ಕಾರ್ಯಕ್ರಮ

ಹುಲುಸೆ ಗ್ರಾಮದಲ್ಲಿ ಗಮನ ಸೆಳೆದ ಕೃಷಿ ಕ್ಷೇತ್ರೋತ್ಸವ ಕಾರ್ಯಕ್ರಮ

ಕುಶಾಲನಗರ, ಡಿ 09:
ಕೃಷಿಕರು ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಆರೋಗ್ಯ ವರ್ಧಕ ಆಹಾರ ಧಾನ್ಯಗಳನ್ನು ಬೆಳೆಯಲು ಮುಂದಾಗಬೇಕೆಂದು ಕೊಡಗು ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಡಾ
ಶಬಾನಾ ಎಂ.ಶೇಖ್ ಕರೆಕೊಟ್ಟರು.
ಭೂಮಿ ಸುಸ್ಥಿರ ಅಭಿವೃದ್ದಿ ಸಂಸ್ಥೆ ಹಾಗು ಸೋಮವಾರಪೇಟೆ ತಾಲ್ಲೂಕು ಕೃಷಿ ಇಲಾಖೆ ವತಿಯಿಂದ ಕುಶಾಲನಗರ ತಾಲ್ಲೂಕಿನ ಹುಲುಸೆ ಗ್ರಾಮದಲ್ಲಿ ಜಂಟಿಯಾಗಿ ಆಯೋಜಿಸಿದ್ದ ಕೃಷಿ ಕ್ಷೇತ್ರೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು,
ರೈತರು ಸಾವಯವ ಕೃಷಿಯಿಂದ ಭೂಮಿಯ ಮಣ್ಣು ಹಾಗು ದೇಹದ ಆರೋಗ್ಯ ವೃದ್ದಿಯಾಗುತ್ತದೆ.
ರೈತರು ಸಂಘಟಿತರಾಗುವ ಮೂಲಕ ಕೃಷಿಯಲ್ಲಿ ನೂತನ ಆವಿಷ್ಕಾರಗಳನ್ನು ಕೈಗೊಳ್ಳಬೇಕು ಎಂದು ಡಾ.ಶಬಾನಾ ಕರೆಕೊಟ್ಟರು.
ಮುಖ್ಯ ಅತಿಥಿಯಾಗಿದ್ದ ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಡಾ.ವೀರೇಂದ್ರ ಕುಮಾರ್ ಮಾತನಾಡಿ, ಕೃಷಿಕರು ಸಮಗ್ರ ಕೃಷಿ ಪದ್ಧತಿಗೆ ಒತ್ತು ನೀಡುವ ಮೂಲಕ ಆರ್ಥಿಕವಾಗಿ ಅಭಿವೃದ್ದಿ ಸಾಧಿಸಬಹುದಾಗಿದೆ. ಮನೆಯಂಗಳದಲ್ಲಿಯೇ ಸಾವಯವ ಗೊಬ್ಬರವನ್ನು ತಯಾರಿಸಿಕೊಳ್ಳುವ ಮೂಲಕ ರಾಸಾಯನಿಕಗಳನ್ನು ಮಿತವಾಗಿ ಬಳಸಿ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕಿದೆ ಎಂದು ರೈತರಿಗೆ ಕರೆಕೊಟ್ಟರು. ಸಕಲೇಶಪುರ ತಾಲ್ಲೂಕಿನ ಎಡೆಹಳ್ಳಿಯ
ಪ್ರಗತಿ ಪರ ಕೃಷಿಕ ವೈ.ಸಿ.ರುದ್ರಪ್ಪ ಮಾತನಾಡಿ, ಪಾರಂಪರಿಕ ಕೃಷಿ ಪದ್ದತಿಯಲ್ಲಿ ಜನರು ಆರೋಗ್ಯವಾಗಿದ್ದರು. ಹಿಂದಿನ ಕಾಲದ ಆಹಾರ ಪದ್ದತಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿತ್ತು. ಇತ್ತೀಚಿನ ಆಧುನಿಕ ಕೃಷಿ ಪದ್ಧತಿಯಲ್ಲಿ ಕೃಷಿಕರು ದಿಢೀರನೆ ಹಣ ಮಾಡುವ ದುರುದ್ದೇಶದಿಂದ ಕೈಗೊಳ್ಳುವ ಬೆಳೆಗಳಿಗೆ ಮನಬಂದಂತೆ ರಾಸಾಯನಿಕಗಳನ್ನು ಸುರಿದು ಬೆಳೆವ ಧಾನ್ಯಗಳು ರೋಗಗಳ ಗೂಡುಗಳಾಗಿವೆ ಎಂದರು.
ಮತ್ತೋರ್ವ ಅತಿಥಿ ಸಾಹಿತಿ ಭಾರದ್ವಾಜ್ ಕಣಿವೆ ಮಾತನಾಡಿ, ಹಿಂದಿನ‌ ಕಾಲದಲ್ಲಿ ಗುಣಮಟ್ಟದ ಆಹಾರ ಪದ್ದತಿಯೊಂದಿಗೆ ಮಹಿಳೆಯರು ಕೂಡ ಹೆಚ್ಚಾಗಿ ಶ್ರಮಿಕರಾಗಿದ್ದ ಕಾರಣ ರೋಗ ಮುಕ್ತ ಬದುಕು ಅಂದಿನ ಜನರದಾಗಿತ್ತು. ಆದ್ದರಿಂದ ಇಂದು ಕೂಡ ಸಾವಯವ ಕೃಷಿ ಕೈಗೊಳ್ಳುವ ಮೂಲಕ ಜನರು ಆರೋಗ್ಯವಂತರಾಗಬಹುದು ಎಂದು ಭಾರದ್ವಾಜ್ ಕರೆಕೊಟ್ಟರು.
ಭೂಮಿ ಸುಸ್ಥಿರ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷರಾದ ಬಳ್ಳೇಕೆರೆ ಜಯಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೋಮವಾರಪೇಟೆ ತಾಲ್ಲೂಕು ಸಹಾಯಕ ಕೃಷಿ ಅಧಿಕಾರಿ ಡಾ.ಆರ್.ಕೆ.ಯಾದವ್ ಬಾಬು,
ನಿವೃತ್ತ ಕೃಷಿ ಅಧಿಕಾರಿ ಹೆಚ್.ಎಸ್.ರಾಜಶೇಖರ್,
ಮಂಡ್ಯ ಜಿಲ್ಲೆಯ ಶಿವಳ್ಳಿ ಗ್ರಾಮದ ಸಿದ್ಧ ಸಣ್ಣ ಭತ್ತದ ತಳಿಯ ಪೋಷಕರಾದ ಬೋರೇಗೌಡ, ಮೂದ್ರವಳ್ಳಿಯ ಕಾವೇರಿ ಮಾತಾ ಸಾವಯವ ಕೃಷಿ ಸಂಘದ ಅಧ್ಯಕ್ಷ ಎಂ.ಕೆ.ಮುತ್ತಪ್ಪ,
ಹುಲುಸೆ ಗ್ರಾಮದ ಪ್ರಗತಿಪರ ಕೃಷಿಕರಾದ ಸದಾಶಿವ, ಹೆಚ್.ಸಿ.ಶಿವರುದ್ರಪ್ಪ, ಭೂಮಿ ಸುಸ್ಥಿರ ಸಂಸ್ಥೆಯ ಪುಟ್ಟಸ್ವಾಮಿ, ಲೋಕೇಶ್ ಮೊದಲಾದವರಿದ್ದರು.
ಇದೇ ಸಂದರ್ಭ ಕೃಷಿಕರು ಕೃಷಿ ಚಟುವಟಿಕೆಗಳಿಗೆ ಬಳಸುವ ನೇಗಿಲು, ನೊಗ, ಮರ, ಸೇರು, ಕೊಳಾಯಿ, ಬೀಸುವ ಕಲ್ಲು, ಅರೆಯುವ ಕಲ್ಲು ಮೊದಲಾದ ಪರಿಕರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ಹಾಗೆಯೇ ಹುಲುಸೆ ಗ್ರಾಮದ ಹೇಮಂತಕುಮಾರ್ ಎಂಬ ಕೃಷಿಕರು ಸಾಕಿರುವ ಎತ್ತುಗಳು ಗಮನ ಸೆಳೆದವು.
ಕಾರ್ಯಕ್ರಮದ ಬಳಿಕ ದೇಸಿ ಭತ್ತದ ಅಕ್ಕಿಯಿಂದ ಸಿದ್ದಪಡಿಸಿದ ಉಪಹಾರದ ವ್ಯವಸ್ಥೆ ಕಲ್ಪಿಸಿ ಗ್ರಾಮದ ಕೃಷಿಕ ಮಹಿಳೆಯರೇ ಬಡಿಸಿದ್ದು ವಿಶೇಷವಾಗಿತ್ತು.

Related Articles

Leave a Reply

Your email address will not be published. Required fields are marked *

Back to top button
error: Content is protected !!