ಕುಶಾಲನಗರ ಜ 06: ರಾಮಮಂದಿರ ಉದ್ಘಾಟನೆ ಹಿನ್ನಲೆಯಲ್ಲಿ ಹಬ್ಬದ ಸಡಗರದಲ್ಲಿರುವ ಹಿಂದೂಗಳ ಮೇಲೆ ಕರ್ನಾಟಕದ ಕಾಂಗ್ರೆಸ್ ಸರಕಾರ ಗಧಾ ಪ್ರಹಾರ ಮಾಡಲು ಹೊರಟಿದೆ ಎಂದು ಅರೋಪಿಸಿ ಕುಶಾಲನಗರ ಮತ್ತು ಸೋಮವಾರಪೇಟೆ ತಾಲೂಕು ಹಿಂದೂ ಜಾಗರಣಾ ವೇದಿಕೆ ವತಿಯಿಂದ ಕುಶಾಲನಗರ ಡಿವೈಎಸ್ಪಿ ಕಛೇರಿಗೆ ಮುಂಭಾಗ ಪ್ರತಿಭಟನೆ ನಡೆಯಿತು.
ಹುಬ್ಬಳ್ಳಿಯಲ್ಲಿ ರಾಮಭಕ್ತನನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿದ ಪ್ರತಿಭಟನಾಕಾರರು ಕಾಂಗ್ರೆಸ್ ಸರಕಾರದ ವಿರುದ್ದ ಧಿಕ್ಕಾರ ಕೂಗಿದರು. ನಾನೂ ಕೂಡ ಕರಸೇವಕ, ನನ್ನನ್ನೂ ಬಂಧಿಸಿ ಎಂಬ ಘೋಷಣೆಗಳನ್ನು ಮೊಳಗಿಸಿದರು.
ಪೊಲೀಸ್ ಇಲಾಖೆ ರಾಜ್ಯ ಸರಕಾರದ ಕೈಗೊಂಬೆಯಂತೆ ವರ್ತಿಸದೆ ಕಾನೂನು ರೀತಿಯ ಕ್ರಮಕ್ಕೆ ಮುಂದಾಗಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಹ ಸಂಚಾಲಕ ಭೋಜೇಗೌಡ, ಹುಬ್ಬಳ್ಳಿಯಲ್ಲಿ ಕರಸೇವಕನನ್ನು ಬಂಧಿಸಿ ಜೈಲಿಗಟ್ಟಿರುವ ಹಿನ್ನಲೆಯಲ್ಲಿ ರಾಜ್ಯಾದ್ಯಂತ ತಾಲೂಕು ಕೇಂದ್ರಗಳಲ್ಲಿ ಡಿವೈಎಸ್ಪಿ ಕಛೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ನ ಹಲವು ಮುಖಂಡರು ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಚಿಕ್ಕಮಗಳೂರು ದತ್ತಪೀಠಕ್ಕೆ ಸಂಬಂಧಿಸಿದ ದಶಕಗಳ ಹಿಂದಿನ ಪ್ರಕರಣವನ್ನು ಕೆದಕುವ ಮೂಲಕ ಮತ್ತೊಮ್ಮೆ ತಾವು ಹಿಂದೂ ವಿರೋಧಿ ಎಂದು ಕಾಂಗ್ರೆಸ್ ಸರಕಾರ ಸಾಬೀತು ಮಾಡಿದೆ. ಗೋದ್ರಾ ಮಾದರಿ ಹತ್ಯಾಕಾಂಡದ ಹೇಳಿಕೆ ನೀಡಿರುವ
ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಅವರನ್ನು ಸೂಕ್ತ ತನಿಖೆಗೆ ಒಳಪಡಿಸಿ ಸತ್ಯಾಸತ್ಯತೆ ಹೊರತರಬೇಕಿದೆ. ಕರಸೇವಕರನ್ನು ಕ್ರಿಮಿನಲ್ ರೀತಿ ಕಾಣುವ ನಡೆಯನ್ನು ಸರಕಾರ ನಿಲ್ಲಿಸಬೇಕಿದೆ. ಹಿಂದೂ ಕಾರ್ಯಕರ್ತರನ್ನು ಕೆಣಕಿದ್ದೇ ಆದಲ್ಲಿ ಮುಂದೆ ಉಗ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಹಿಂಜಾವೆ ಸೋಮವಾರಪೇಟೆ ತಾಲೂಕು ಸಂಚಾಲಕ ವಿನುಕುಮಾರ್, ಕುಶಾಲನಗರ ತಾಲೂಕು ಸಂಚಾಲಕ ಎಲ್.ಹರೀಶ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಉಮೇಶ್, ಚಾಮೆರ ಪ್ರದೀಪ್, ತಾಲೂಕು ಸಹ ಸಂಚಾಲಕ ಹೇಮಂತ್ ಪೂಜಾರಿ, ಪ್ರಮುಖರಾದ ಪ್ರಜ್ವಲ್, ಪ್ರವೀಣ್, ಶೈಲೇಶ್, ಅವಿನಾಶ್, ಸುಮನ್, ಕರಸೇವಕರಾದ ಮನು, ಕೃಷ್ಣಪ್ಪ, ಬಿಜೆಪಿಯ ಅಮೃತ್ ರಾಜ್, ಉಮಾಶಂಕರ್, ಜಿ.ಎಲ್.ನಾಗರಾಜ್, ವೈಶಾಖ್, ಚಂದ್ರಶೇಖರ್ ಹೆರೂರು, ಚಂದ್ರಶೇಖರ್, ಪ್ರವೀಣ್, ಪ್ರದೀಪ್, ನವನೀತ್, ವಿ ಎಚ್ ಪಿ ಯ ಸಂತೋಷ್ ಮತ್ತಿತರರು ಇದ್ದರು.
Back to top button
error: Content is protected !!