ಕುಶಾಲನಗರ, ಜ 13 : ಭಾರತೀಯ ಸಂಸ್ಕೃತಿ,ಕಲೆ,ಸಾಹಿತ್ಯವನ್ನು ಉಳಿಸಿ ಬೆಳೆಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಹೇಳಿದರು.
ಪಟ್ಟಣದ ಎಪಿಸಿಎಂಎಸ್ಸಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ನಾದಂತ ನಾಟ್ಯ ಮಯೂರಿ ನೃತ್ಯಾಲಯದ 3ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪಾಲಕರು ತಮ್ಮ ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ಕಲೆಗಳ ಮಹತ್ವವನ್ನು ತಿಳಿಸಿ, ಆ ದಿಶೆಯಲ್ಲಿ ಪ್ರೋತ್ಸಾಹ ನೀಡುವ ಮೂಲಕ ಅವರ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದರು.
ಇಂದಿನ ಯುವ ಜನಾಂಗವು ನಾಟ್ಯ, ಸಂಗೀತ, ವಿವಿಧ ವಾದನಗಳಲ್ಲಿ ಆಸಕ್ತಿ ಹೊಂದಿ, ಕಲಿಕೆಯಲ್ಲಿ ತೊಡಗಿಸಿಕೊಳ್ಳುತಿರುವುದು ತುಂಬಾ ಸಂತಸದ ವಿಚಾರವಾಗಿದ್ದು, ಈ ದಿಶೆಯಲ್ಲಿ ಯುವತಿಯರಷ್ಟೆ ಅಲ್ಲದೆ ಯುವಕರೂ ನಮ್ಮ ಭಾರತೀಯ ಸಂಸ್ಕೃತಿಯ ಕಲೆಗಳಲ್ಲಿ ಸಾಧನೆ ಮಾಡುವ ಮನಸ್ಸು ಹೊಂದಬೇಕು ಎಂದರು.
ಪ್ರತಿವರ್ಷ ಉದಯೋನ್ಮುಖ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ನಾದಂತ ನಾಟ್ಯಮಯೂರಿ ನೃತ್ಯಶಾಲೆ ಅನೇಕ ಬಗೆಯ ಪ್ರಯೋಗಾತ್ಮಕ ನೂತನ ಕಾರ್ಯಕ್ರಮ, ನೃತ್ಯರೂಪಕ ಪ್ರದರ್ಶನಗಳನ್ನು ಏರ್ಪಡಿಸುತ್ತಲೇ ಬಂದಿದೆ ಎಂದರು.
ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಮಾತನಾಡಿ,ಪ್ರತೀವರ್ಷದಂತೆ ಈ ವರ್ಷವೂ ವಾರ್ಷಿಕೋತ್ಸವವನ್ನು ಆಚರಿಸುವ ಮೂಲಕ ನಾದಂತ ನಾಟ್ಯ ಮಯೂರಿ ಶಾಲೆ ಎಲ್ಲ ವಿದ್ಯಾರ್ಥಿಗಳಿಗೆ ಒಂದು ವೇದಿಕೆಯನ್ನು ಒದಗಿಸಿ ಅವರಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣ ಮಾಡುತ್ತಿದೆ. ನಾಟ್ಯ ಶಾಲೆಯ ಸಂಸ್ಥಾಪಕಿ ವಿದುಷಿ ಮಂಜುಭಾರ್ಗವಿ ನೂರಾರು ಮಕ್ಕಳಿಗೆ ನಾಟ್ಯ-ಸಂಗೀತ-ಸಂಸ್ಕೃತಿ ಶಿಕ್ಷಣವನ್ನು ನೀಡಿ, ಬೆಳೆಸುತ್ತ ಮುನ್ನಡೆಯುತ್ತಿರುವುದು, ಕಲಾಸೇವೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟಿರುವುದು ಈಕೆಯ ವೈಶಿಷ್ಟ್ಯ ಎಂದರು.
ವಿದ್ವಾನ್ ಬಿ.ಸಿ.ಶಂಕರಯ್ಯ ಮಾತನಾಡಿ, ನಾಟ್ಯ ಶಾಲೆಯಲ್ಲಿ ಮಕ್ಕಳಿಗೆ ಸಂಗೀತ, ಭರತನಾಟ್ಯ ಕಲಿಸುವ ಮೂಲಕ ಅವರ ಭವಿಷ್ಯವನ್ನು ರೂಪಿಸುವುದರ ಜೊತೆಗೆ ಭಾರತೀಯ ಸಂಸ್ಕೃತಿಯ ಉಳಿಸಿ ಬೆಳೆಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ನಾದಂತ ನಾಟ್ಯ ಮಯೂರಿ ನೃತ್ಯಾಲಯದ ಸಂಸ್ಥಾಪಕಿ ವಿದುಷಿ ಬಿ.ಕೆ.ಮಂಜುಭಾರ್ಗವಿ ಅಧ್ಯಕ್ಷೆ ವಹಿಸಿದ್ದರು.ಪುರಸಭೆ ಸದಸ್ಯ ಎಂ.ಬಿ.ಸುರೇಶ್,ವೆಂಕಟೇಶ್ವರ ಬಡಾವಣೆ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಎಚ್.ಬಿ.ರಮೇಶ್,ಎಪಿಎಂಸಿ ಮಾಜಿ ಉಪಾಧ್ಯಕ್ಷ ರಘುಹೆಬ್ಬಾಲೆ,ಶಿಕ್ಷಕ ಜಯಕುಮಾರ್, ನೃತ್ಯಾಲಯದ ಕಾರ್ಯದರ್ಶಿ ಶಶಿಕುಮಾರ್ ಭಾಗವಹಿಸಿದ್ದರು. ಇದೇ ಸಂದರ್ಭ ವಿವಿಧ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಂತರ ನ್ಯತ್ಯಾಲಯದ ವಿದ್ಯಾರ್ಥಿಗಳು ಭರತನಾಟ್ಯ,ಸಮೂಹ ನೃತ್ಯಗಳನ್ನು ಪ್ರದರ್ಶಿಸಿದರು.
Back to top button
error: Content is protected !!