ಕಾರ್ಯಕ್ರಮ
ಕುಶಾಲನಗರ ಕಲಾಭವನದ ಕಸಾಪ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ
ಕುಶಾಲನಗರ ನ 1: ವರ್ಷದ 365 ದಿನವು ಕನ್ನಡವನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ ಎಂದು ಕುಶಾಲನಗರ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೆ.ಎಸ್.ನಾಗೇಶ್ ತಿಳಿಸಿದರು.
ಸುವರ್ಣ ಕರ್ನಾಟಕ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವವನ್ನು ನಗರದ ಕಲಾಭವನದ ಕಸಾಪ ಕಚೇರಿಯ ಆವರಣದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಬಹು ಭಾಷೆಗಳು ವಾಸಿಸುವ ಕನ್ನಡ ನೆಲದಲ್ಲಿ ಪ್ರತಿಯೊಬ್ಬರ ಮನಸ್ಸಿನಲ್ಲಿ ಕನ್ನಡ ಅಭಿಮಾನವನ್ನು ಉಳಿಸಿ ಬೆಳೆಸಬೇಕಾದ ಅಗತ್ಯವಿದೆ. ಆ ನಿಟ್ಟಿನಲ್ಲಿ ಕನ್ನಡದ ಸೂಗಡಿನ ಕಂಪನ್ನು ಎಲ್ಲೆಡೆ ಹರಡುವ ಕೆಲಸವಾಗಬೇಕು. ಮೈಸೂರು ರಾಜ್ಯವಾಗಿದ್ದ ಕರ್ನಾಟಕವು ಪ್ರತ್ಯೇಕ ರಾಜ್ಯವಾಗಿ ಇಂದಿಗೆ 50 ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ ಈ ಸುವರ್ಣ ಮಹೋತ್ಸವವನ್ನು ವರ್ಷವಿಡೀ ಆಚರಣೆ ಮಾಡುವ ನಿಟ್ಟಿನಲ್ಲಿ ವಿವಿಧ ಸಂಸ್ಕೃತಿಕ ಕಾರ್ಯಕ್ರಮವನ್ನು ಕನ್ನಡದ ಜಾಗೃತಿಯ ಕಾರ್ಯಕ್ರಮಗಳನ್ನಾಗಿ ರೂಪಿಸಿ ಕನ್ನಡವನ್ನು ಉಳಿಸಿ ಬೆಳೆಸಬೇಕು ಎಂದು ತಿಳಿಸಿದರು. ಕಸಾಪ ನಿಕಟಪೋರ್ವ ಅಧ್ಯಕ್ಷ ಎಂ.ಡಿ.ರಂಗಸ್ವಾಮಿ ಮಾತನಾಡಿದರು.
ಸೋಮವಾರಪೇಟೆ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್, ಕರವೇ ತಾಲೂಕು ಅಧ್ಯಕ್ಷ ನಾಗೇಗೌಡ, ಪರಿಷತ್ ನ ಕೋಶಾಧ್ಯಕ್ಷ ಕೆ.ವಿ.ಉಮೇಶ್, ಗೌರವ ಕಾರ್ಯದರ್ಶಿ ಶೈಲಾ, ನಾಗರಾಜ್, ಜಿಲ್ಲಾ ನಿರ್ದೇಶಕ ಕೆ.ಎನ್. ದೇವರಾಜು. ಪ್ರಮುಖರಾದ ವೆಂಕಟೇಶ್, ಡಿ.ವಿ.ರಾಜೇಶ್, ಸೋಮಣ್ಣ, ರತ್ನಾವತಿ, ಕಾಳಪ್ಪ, ಹೇಮಲತಾ, ಸಾವಿತ್ರಿ, ವಕೀಲ ಎಸ್.ಕೆ.ಮಂಜುನಾಥ್ ಸೇರಿದಂತೆ ಇನ್ನಿತರರು ಹಾಜರಿದ್ದರು.