ಸಭೆ

ಗುಡ್ಡೆಹೊಸೂರು ಗ್ರಾಮಪಂಚಾಯತ್ ಕೆಡಿಪಿ ಸಭೆ

ಕುಶಾಲನಗರ, ಡಿ‌ 14: ಗುಡ್ಡೆಹೊಸೂರು ಗ್ರಾಪಂ ಕೆಡಿಪಿ ಸಭೆ ಪಂಚಾಯ್ತಿ ಅಧ್ಯಕ್ಷೆ ನಂದಿನಿ‌ ಅಧ್ಯಕ್ಷತೆಯಲ್ಲಿ ಗ್ರಾಮದ‌ ಸಮುದಾಯ ಭವನದಲ್ಲಿ ಬುಧವಾರ ನಡೆಯಿತು.
ಸಭೆಯ‌ ಆರಂಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಪ್ರತಿನಿಧಿಗಳು ಇಲಾಖೆಗೆ ಸಂಬಂಧಿಸಿದ‌ ಮಾಹಿತಿಗಳನ್ನು ಸಭೆಗೆ ನೀಡಿದರು.
ಚಿಕ್ಲಿಹೊಳೆ ನಾಲೆ ಅವ್ಯವಸ್ಥೆ ಬಗ್ಗೆ ಸದಸ್ಯರುಗಳು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ನೀರಾವರಿ ನಿಗಮದ ಮೂಲಕ ಕೈಗೊಂಡಿರುವ ಅಭಿವೃದ್ಧಿ ‌ಕಾಮಗಾರಿಗಳ ಬಗ್ಗೆ ಸಂಬಂಧಿಸಿದ ಇಲಾಖೆ ಅಭಿಯಂತರರಲ್ಲಿ ಮಾಹಿತಿ ಬಯಸಿದರು.
ಹಲವು ಕಡೆಗಳಲ್ಲಿ ವಿದ್ಯುತ್ ಕಂಬಗಳು ಶಿಥಿಲಾವಸ್ಥೆಯಲ್ಲಿವೆ. ಮತ್ತೆ ಕೆಲವು ಕಡೆ ರಸ್ತೆ ಬದಿ ಅಪಘಾತಕ್ಕೆ ಆಹ್ವಾನ ನೀಡುತ್ತಿರುವ, ಬಳಕೆಯಲ್ಲಿಲ್ಲದ ಕಂಬಗಳನ್ನು ತೆರವು ಗೊಳಿಸಲು ಸದಸ್ಯರುಗಳು ಚೆಸ್ಕಾಂ ಅಭಿಯಂತರರನ್ನು ಒತ್ತಾಯಿಸಿದರು. ಜಂಗಲ್ ಕಟ್ಟಿಂಗ್ ಬಳಿಕ ಮರಗಿಡಗಳ ರಂಬೆಕೊಂಬೆಗಳನ್ನು ಸಮರ್ಪಕವಾಗಿ‌ ವಿಲೇವಾರಿ‌ ಮಾಡಲು ಚೆಸ್ಕಾಂ ಸಿಬ್ಬಂದಿಗಳಿಗೆ ಸೂಚನೆ ನೀಡಲು ಕೋರಲಾಯಿತು.
ಮಾದಾಪಟ್ಟಣದಲ್ಲಿ ಸ್ಮಶಾನ ಅಭಿವೃದ್ದಿ ಕಾರ್ಯ ಕೂಡಲೆ ಕೈಗೆತ್ತಿಕೊಳ್ಳಬೇಕು. ವ್ಯಕ್ತಿಯೊಬ್ಬರು ಕಾಟಿಕೆರೆ ಒತ್ತುವರಿ ಮಾಡಿಕೊಂಡಿದ್ದು ತೆರವುಗೊಳಿಸಲು ಪಂಚಾಯ್ತಿಯೊಂದಿಗೆ ಸಹಕರಿಸುವಂತೆ ಕಂದಾಯಾಧಿಕಾರಿ ಸಂತೋಷ್ ಅವರಲ್ಲಿ ಅಧ್ಯಕ್ಷೆ ನಂದಿನಿ, ಪಿಡಿಒ‌ ಶ್ಯಾಂ ತಮ್ಮಯ್ಯ ಮತ್ತು ಸದಸ್ಯರು  ಆಗ್ರಹಿಸಿದರು.
ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಯಶೋಧ, ಪಿಡಿಒ ಶ್ಯಾಂ ತಮ್ಮಯ್ಯ ಸೇರಿದಂತೆ ಸದಸ್ಯರುಗಳು ಇದ್ದರು.
ಕಂದಾಯ, ಆರೋಗ್ಯ, ಚೆಸ್ಕಾಂ, ಸಮಾಜ‌ಕಲ್ಯಾಣ ಇಲಾಖೆ, ಕಾವೇರಿ ನೀರಾವರಿ ನಿಗಮ, ಜಿಲ್ಲಾ ಪಂಚಾಯತ್, ಶಿಕ್ಷಣ, ಅಬಕಾರಿ, ಅರಣ್ಯ ಇಲಾಖೆ ಅಧಿಕಾರಿ, ಪ್ರತಿನಿಧಿಗಳು ಸಭೆಯಲ್ಲಿ‌ ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!