ಕಾರ್ಯಕ್ರಮ

ಪದವಿ ಪೂರ್ವ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ ಅಸ್ತಿತ್ವಕ್ಕೆ

ಕುಶಾಲನಗರ, ಜು 24: ಕುಶಾಲನಗರದ ಸರಕಾರಿ ಪದವಿ ಪೂರ್ವ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಆಗಸ್ಟ್ 2 ರಂದು ಸಂಘದ ಉದ್ಘಾಟನಾ ಸಮಾರಂಭ ಶಾಲೆಯ ಆವರಣದಲ್ಲಿ ನಡೆಯಲಿದೆ ಎಂದು ಹಳೆಯ ವಿದ್ಯಾರ್ಥಿ ಟ್ರಸ್ಟ್ ನ ಗೌರವ ಅಧ್ಯಕ್ಷ ವಿ.ಎಸ್. ಆನಂದ್ ಕುಮಾರ್ ತಿಳಿಸಿದ್ದಾರೆ.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫ್ರೌಢಶಾಲೆ 1991 ರಲ್ಲಿ ಸ್ಥಾಪನೆಯಾಗಿ ಅನೇಕ ವಿದ್ಯಾರ್ಥಿಗಳ ಸಾಧನೆಯ ಮೆಟ್ಟಿಲಾಗಿದೆ. ಶಾಲೆಯಿಂದ ಹೊರಬಂದ ಎಲ್ಲ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಶಾಲೆಯ ಅಭಿವೃದ್ಧಿಗೆ ಶ್ರಮಿಸಲು ಹಳೆಯ ವಿದ್ಯಾರ್ಥಿ ಟ್ರಸ್ಟ್ ಸ್ಥಾಪಿಸಲಾಗಿದೆ. ಈಗಾಗಲೇ ಸಂಘದ ಸದಸ್ಯತ್ವ ಕಾರ್ಯವೂ ಪ್ರಗತಿಯಲ್ಲಿದೆ. ಸಂಘದ ಉದ್ಘಾಟನಾ ಸಮಾರಂಭ ಆಗಸ್ಟ್ 2 ರಂದು ಶಾಲೆಯ ಆವರಣದಲ್ಲಿ ನಡೆಯಲಿದೆ ಎಂದು ಟ್ರಸ್ಟ್ ಗೌರವ ಅಧ್ಯಕ್ಷ ವಿ.ಎಸ್. ಆನಂದ್ ಕುಮಾರ್ ಮಾಹಿತಿ ನೀಡಿದರು.
ಶಾಲೆಯ ಮುಖ್ಯ ಉದ್ದೇಶದ ಯಶಸ್ಸಿಗೆ ಸಹಕರಿಸುವುದೇ ಸಂಘದ ಮುಖ್ಯ ಗುರಿಯಾಗಿದ್ದು, ಶಾಲೆಯಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ನಾನಾ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲು ಸಂಘವು ಚಿಂತನೆ ನಡೆಸಿದೆ. ಅಂದು ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಪ್ರಾಂಶುಪಾಲರು ಮಾಡಲಿದ್ದು, ಅಂದಿನ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಹಳೆಯ ವಿದ್ಯಾರ್ಥಿಗಳ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಆದಂ ಎಸ್ ಮಾತನಾಡಿ, ಸಂಘದ ಉದ್ಘಾಟನೆಯ ಬಳಿಕ ಸಂಘದ ಕ್ರೋಡೀಕರಣ ಹೆಚ್ಚಿಸಿ ಶಾಲೆಯಲ್ಲಿ ಮಕ್ಕಳಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿದ ಎಲ್ಲ ಹಳೆಯ ವಿದ್ಯಾರ್ಥಿಗಳು ಸಂಘದಲ್ಲಿ ಸಕ್ರಿಯರಾಗಿ ಶಾಲೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭ ಹಳೆಯ ವಿದ್ಯಾರ್ಥಿ ಟ್ರಸ್ಟ್ ನ ಅಧ್ಯಕ್ಷ ಶಿವರಾಜ್, ಉಪಾಧ್ಯಕ್ಷೆ ದಿವ್ಯ, ಖಜಾಂಚಿ ಜಗದೀಶ್, ಸಹ ಕಾರ್ಯದರ್ಶಿ ಸಂಗೀತ, ಸಂಘಟನಾ ಕಾರ್ಯದರ್ಶಿ ರವಿ, ನಿರ್ದೇಶಕರಾದ ನವ್ಯ, ಸೌಮಿತ್, ರಿನೀತಾ, ಲಕ್ಷ್ಮಿ, ಕಾವ್ಯ ಸಾಗರ್, ಗಣೇಶ್, ಕಮಲ್ ರಾಜ್ ಥಪಾ, ಹನೀಫ್ ಮತ್ತಿತರರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!