ಕುಶಾಲನಗರ, ನ 20: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಮಡಿಕೇರಿ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಸಹಕಾರ ಇಲಾಖೆ, ಕುಶಾಲನಗರ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೇತೃತ್ವದಲ್ಲಿ ಹಾಗೂ ಸ್ಥಳೀಯ ಸಹಕಾರ ಸಂಘಗಳ ಸಹಯೋಗದೊಂದಿಗೆ
70 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಜಿಲ್ಲಾಮಟ್ಟದ ಸಮಾರೋಪ ಸಮಾರಂಭದ ಅಂಗವಾಗಿ ‘ಸಹಕಾರ ಶಿಕ್ಷಣ, ತರಬೇತಿಯ ಪರಿಷ್ಕರಣೆ’ ದಿನಾಚರಣೆ ಕುಶಾಲನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ರೈತ ಸಹಕಾರ ಭವನದಲ್ಲಿ ನಡೆದ
ಕಾರ್ಯಕ್ರಮ ಉದ್ಘಾಟಿಸಿ
ಸಮಾರೋಪ ಭಾಷಣ ಮಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ.ಮನುಮುತ್ತಪ್ಪ, ಮುಂದಿನ ದಿನಗಳಲ್ಲಿ ಭಾರತದ ಆರ್ಥಿಕತೆ 5 ಟ್ರಿಲಿಯನ್ ಗೆ ತಲುಪಬೇಕೆನ್ನುವ ಕೇಂದ್ರದ ಉದ್ದೇಶದ ಸಂದೇಶದಂತೆ ಸಹಕಾರ ಸಪ್ತಾಹದ ಮೂಲಕ ಚಳುವಳಿ ಹಮ್ಮಿಕೊಳ್ಳಲಾಗಿದೆ. ಭಾರತ ದೇಶ ಮುಂದುವರಿದ ರಾಷ್ಟ್ರಗಳ ಪೈಕಿ ಸ್ಥಾನ ಪಡೆದಿದೆ. ನಮ್ಮನ್ನಾಳಿದ ಬ್ರಿಟೀಷ್ ದೇಶವನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿರುವುದು ಹೆಮ್ಮೆಯ ಸಂಗತಿ. ದೇಶದ ಅಭಿವೃದ್ಧಿಯಲ್ಲಿ ಸಹಕಾರ ಕ್ಷೇತ್ರದ ಕೊಡುಗೆಯೂ ಅಪಾರವಾಗಿದೆ ಎಂದರು.
ಗ್ರಾಮೀಣ ಪ್ರದೇಶಗಳು ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಸರ್ವಾಂಗೀಣ ಅಭಿವೃದ್ಧಿ ಹೊಂದಬೇಕಿದೆ. ಸಹಕಾರ ಸಂಘಗಳು ಆ ಭಾಗದ ಜನರ ಆರ್ಥಿಕ ಚಟುವಟಿಕೆಗಳ ಕೇಂದ್ರವಾಗಬೇಕು. ಆರ್ಥಿಕ ಸಹಕಾರ, ಪ್ರವಾಸೋದ್ಯಮ, ಸಾರಿಗೆ ವ್ಯವಸ್ಥೆ, ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳ ನಿರ್ಮಾಣಗಳ ಮೂಲಕ ಸಂಘಗಳು ಆರ್ಥಿಕವಾಗಿ ಸಬಲವಾಗಬೇಕು. ಈ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಕೇಂದ್ರ ಸರಕಾರ ಚಿಂತನೆ ಮಾಡಿದೆ.
ಸಹಕಾರ ಸಂಘಗಳ ಮತ್ತಷ್ಟು ಬಲಿಷ್ಠವಾಗಲು ಆದಾಯ ತೆರಿಗೆ ವಿನಾಯಿತಿಗೆ ಕೋರಿ ಮನವಿ ಸಲ್ಲಿಸಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಶಾಲನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಕೈಗಾರಿಕೋದ್ಯಮಿಗಳ ಮತ್ತು ವೃತ್ತಿನಿರತರ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ,
ಕೊಡಗು ಜಿಲ್ಲೆಯಲ್ಲಿಯೇ ಕುಶಾಲನಗರದಲ್ಲಿ ಹಲವು ಸಹಕಾರ ಸಂಘಗಳನ್ನು ಹೊಂದಿರುವ ಖ್ಯಾತಿ ಗಳಿಸಿದೆ. ಪ್ರತಿ ಸಹಕಾರ ಸಂಘಗಳಿಂದ ಸಾವಿರಾರು ಮಂದಿಗೆ ಅನುಕೂಲ ಒದಗಿದೆ. ನೂರಾರು ಕೋಟಿಯಷ್ಟು ಸಾಲ ಒದಗಿಸಿದೆ ಎಂದರು. ಇಂತಹ ಸಹಕಾರಿ ಕಾರ್ಯಕ್ರಮಗಳಲ್ಲಿ ಸಹಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಾಗ ಸಹಕಾರ ಕ್ಷೇತ್ರ ವಿವಿಧ ಮಜಲುಗಳು, ಮಾಹಿತಿ ಅರಿತುಕೊಳ್ಳಲು ಸಾಧ್ಯ ಎಂದರು. ಅಧಿಕಾರ ಹೊರತುಪಡಿಸಿ ಸೇವಾ ಮನೋಭಾವದಿಂದ ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದರು.
ಸಹಕಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕೊಡಗು ಜಿಪಂ ಮಾಜಿ ಸದಸ್ಯ ವಿ.ಪಿ.ಶಶಿಧರ್, ರೈತರು, ವ್ಯಾಪಾರಿಗಳ, ಉದ್ಯಮಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸರಕಾರದ ಯೋಜನೆಗಳಷ್ಟೇ ಸಹಕಾರ ಸಂಘಗಳು ಅನುಕೂಲ ಒದಗಿಸಿದೆ ಎಂದರು. ಲಾಭ, ಪ್ರತಿಷ್ಠೆ ಹೊರತುಪಡಿಸಿ ಸೇವೆಗೆ ಸಹಕಾರ ಕ್ಷೇತ್ರದ ಪ್ರತಿನಿಧಿಗಳು ಪ್ರಾತಿನಿಧ್ಯ ನೀಡಬೇಕಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಮಾತನಾಡಿ, ಸಹಕಾರಿಗಳಿಗೆ ಅಭಿವೃದ್ಧಿಯ ಚಿಂತನೆ, ಗುರಿ ಅಗತ್ಯ. ಸಮಾಜಕ್ಕೆ, ಮುಂದಿನ ಪೀಳಿಗೆಗೆ ಕೊಡುಗೆ ನೀಡುವಂತಹ ಯೋಜನೆಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ ಎಂದರು.
ದಿನದ ಮಹತ್ವದ ಕುರಿತು ಮಡಿಕೇರಿ ಕೆ.ಐ.ಸಿ.ಎಂ.ಪ್ರಾಂಶುಪಾಲೆ ಆರ್.ಎಸ್.ರೇಣುಕಾ ಮಾತನಾಡಿದರು.
ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಕನ್ನಂಡ ಸಂಪತ್, ಕುಶಾಲನಗರ ನಾಢಪ್ರಭು ಪತ್ತಿನ ಸಹಕಾರ ಸಂಘದ ಅದ್ಯಕ್ಷ ಎಂ.ಕೆ.ದಿನೇಶ್ ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ಗಣಪತಿ ದೇವಾಲಯದಿಂದ ರೈತ ಸಹಕಾರ ಭವನದವರೆಗೆ ಸಹಕಾರಿಗಳ ಮೆರವಣಿಗೆ ನಡೆಯಿತು. ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರಾದ ಎಂ.ಎನ್.ಕುಮಾರಪ್ಪ, ಎಸ್.ಎಲ್.ಶ್ರೀಪತಿ, ರವಿಕುಮಾರ್, ಎಂ.ಡಿ.ರಂಗಸ್ವಾಮಿ, ಶಾರದಾ ವಸಂತಕುಮಾರ್, ದೇಚಮ್ಮ ಹಾಗೂ ರಾಷ್ಟ್ರಮಟ್ಟದ ಕ್ರೀಡಾಪಟು ಪುನಿತ್ ಪರವಾಗಿ ಅವರ ಪೋಷಕರು, ಸರಿಗಮಪ ವಿಜೇತೆ ಪ್ರಗತಿ ಬಡಿಗೇರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಸಹಕಾರ ಸಂಘಗಳ ಉಪನಿಬಂಧಕ ಎಂ.ಎಸ್.ಕೃಷ್ಣಪ್ರಸಾದ್, ಸಹಾಯಕ ನಿಬಂಧಕ ಎಂ.ಇ.ಮೋಹನ್, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎನ್.ಎಂ.ಉಮೇಶ್ ಉತ್ತಪ್ಪ, ಪಿ.ಬಿ.ಯತೀಶ್, ವಿವಿಧ ಸಹಕಾರ ಸಂಘಗಳ ಅಧ್ಯಕ್ಷರಾದ ಸಲೀನ ಡಿಕುನ್ಹ, ಕೆ.ಎನ್.ಅಶೋಕ್, ಶಾಂತ ಶ್ರೀಪತಿ, ಪಿ.ಕೆ.ಜಗದೀಶ್, ಟಿ.ಬಿ.ಸತೀಶ್, ಎ.ಕೆ.ವೇಣು, ನಟರಾಜ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ವಿ.ಎಸ್.ಆನಂದಕುಮಾರ್ ಸೇರಿದಂತೆ ವಿವಿಧ ಸಂಘಗಳ ಆಡಳಿತ ಮಂಡಳಿ ಪದಾಧಿಕಾರಿಗಳು, ಅಧಿಕಾರಿ, ಸಿಬ್ಬಂದಿ ವರ್ಗ, ಸದಸ್ಯರು ಇದ್ದರು.
Back to top button
error: Content is protected !!