ಅರಣ್ಯ ವನ್ಯಜೀವಿ

ಪುಂಟಾನೆ ಹೆಡೆಮುರಿ ಕಟ್ಟಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ತಂಡ.

ನಾಗರಹೊಳೆಯಲ್ಲಿ ಸತತ ಮೂರು ದಿನಗಳ ಯಶಸ್ವಿ ಕಾಯಾಚರಣೆ

 

ರೈಲ್ವೆ ಬ್ಯಾರಿಕೇಡ್-ರೋಪ್ ಬ್ಯಾರಿಕೇಡ್‌ಗೆ ಹಾನಿ ಮಾಡಿ ಹಾಯಾಗಿ ಹೊರಬಂದು ಬೆಳೆ ನಷ್ಟ ಮಾಡಿ ಆತಂಕ ಸೃಷ್ಟಿಸಿದ್ದ ಪುಂಡಾನೆಯನ್ನು ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಸಪ್ತ ಸಾಕಾನೆಗಳ ತಂಡದ ಕಾರ್ಯಾಚರಣೆ ಮೂಲಕ ಹೆಡೆಮುರಿ ಕಟ್ಟಿ ಬಂಧಿಯಾಗಿಸುವಲ್ಲಿ ಅರಣ್ಯ ಸಿಬ್ಬಂದಿಗಳು ಕೊನೆಗೂ ಯಶಸ್ವಿಯಾಗಿದ್ದಾರೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವೀರನಹೊಸಳ್ಳಿ ವನ್ಯಜೀವಿ ವಲಯದ ಮಂಟಳ್ಳಿ ಶಾಖೆಯ ಗಡಿಭಾಗದ ರೈಲ್ವೇ ಬ್ಯಾರಿಕೇಡ್ ಹಾಗೂ ಸ್ಟೀಲ್ ರೋಫ್ ಬ್ಯಾರಿಕೇಡ್ ಅನ್ನೇ ಮುರಿದು ಹೊರ ದಾಟುತ್ತಿದ್ದ ಈ ಕಾಡಾನೆಯು ಸುತ್ತಮುತ್ತಲ ಗ್ರಾಮಗಳಲ್ಲಿ ಬೆಳೆತಿಂದು ತುಳಿದು ನಾಶಪಡಿಸುತ್ತಿತ್ತು. ರಾಜಾರೋಷವಾಗಿ ಎಲ್ಲೆಂದರಲ್ಲಿ ತಿರುಗುತ್ತಾ ಜನರಲ್ಲಿ ಭೀತಿ ಸೃಷ್ಟಿಸಿತ್ತು. ಈ ಕಾಡಾನೆ ಬಗ್ಗೆ ನಿಗಾ ಇರಿಸಿದ್ದರೂ ಸಹ ಚಳ್ಳೆಹಣ್ಣು ತಿನ್ನಿಸಿ ಹೊರಬಂದು ನಷ್ಟ ಬೆಳೆ ಮಾಡಿ ಮತ್ತೆ ಕಾಡು ಸೇರಿಕೊಳ್ಳುತ್ತಿತ್ತು. ಈ ಆನೆ ಉಪಟಳದ ಬಗ್ಗೆ ಹಲವು ವರ್ಷಗಳಿಂದಲೂ ಕಾಡಂಚಿನ ರೈತರು ದೂರು ನೀಡುತ್ತಲೇ ಇದ್ದರು. ಹೊರಬಂದವೇಳೆ ಕಾಡಿಗಟ್ಟುವ ಕೆಲಸವಾಗುತ್ತಿತ್ತು, ಮತ್ತೆ ಹೊರಬರುತ್ತಲೇ ಇತ್ತು.

ಜಾರ್‌ಗಲ್ ಬಳಿ ಸೆರೆ:
ವೀರನಹೊಸಹಳ್ಳಿಯ ಮಂಟಳ್ಳಿ ಶಾಖೆಯ ಜಾರ್‌ಗಲ್ ಬೀಟ್ ಅರಣ್ಯ ಪ್ರದೇಶದಲ್ಲಿ ಅಡ್ಡಾಡುತ್ತಾ, ರೋಪ್ ಬ್ಯಾರಿಕೇಡ್‌ನಿಂದ ಹೊರದಾಟಲು ಹೊಂಚುಹಾಕುತ್ತಿದ್ದ ವೇಳೆಯೇ ಈ ಪುಂಡಾನೆಯನ್ನು ಕಾರ್ಯಾಚರಣೆ ಮೂಲಕ ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿದು ಇದೀಗ ಕೊಡಗಿನ ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಈ ಬಾಗದಲ್ಲಿ ಮತ್ತೆರಡು ಪುಂಡಾನೆಗಳಿದ್ದು ಅವನ್ನು ಸಹ ಸೆರೆ ಹಿಡಿಯಲಾಗುವುದೆಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಹೆಡೆಮುರಿ ಕಟ್ಟಿದ ಕ್ಯಾಪ್ಟನ್ ಅಭಿಮನ್ಯು:
ಸೆರೆಯಾಗಿರುವ ಒಂಟಿ ಸಲಗವು ಸುಮಾರು ೩೫-೪೦ವರ್ಷ ಪ್ರಾಯದ ಕಟ್ಟುಮಸ್ತಾದ ಬಲಿಷ್ಟ ಆನೆಯಾಗಿದ್ದು, ಈ ಸಲಗನನ್ನು ಹಡೆಮುರಿಕಟ್ಟಲು ಕಂಡ ಕಾರ್ಯಾಚರಣೆಗಿಳಿದಿದ್ದ ಅಭಿಮನ್ಯು ನೇತೃತ್ವದ ಆನೆಗಳು ಅರವಳಿಕೆ ಚುಚ್ಚುಮದ್ದಿನಿಂದ ಜ್ಞಾನ ತಪ್ಪಿದ್ದ ಪುಂಡಾನೆಯು ಎಚ್ಚರಗೊಂಡು ತನ್ನ ಪ್ರತಾಪ ತೋರಲು ಮುಂದಾಗುತ್ತಿದ್ದಂತೆ ಕೆಲ ಕ್ಷಣ ಅವಕ್ಕಾಗಿ ನಿಂತಿದ್ದವಾದರೂ ಸಾವರಿಸಿಕೊಂಡು ಮತ್ತೆ ಕಾರ್ಯಾಚರಣೆ ನಡೆಸಿ ಸೆರೆಯಾಗಿಸಿದವು. ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಬಲಭೀಮ, ಮಹೇಂದ್ರ, ಮಹಾರಾಷ್ಟç ಭೀಮ್, ಅಶ್ವತ್ಥಾಮ, ಹರ್ಷ ಸಾಕಾನೆಗಳು ಹೆಡೆಮುರಿಕಟ್ಟಿ ಲಾರಿ ಹತ್ತಲು ನಿರಾಕರಿಸುತ್ತಿದ್ದ ಪುಂಡಾನೆಯನ್ನು ಸುಮಾರು ೪೦೦ಮೀ.ನಷ್ಟು ಎಳೆದು ತಂದು ಲಾರಿ ಹತ್ತಿಸಿ, ಸಾಕಾನೆ ಶಿಬಿರದಲ್ಲಿ ಕ್ರಾಲ್‌ಗೆ ಸೇರಿಸುವಲ್ಲಿ ಯಶಸ್ವಿಯಾದವು.
ನಾಗರಹೊಳೆ ಉದ್ಯಾನದ ಮುಖ್ಯಸ್ಥ ಹರ್ಷಕುಮಾರ್‌ಚಿಕ್ಕನರಗುಂದ, ಮಾರ್ಗದರ್ಶನದಲ್ಲಿ ಎಸಿಎಫ್ ದಯಾನಂದ್, ವೀರನಹೊಸಹಳ್ಳಿ ಆರ್.ಎಫ್.ಓ. ಅಭಿಷೇಕ್.ಪಿ.ಎಸ್, ನಾಗರಹೊಳೆ ಪಶುವೈದ್ಯಾಧಿಕಾರಿ ಡಾ.ರಮೇಶ್, ಡಿ.ಆರ್.ಎಫ್.ಓ ಚಂದ್ರೇಶ್, ದುಬಾರೆ ಸಾಕಾನೆ ಶಿಬಿರದ ಡಿಆರ್‌ಎಫ್‌ಓ ರಂಜನ್ ಸೇರಿದಂತೆ ೭೦ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಮೂರು ದಿನಗಳ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!