ಕುಶಾಲನಗರ, ಮಾ 23:
ನಂಜರಾಯಪಟ್ಟಣ ಗ್ರಾಪಂ ವ್ಯಾಪ್ತಿಯ ವಿರುಪಾಕ್ಷಪುರದ ಗ್ರಾಮ ಅರಣ್ಯ ಹಕ್ಕು ಸಮಿತಿಯ 70 ಮಂದಿ ಫಲಾನುಭವಿಗಳಿಗೆ ಶಾಸಕ ಅಪ್ಪಚ್ಚುರಂಜನ್ ಗುರುವಾರ ಹಕ್ಕುಪತ್ರ ವಿತರಣೆ ಮಾಡಿದರು.
ವಿರುಪಾಕ್ಷಪುರ ಅಂಗನವಾಡಿ ಕೇಂದ್ರ ಬಳಿ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಒಂದು ಸೂರು ಒದಗಿಸಿಕೊಡುವ ಬಿಜೆಪಿ ಸರಕಾರದ ಆಶಯದಂತೆ ಅರಣ್ಯ ವ್ಯಾಪ್ತಿಯ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಹಲವು ದಶಕಗಳ ಕನಸನ್ನು ಬಿಜೆಪಿ ಸರಕಾರ ಸಾಕಾರ ಮಾಡಿದೆ. ಇದಕ್ಕೆ ಅಧಿಕಾರಿಗಳು ಕೂಡ ಹೆಚ್ಚಿನ ಮಟ್ಟದಲ್ಲಿ ಸಹಕಾರ ನೀಡಿದ್ದಾರೆ.
ಈ ಹಕ್ಕುಪತ್ರದ ಮೂಲಕ ಸರಕಾರದ ಅಗತ್ಯ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದರು.
ಗ್ರಾಪಂ ಸದಸ್ಯ, ಅರಣ್ಯ ಹಕ್ಕು ಸಮಿತಿ ಮಾರ್ಗದರ್ಶಕ ಆರ್.ಕೆ.ಚಂದ್ರ ಮಾತನಾಡಿ, ಹಲವು ಮಂದಿ ಇದೊಂದು ರಾಜಕೀಯ ಗಿಮಿಕ್ ಎಂದು ಫಲಾನುಭವಿಗಳ ನಡುವೆ ಅಪಪ್ರಚಾರ ನಡೆಸಿದ್ದರು. ಆದರೆ ಶತಮಾನಗಳ ಬೇಡಿಕೆಯನ್ನು ಕೇವಲ 5 ತಿಂಗಳಲ್ಲಿ ನೆರವೇರಿಸಿ ಹಕ್ಕುಪತ್ರ ವಿತರಿಸುವ ಮೂಲಕ ಬಿಜೆಪಿ ಸರಕಾರ ಬಡವರ ಪರವಾಗಿದೆ ಎಂಬುದನ್ನು ಶಾಸಕ ಅಪ್ಪಚ್ಚುರಂಜನ್ ಅವರು ಸಾಬೀತುಪಡಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನುಳಿದ 15 ಮಂದಿಗೆ ಒಂದು ತಿಂಗಳಲ್ಲಿ ಹಕ್ಕುಪತ್ರ ವಿತರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಗಿರೀಶ್, ಕಾರ್ಯದರ್ಶಿ ಕೇಶವ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚಂದ್ರಪ್ಪ,
ಗ್ರಾಮದ ಪ್ರಮುಖರಾದ ವಿಜಯ, ರತೀಶ್, ಪ್ರಭುಶೇಖರ್ ಮತ್ತಿತರರು ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ಶಾಸಕರನ್ನು ತೆರೆದ ಜೀಪಿನಲ್ಲಿ ಗ್ರಾಮದಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು.
Back to top button
error: Content is protected !!