ಸಭೆ

ಮುಳ್ಳುಸೋಗೆ ಗ್ರಾಪಂ ಸೇರಿಸಿ ಪುರಸಭೆ ಮಾಡಲು ಇದ್ದ ಗೊಂದಲ, ಅನುಮಾನಗಳಿಗೆ ತೆರೆ

ಕುಶಾಲನಗರ, ಸೆ 17:
ಮುಳ್ಳುಸೋಗೆ ಗ್ರಾಪಂ ಸೇರಿಸಿಕೊಂಡು ಕುಶಾಲನಗರ ಪುರಸಭೆ ಮಾಡಲು ಇದ್ದ ಎಲ್ಲಾ ಗೊಂದಲ, ಅನುಮಾನಗಳಿಗೆ ತೆರೆ ಬಿದ್ದಿದೆ.
ಕುಶಾಲನಗರದ ರೈತ ಸಹಕಾರ ಭವನದಲ್ಲಿ ಶನಿವಾರ
ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಅಧ್ಯಕ್ಷತೆಯಲ್ಲಿ
ಕುಶಾಲನಗರ ಪಟ್ಟಣ ಪಂಚಾಯಿತಿ ಮತ್ತು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸದಸ್ಯರು, ಸಂಘಟನೆ, ಸಂಘಸಂಸ್ಥೆಗಳ ಪ್ರಮುಖರು ಸಭೆ ಸೇರಿ ಪುರಸಭೆ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ.
ಈ ಸಂದರ್ಭ ಮಾತನಾಡಿದ ಶಾಸಕ ಅಪ್ಪಚ್ಚುರಂಜನ್, ಪುರಸಭೆಯಾದ ಬಳಿಕ ಮುಳ್ಳುಸೋಗೆ ಗ್ರಾಮ ಪಂಚಾಯಿ ಸದಸ್ಯರ ಅಧಿಕಾರ ಉಳಿಸಬಹುದು. ಕನಿಷ್ಠ 6 ತಿಂಗಳು ಅಡಕ್ ಕಮಿಟಿ ಎನ್ನುವ ಹೆಸರಿನಲ್ಲಿ ಸದಸ್ಯತ್ವ ಇರುತ್ತೆ. ಇಲ್ಲವಾದರೆ ಎಲ್ಲಾ 3 ಪಕ್ಷದವರನ್ನು ನಾಮ ನಿರ್ದೇಶನ ಮಾಡುತ್ತೇನೆ ಎಂದು ಮಡಿಕೇರಿ ಕ್ಷೇತ್ರ ಶಾಸಕರು ಆಶ್ವಾಸನೆ ನೀಡಿದರು. ಮುಳ್ಳುಸೋಗೆ ಸದಸ್ಯರು ಈಗ ವಕೀಲರ ಮೂಲಕ ಸಲ್ಲಿಸಿರುವ ಎಲ್ಲಾ ತಕರಾರು ಅರ್ಜಿಗಳನ್ನು ವಾಪಸ್ ಪಡೆದು ಇಡೀ ಮುಳ್ಳುಸೋಗೆ ಗ್ರಾಮದ ಅಭಿವೃದ್ಧಿಗೆ ಚಿಂತನೆ ನಡೆಸಿ. ಪುರಸಭೆಗೆ ಸೇರಿದರೆ ಕೋಟ್ಯಾಂತರ ರೂಪಾಯಿ ಅನುದಾನ ಬರುತ್ತೆ. ಅದರಲ್ಲಿ ಸಂಪೂರ್ಣ ಮುಳ್ಳುಸೋಗೆ ಕಂದಾಯ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದರು.
ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದಾಪಟ್ಟಣ ವಾರ್ಡ್ ಸದಸ್ಯ ಮಾತನಾಡಿ, ಮಾದಾಪಟ್ಟಣದ ವಾರ್ಡ್ ಅನ್ನು ಅರ್ಧ ಭಾಗ ಪುರಸಭೆಗೆ ಸೇರಿಸಿಕೊಳ್ಳಲಾಗಿದೆ. ಪೂರ್ಣ ವಾರ್ಡ್ ಅನ್ನು ಕುಶಾಲನಗರಕ್ಕೆ ಸೇರಿಸಿಕೊಳ್ಳಲು ಮನವಿ ಮಾಡಿದರು.
ಕುಶಾಲನಗರ ಪಪಂ ಸದಸ್ಯ ವಿ.ಎಸ್.ಅನಂದಕುಮಾರ್ ಮಾತನಾಡಿ, ಮುಳ್ಳುಸೋಗೆಯನ್ನು ಪುರಸಭೆಗೆ ಸೇರಿಸಿಕೊಳ್ಳದೆ ಅದನ್ನು ಪಟ್ಟಣ ಪಂಚಾಯಿತಿ ಮಾಡಿದರೆ ಸರ್ಕಾರದಿಂದ ಇನ್ನು ಹೆಚ್ಚಿನ ಅನುದಾನ ಬರಲಿದೆ. ಇನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಯಾಗುತ್ತೆ ಎನ್ನುವ ಸಲಹೆಯನ್ನು ನೀಡಿದರು.
ಕುಶಾಲನಗರ ಪಟ್ಟಣ ಪಂಚಾಯಿತಿ ನಾಮ ನಿರ್ದೇಶಿತ ಸದಸ್ಯ ಕೆ.ಜಿ.ಮನು ಮಾತನಾಡಿ, ಪುರಸಭೆಗೆ ತಕರಾರು ಸಲ್ಲಿಸುವ ನೆಪದಲ್ಲಿ ಸಾವಿರಾರು ರೂಪಾಯಿ ಮೋಸ ಮಾಡಿದ್ದಾರೆ ಎಂದಾಗ, ಮುಳ್ಳುಸೋಗೆ ಸದಸ್ಯ ಶಿವಾನಂದ ನಮ್ಮ ಸ್ವಂತ ಹಣದಲ್ಲಿ ವಕೀಲರಿಗೆ ದುಡ್ಡು ಕೊಟ್ಟಿದ್ದೇವೆ. ನಾವು ನಮ್ಮ ಅಧಿಕಾರಾವಧಿ ಮುಗಿಯುವ ತನಕ ಪುರಸಭೆ ಮಾಡಬಾರದು ಎನ್ನುವುದು ನಮ್ಮ ತಕರಾರು ಎಂದು ಸಭೆಯಲ್ಲಿ ತಿಳಿಸಿದರು.
ಕುಶಾಲನಗರ ಪಪಂ ಕಾನೂನು ಸಲಹೆಗಾರ ಆರ್.ಕೆ.ನಾಗೇಂದ್ರ ಬಾಬು ಮಾತನಾಡಿ, ಹದ್ದುಬಸ್ತು ತೀರ್ಮಾನ ಮಾಡಬೇಕಿರುವುದು ಸರ್ಕಾರ. ಸದಸ್ಯರು ಕೊಂಚ ತ್ಯಾಗ ಮಾಡಿದರೆ ಮುಳ್ಳುಸೋಗೆ ಅಭಿವೃದ್ಧಿಯತ್ತ ಸಾಗಲಿದೆ ಎಂದರು. ಈಗಾಗಲೇ ಅಂತಿಮ ಅಧಿಸೂಚನೆ ಬರುವುದು ತಡವಾಗಿದ್ದಕ್ಕೆ 30 ಕೋಟಿ ಅನುದಾನ ನಷ್ಟವಾಗಿದೆ. ಅದರಿಂದ ಇನ್ನು ತಡವಾಗಲು ಬಿಡಬಾರದು ಎಂದರು. ಸರ್ಕಾರದ ಜನಗಣತಿ ಅದ ಮೇಲೆ ಪುರಸಭೆಯನ್ನು ನಗರಸಭೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗೋಣ ಎಂದು ತಿಳಿಸಿದರು.
ಕುಶಾಲನಗರ ಪಪಂ ಅಧ್ಯಕ್ಷ ಬಿ.ಜೈವರ್ಧನ್ ಮಾತನಾಡಿ, ಕುಶಾಲನಗರ ಪುರಸಭೆಯಾಗಿಸಲು ನಡೆದ ಪ್ರಕ್ರಿಯೆಗಳ ಬಗ್ಗೆ ತಿಳಿಸಿದರು .
ಸಭೆಯಲ್ಲಿ ಕೆಲವೊಂದು ವಾದ ವಿವಾದ ನಡೆದ ಸಂದರ್ಭ ಕುಡಾ ಅಧ್ಯಕ್ಷ ಚರಣ್, ಪಪಂ‌ ಸದಸ್ಯ ತಿಮ್ಮಪ್ಪ, ಬಿಜೆಪಿ ನಗರಾಧ್ಯಕ್ಷ ಉಮಾಶಂಕರ್, ಶಾಂತಿಯುತವಾಗಿ ಸಭೆ ನಡೆಸಲು ಕೋರಿದರು.
ಸಭೆಯಲ್ಲಿ ಪಪಂ
ಉಪಾಧ್ಯಕ್ಷೆ ಸುರಯ್ಯಬಾನು, ಮುಳ್ಳುಸೋಗೆ ಗ್ರಾಪಂ ಉಪಾಧ್ಯಕ್ಷೆ ಜಯಮ್ಮ, ಪಪಂ ಸದಸ್ಯ ಪ್ರಮೋದ್ ಮುತ್ತಪ್ಪ, ಎಂ.ಬಿ.ಸುರೇಶ್, ಜಗದೀಶ್, ಮುಳ್ಳುಸೋಗೆ ಗ್ರಾಮದ ಪ್ರಮುಖರಾದ ಎಂ.ಎಂ.ಪ್ರಕಾಶ್, ದೊರೆ ಗಣೇಶ್, ಎಂ.ವಿ.ಹರೀಶ್, ನವೀನ್.ವಿ.ಜೆ ಇತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!