ಕುಶಾಲನಗರ, ನ 16:
ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ
ಸುಂದರನಗರ ಗ್ರಾಮದ ನಿವಾಸಿಗಳಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ನಿವಾಸಿಗಳು ಕಾಲ್ನಡಿಗೆ ಮೂಲಕ ಮೆರವಣಿಗೆ ತೆರಳಿ ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಎಲ್.ಎಂ.ನಾಗರಾಜು ನೇತೃತ್ವದಲ್ಲಿ ಸುಂದರನಗರದ ಕೋರೆ ರಸ್ತೆ ವ್ಯಾಪ್ತಿಯ ಹಕ್ಕುಪತ್ರ ವಂಚಿತ ನಿವಾಸಿಗಳು ಕುಶಾಲನಗರ ಪ್ರವಾಸಿ ಮಂದಿರದ ಬಳಿಯಿಂದ ಕುಶಾಲನಗರ ಮುಖ್ಯರಸ್ತೆ ಮೂಲಕ ಮೆರವಣಿಗೆಯಲ್ಲಿ ಸಾಗಿ ತಹಸೀಲ್ದಾರ್ ಕಛೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾಧ್ಯಕ್ಷ ಎಲ್.ಎಂ.ನಾಗರಾಜು, ಸುಂದರನಗರದ ಕೋರೆ ರಸ್ತೆಯ ಸುಮಾರು 50 ರಿಂದ 60 ಕುಟುಂಬಗಳು ಹಕ್ಕುಪತ್ರದಿಂದ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಿತಿ ನೇತೃತ್ವದಲ್ಲಿ ಹಕ್ಕುಪತ್ರಕ್ಕಾಗಿ ಹೋರಾಟ ಕೈಗೊಂಡಿದ್ದು ಈಗಾಗಲೆ 10 ತಿಂಗಳು ಕಳೆದಿದೆ. ಜಿಲ್ಲಾಧಿಕಾರಿ ಸೇರಿದಂತೆ ಈ ಹಿಂದಿನ ತಹಸೀಲ್ದಾರ್ ಸೇರಿದಂತೆ ಶಾಸಕರು, ಗ್ರಾಪಂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಕೆಲವರು ಗ್ರಾಪಂ ಅಧಿಕಾರಿಗಳ ದಾರಿ ತಪ್ಪಿಸಲು ಕೆಲಸ ಮಾಡುತ್ತಿದ್ದಾರೆ. ನಮ್ಮ ಹೋರಾಟದ ಬಗ್ಗೆ ಅಪ ಪ್ರಚಾರ ನಡೆಸುತ್ತಿದ್ದಾರೆ. ಈ ಹಿಂದೆ ಇದ್ದ ತಹಸೀಲ್ದಾರ್ ಅವರು ನಮ್ಮ ಹೋರಾಟಕ್ಕೆ ಸೂಕ್ತವಾಗಿ ಸ್ಪಂದಿಸಿ ಸಲಹೆ ಸೂಚನೆಗಳನ್ನು ಸಹ ನೀಡಿದ್ದರು. ಅವರು ನಿವೃತ್ತಿಯಾದ ಹಿನ್ನಲೆಯಲ್ಲಿ ಹೊಸ ತಹಸೀಲ್ದಾರ್ ಅವರಿಗೂ ಕೂಡ ನಾವು ಮನವಿ ಸಲ್ಲಿಸುತ್ತಿದ್ದು ಶೀಘ್ರದಲ್ಲೇ ಹಕ್ಕುಪತ್ರ ಒದಗಿಸಲು ಕ್ರಮವಹಿಸಬೇಕಿದೆ ಎಂದು ಒತ್ತಾಯಿಸಿದರು.
ನಿವಾಸಿ ರಶಿಕಲಾ ಮಾತನಾಡಿ, ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಹೋರಾಟ ಕೈಗೊಂಡ ಎಲ್ಲಾ ಹಕ್ಕುಪತ್ರ ವಂಚಿತರಿಗೆ ಇದುವರೆಗೆ ಸೂಕ್ತ ಸ್ಪಂದನೆ ದೊರೆತಿಲ್ಲ. ಅಧಿಕಾರಿಗಳು ಕಾಳಜಿ ವಹಿಸಿ ನಮ್ಮ ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಬೇಕಿದೆ ಎಂದು ಆಗ್ರಹಿಸಿದರು.
ಈ ಸಂದರ್ಭ ಡಿಎಸ್ಎಸ್ ಮಹಿಳಾ ಸಮಿತಿ ಜಿಲ್ಲಾಧ್ಯಕ್ಷೆ ಸೌಮ್ಯ ನಾಗರಾಜು, ಜಿಲ್ಲಾ ಉಪಾಧ್ಯಕ್ಷ ಗಂಗಾಧರ ಸೇರಿದಂತೆ ನಿವಾಸಿಗಳಾದ ವಿಜಯಕುಮಾರ್, ಮುತ್ತು, ಗುರು, ಗಣೇಶ್, ವಳ್ಳಿ ಮಹೇಂದ್ರ ಮತ್ತಿತರರು ಇದ್ದರು.
Back to top button
error: Content is protected !!