ಕುಶಾಲನಗರ ಎಪಿಸಿಎಂಎಸ್ ನಿಂದ ಮಾದಾಪಟ್ಟಣ ಶಾಲೆಗೆ ಪುಸ್ತಕ ಕೊಡುಗೆ

ಕುಶಾಲನಗರ, ಸೆ 30: ಕುಶಾಲನಗರದ ಎಪಿಸಿಎಂಎಸ್ ವತಿಯಿಂದ ಮಾದಾಪಟ್ಟಣದ ಪಿಎಂಶ್ರೀ ಕೆಪಿಎಸ್ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಕೊಡುಗೆ ನೀಡಲಾಯಿತು.
ಎಪಿಸಿಎಂಎಸ್ ಅಧ್ಯಕ್ಷ ಹೆಚ್.ಬಿ.ಚಂದ್ರಪ್ಪ, ಉಪಾಧ್ಯಕ್ಷೆ ಚಂದ್ರಕಲಾ ಅವರ ಸಲಹೆ ಮೇರೆಗೆ ಆಡಳಿತ ಮಂಡಳಿ ನಿರ್ದೇಶಕರಾದ ಬಿ.ಸಿ.ಮಲ್ಲಿಕಾರ್ಜುನ ಮತ್ತು ಹೆಚ್.ಡಿ.ನಂದಕುಮಾರ್ ಅವರು 130 ವಿದ್ಯಾರ್ಥಿಗಳಿಗೆ 900 ಕ್ಕೂ ಅಧಿಕ ನೋಟ್ ಪುಸ್ತಕಗಳನ್ನು ವಿತರಣೆ ಮಾಡಿದರು.
ಈ ಸಂದರ್ಭ ಮಾತನಾಡಿದ ಎಪಿಸಿಎಂಎಸ್ ನಿರ್ದೇಶಕ ಬಿ.ಸಿ.ಮಲ್ಲಿಕಾರ್ಜುನ ಅವರು, ನಮ್ಮ ಕಾಲಘಟ್ಟದಲ್ಲಿ ಕಡು ಬಡತನ ಕಾರಣ ಒಂದೇ ಪುಸ್ತಕದಲ್ಲಿ ಎಲ್ಲಾ ಪಠ್ಯಗಳನ್ನು ಬರೆದಿಟ್ಟುಕೊಳ್ಳುವ ಪರಿಸ್ಥಿತಿ ಇತ್ತು. ಆದರೆ ಇಂದು ಸರಕಾರಿ ಶಾಲೆಗಳಿಗೆ ದಾನಿಗಳಿಂದ ಭರಪೂರ ನೆರವು ಲಭಿಸುತ್ತಿರುವುದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಕೂಡ ಇರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಭವಿಷ್ಯದಲ್ಲಿ ಉನ್ನತ ಸ್ಥಾನ ಮಾನಗಳನ್ನು ಹೊಂದಬೇಕಿದೆ ಎಂದು ಕರೆ ನೀಡಿದರು.
ಶಾಲಾ ಮುಖ್ಯ ಶಿಕ್ಷಕ ಟಿ.ಎಸ್.ಶಶಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭ ಶಾಲಾಭಿವೃದ್ದಿ ಸಮಿತಿ ಮಾಜಿ ಅಧ್ಯಕ್ಷ ಹೆಚ್.ಜೆ. ದಾಮೋದರ್, ಗ್ರಾಮಸ್ಥರಾದ ಎಂ.ಮಹದೇವಪ್ಪ, ಹೆಚ್.ಕೆ.ಮಹೇಶ್ ಸೇರಿದಂತೆ ಶಿಕ್ಷಕ ವೃಂದದವರು ಇದ್ದರು.



