರಣೆ ನೀಡಿದರು.
ಭಾರತೀಯ ವಿಜ್ಞಾನಿಗಳ ಸಂಶೋಧನೆ ಮತ್ತು ಸಾಧನೆ ಕುರಿತು ಮಾಹಿತಿ ನೀಡಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷ
ಟಿ.ಜಿ.ಪ್ರೇಮಕುಮಾರ್ ,
ಜಾಗತಿಕ ವಿಜ್ಞಾನ ಕ್ಷೇತ್ರದ ಬೆಳವಣಿಗೆಗೆ ಭಾರತೀಯ ವಿಜ್ಞಾನಿಗಳ ಕೊಡುಗೆ ಅಪಾರವಾದುದ್ದು ಎಂದು ಬಣ್ಣಿಸಿದರು.
ವಿಜ್ಞಾನದ ವಿಸ್ಮಯಗಳು ನಮ್ಮ ಜಗತ್ತನ್ನು ಬದಲಿಸುವ ಸಾಮರ್ಥ್ಯ ಹೊಂದಿವೆ.
ವಿಜ್ಞಾನಿಗಳನ್ನು ಬೆಂಬಲಿಸಿ, ವೈಜ್ಞಾನಿಕ ಅನ್ವೇಷಣೆಯ ಜಗತ್ತನ್ನು ಅರಿಯಲು ಮಕ್ಕಳಿಗೆ ಸೂಕ್ತ ಅವಕಾಶ ಒದಗಿಸಿದರೆ ಅವರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಮೂಲಕ ಆವಿಷ್ಕಾರಗಳು ಮತ್ತು ಜ್ಞಾನ ಕೇಂದ್ರಿತ ಭವ್ಯ ಭವಿಷ್ಯ ನಿರ್ಮಿಸಲು ಸಾಧ್ಯವಿದೆ.ವಿದ್ಯಾರ್ಥಿಗಳು ಮೂಲ ವಿಜ್ಞಾನ ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಪ್ರೇಮಕುಮಾರ್
ಹೇಳಿದರು.
ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಪವಾಡಗಳ ಹಿಂದಿರುವ ವೈಜ್ಞಾನಿಕ ಸಂಗತಿಗಳ ಕುರಿತು ಮಾಹಿತಿ ನೀಡಿದ
ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಸದಸ್ಯ ಎಂ.ಎನ್.ವೆಂಕಟನಾಯಕ್ ಮಾತನಾಡಿ,ವಿಜ್ಞಾನ ಕಲಿಕೆಯಲ್ಲಿ ಕುತೂಹಲ ಮತ್ತು ಆಸಕ್ತಿ ಬೆಳೆಸಿಕೊಂಡು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಉದ್ಘಾಟನೆ ಸಂದರ್ಭದಲ್ಲಿ ತೆಂಗಿನ ಕಾಯಿಗೆ ಸೋಡಿಯಂ ಲೋಹ ಸೇರಿಸಿ ಅದಕ್ಕೆ ನೀರನ್ನು ಹಾಕುವ ಮೂಲಕ ತೆಂಗಿನ ಕಾಯಿಯಿಂದ ಬೆಂಕಿ ಉತ್ಪತ್ತಿ ಮಾಡುವ ಪ್ರಾತ್ಯಕ್ಷಿಕೆ ಮೂಲಕ ಪವಾಡಗಳ ಹಿಂದಿರುವ ನೈಜತೆ ಕುರಿತು ವೆಂಕಟನಾಯಕ್, ಮಕ್ಕಳಿಗೆ ಮಾಹಿತಿ ನೀಡಿದರು.
ಮಕ್ಕಳ ವಿಜ್ಞಾನ ವಸ್ತು ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ
ಸಿ.ಆರ್.ಪಿ., ಎಚ್.ಎಸ್.ಆದರ್ಶ್ ಮಾತನಾಡಿ,
ರಾಷ್ಟ್ರೀಯ ವಿಜ್ಞಾನ ದಿನವು ವಿದ್ಯಾರ್ಥಿ ಸಮುದಾಯ ಸೇರಿದಂತೆ ಭಾರತೀಯರಲ್ಲೂ ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸುವ ಮತ್ತು ಆಸಕ್ತಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದರು.
ಹಳೇಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಟಿ.ಆರ್.ರಮೇಶ್ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಹಾಗೂ ಕುತೂಹಲ ಬೆಳೆಸಿಕೊಂಡು ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಅಧ್ಯಯನ ಕೈಗೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯ ಶಿಕ್ಷಕ ಎಚ್.ಎಂ.ವೆಂಕಟೇಶ್ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನ ಕಲಿಕೆ ಜತೆಗೆ ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
ವಿಜ್ಞಾನ ದಿನದ ಮಹತ್ವದ ಕುರಿತು ಮಾತನಾಡಿದ ವಿಜ್ಞಾನ ಸಂಘದ ಉಸ್ತುವಾರಿ ಶಿಕ್ಷಕಿ ಕೆ.ಎಸ್.
ರಮ್ಯ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಚಿಂತನೆ ಹಾಗೂ ವಿಜ್ಞಾನ ಆವಿಷ್ಕಾರ ಕಂಡುಕೊಳ್ಳಲು ಉತ್ತಮ ವೇದಿಕೆ ಒದಗಿಸುತ್ತವೆ ಎಂದರು. ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ವೈಜ್ಞಾನಿಕ ಮನೋಭಾವನೆ ಬೆಳೆಸುವ ಕುರಿತಾದ *ಪ್ರತಿಜ್ಞಾ ವಿಧಿ* ಯನ್ನು ಟಿ.ಜಿ.ಪ್ರೇಮಕುಮಾರ್ ಬೋಧಿಸಿದರು. ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳುವುದಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ವಿದ್ಯಾರ್ಥಿಗಳಾದ ಅಕ್ಷಯ್, ಪವನ್,ಸುಶೀಲ್ ಕುಮಾರ್, ಮಾನಸ,ಸುಮಂತ್ ಮತ್ತು ಚಿಂತನ ಅವರು ಸರ್ ಸಿ.ವಿ.ರಾಮನ್ ಅವರ ವೈಜ್ಞಾನಿಕ ಕ್ಷೇತ್ರದ ಸಾಧನೆ ಕುರಿತು ಪ್ರಬಂಧ ಮಂಡಿಸಿದರು.
ವಿಜ್ಞಾನ ಪರಿಷತ್ತಿನ ಸದಸ್ಯ ಜಿ.ಶ್ರೀಹರ್ಷ, ಕಣಿವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಸ್.ಸಿ.ಕಸ್ತೂರಿ, ಶಾಲಾ ಶಿಕ್ಷಕರಾದ ಸಿ.ಎಸ್.ಜಾನಕಿ, ಸಿ.ಎಂ.ಬಬಿತ,ಎಚ್.ಬಿ.ಪುಷ್ಪಾವತಿ, ಭಾಗ್ಯಮತ್ತು ವಿದ್ಯಾರ್ಥಿಗಳು ಇದ್ದರು.