ಕುಶಾಲನಗರ, ಏ 08:
ಮೂಲಭೂತ ಸೌಕರ್ಯಕ್ಕೆ ಒತ್ತಾಯಿಸಿ ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ರಸಲ್ ಪುರ-ಬಾಳುಗೋಡಿನ ಅಬ್ದುಲ್ ಅಜೀಜ್ ಮೂಲೆ ಭಾಗದ ಗ್ರಾಮಸ್ಥರು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ಚಿಕ್ಲಿಹೊಳೆ ಎಡದಂಡೆ ನಾಲೆ ಮೇಲಿರುವ ಅಬ್ದುಲ್ ಅಜೀಜ್ ಮೂಲೆ ಭಾಗದ ಗ್ರಾಮಸ್ಥರು ಸಮರ್ಪಕ ರಸ್ತೆ, ಚರಂಡಿ ವ್ಯವಸ್ಥೆಯಿಲ್ಲದೆ ನಿತ್ಯ ನರಕಯಾತನೆ ಅನುಭವಿಸುತ್ತಿದ್ದು ಇದುವರೆಗೆ ಯಾವೊಬ್ಬ ಜನಪ್ರತಿನಿಧಿ ಕೂಡ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರಾದ ಮಾಜಿ ಸೈನಿಕ ತಮ್ಮಯ್ಯ, ಇಂದಿರಾ ನಾಣಯ್ಯ, ಈರಪ್ಪ ಆರೋಪಿಸಿದರು. ಕಳೆದ ನಾಲ್ಕು ದಶಕಗಳಿಂದ ರಸ್ತೆ, ಚರಂಡಿ ವ್ಯವಸ್ಥೆ ಕಲ್ಪಿಸಲು ಹಲವು ಬಾರಿ ನೀರಾವರಿ ನಿಗಮ ಹಾಗೂ ಗುಡ್ಡೆಹೊಸೂರು ಗ್ರಾಪಂ ಮನವಿ ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ. ದಿನನಿತ್ಯ ಕಾಡಾನೆ ಕಾಟ, ಬೀದಿ ದೀಪಗಳ ಕೊರತೆ ನಡುವೆ ಜೀವನ ಸಾಗಿಸುತ್ತಿದ್ದೇವೆ. ಮಳೆಗಾಲದಲ್ಲಿ ಸಮಸ್ಯೆ ಹೇಳತೀರದು. ಸಾಮಾನ್ಯ ವರ್ಗದವರು ಇರುವ ಹಿನ್ನಲೆಯಲ್ಲಿ ನಮ್ಮನ್ನು ಅಸಡ್ಡೆ ಮಾಡಲಾಗುತ್ತಿದೆ ಎಂದು ಆರೋಪಿಸಿದ ಗ್ರಾಮಸ್ಥರು, ಗ್ರಾಮಕ್ಕೆ ತೆರಳುವ ರಸ್ತೆಗೆ ಚುನಾವಣೆ ಬಹಿಷ್ಕಾರ ಬ್ಯಾನರ್ ಅಳವಡಿಸುವ ಮೂಲಕ ತಮ್ಮ ಆಕ್ರೋಷ ವ್ಯಕ್ತಪಡಿಸಿದರು. ಮೂಲಭೂತ ಸೌಕರ್ಯವಿಲ್ಲದೆ ಪರಿತಪಿಸುತ್ತಿರುವ 30 ಕುಟುಂಬದ 100 ಕ್ಕೂ ಅಧಿಕ ಮಂದಿ ಈ ಬಾರಿ ಮತದಾನದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಘೋಷಿಸಿದರು. ಈ ಸಂದರ್ಭ ಮಾಜಿ ಸೈನಿಕರಾದ ಮುತ್ತಪ್ಪ, ಚಂಗಪ್ಪ, ಯಾದವಕುಮಾರ್, ಸುಂದರೇಶ್, ಅಜಯ್, ಸೋಮನ್, ನಂದಕುಮಾರ್, ಗಣಪತಿ, ದೇವಕಿಗಣಪತಿ, ಮನುಜಾಕ್ಷಿ ಸುಂದರೇಶ್, ವನಜ ಸುಕುಮಾರ್, ಮೀನಾಕ್ಷಿ ಮುತ್ತಪ್ಪ, ಕಾವೇರಮ್ಮ, ಜೈನಾಬಿ, ರುಬೀನಾ, ಲಲಿತಾ ಮತ್ತಿತರರು ಇದ್ದರು.
Back to top button
error: Content is protected !!