ಕಾರ್ಯಕ್ರಮ

ಕೊಡಗು ಜಿಲ್ಲಾ ಬಿಜೆಪಿ ಎಸ್.ಟಿ.ಮೋರ್ಚಾ ವತಿಯಿಂದ ಕುಶಾಲನಗರದಲ್ಲಿ ಬಿರ್ಸಾ ಮುಂಡ ಜಯಂತಿ ಆಚರಣೆ

ಕುಶಾಲನಗರ, ನ 15:: ಬುಡಕಟ್ಟು ಜನಾಂಗದಲ್ಲಿ ಹುಟ್ಟಿ ಅಂದಿನ ಬ್ರಿಟಿಷ್ ಆಳ್ವಿಕೆಯಲ್ಲಿ ಚಿಕ್ಕ ವಯಸ್ಸಿನಿಂದಲೇ ತನ್ನ ಸಮುದಾಯದ ಅರಣ್ಯ ಹಕ್ಕುಗಳಿಗಾಗಿ ಹೋರಾಟ ಮಾಡಿ, ಜೈಲು ಸೇರಿ ಹುತಾತ್ಮನಾದ ಭಗವಾನ್ ಬಿರ್ಸಾಮುಂಡ ಅವರ ತ್ಯಾಗ ಬಲಿದಾನದ ಹಿನ್ನೆಲೆ ಇಂದಿನ ಪರಿಶಿಷ್ಟ ಜನಾಂಗದ ಪ್ರತಿಯೊಬ್ಬರಿಗೂ ದಾರಿದೀಪ ಆಗಿದೆ ಎಂದು ಮಾಜಿ ಶಾಸಕ ಎಂ. ಪಿ. ಅಪ್ಪಚ್ಚುರಂಜನ್ ಹೇಳಿದರು.

ಕುಶಾಲನಗರದ ವಾಸವಿ ಮಹಲ್ ಸಭಾಂಗಣದಲ್ಲಿ ನಡೆದ ಭಗವಾನ್ ಬಿರ್ಸಾಮುಂಡ ಅವರ 151ನೇ ಜನ್ಮದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಿರ್ಸಾ ಮುಂಡಾ ಅವರು ಉತ್ತರ ಭಾರತದ ಜಾರ್ಖಂಡ್ ಸಮೀಪದ ಉಳಿಹಾಟು ಪ್ರದೇಶದ ಬುಡಕಟ್ಟು ಜನಾಂಗದಲ್ಲಿ ಹುಟ್ಟಿ ಕೇವಲ 24 ವರ್ಷಗಳಲ್ಲಿ ಬ್ರಿಟಿಷ್ ಚಕ್ರಾಧಿಪತ್ಯದ ವಿರುದ್ಧ ಸೆಟೆದು ನಿಂತು ತನ್ನ ಸಮಾಜದ ಸಂಘಟನೆ ಮಾಡಿ, ಅದರ ಫಲವಾಗಿ ಸೆರೆಮನೆ ಸೇರಿ ಹುತಾತ್ಮನಾದ ವ್ಯಕ್ತಿ. ಆ ವ್ಯಕ್ತಿಯ ಹೆಸರಲ್ಲಿ ವಾಜಪೇಯಿ ಪ್ರಧಾನಮಂತ್ರಿಯಾಗಿದ್ದ ಕಾಲದಲ್ಲಿ ಏಕಲವ್ಯ ಹೆಸರಿನಲ್ಲಿ ಬುಡಕಟ್ಟು ಪ್ರದೇಶಗಳ ಜನರಿಗಾಗಿ ಸಾಕ್ಷರತೆಯನ್ನು ಒದಗಿಸಲು ನೂರಾರು ಶಾಲೆಗಳನ್ನು ಸ್ಥಾಪಿಸಲಾಯಿತು. ಈಗಲೂ ಕೇಂದ್ರ ಸರ್ಕಾರ ಪರಿಶಿಷ್ಟ ಪಂಗಡ ಜನಾಂಗಕ್ಕಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಆದರೂ ಕರ್ನಾಟಕದ ರಾಜ್ಯ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಒಬ್ಬರು ಪರಿಶಿಷ್ಟ ಜನಾಂಗಕ್ಕೆ ಸೇರಿದ ನಿಗಮದಲ್ಲಿ ಬಂದ ಹಣವನ್ನು ದುರ್ಬಳಕೆ ಮಾಡಿಕೊಂಡದ್ದು ವಿಷಾದನೀಯ ಸಂಗತಿ. ಕೇಂದ್ರ ಸರ್ಕಾರ ಎಲ್ಲ ಜನಾಂಗಗಳ ಮೇಲ್ಮಗಾಗಿ ಶ್ರೇಯೋಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ. ದೇಶದ ಉನ್ನತ ಸ್ಥಾನಗಳಲ್ಲಿ ಬುಡಕಟ್ಟು ಜನಾಂಗ, ಮುಸ್ಲಿಂ ಜನಾಂಗಕ್ಕೆ ಸೇರಿದವರನ್ನು ಪ್ರತಿಷ್ಠಾಪಿಸಿ ಗೌರವ ಕೊಡುವ ಕೆಲಸ ಮಾಡಿದೆ. ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜನರು ಮತಾಂತರದ ಅಮಿಷಗಳಿಗೆ ಒಳಗಾದರೆ ತಮ್ಮ ಮೂಲ ಜಾತಿಗಳಿಗೆ ಸಿಗಬೇಕಾದ ಮೀಸಲಾತಿ ಮತ್ತು ಪ್ರತಿಫಲವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಇತ್ತೀಚಿಗೆ ತೀರ್ಪು ನೀಡಿದೆ. ಆದ್ದರಿಂದ ಕೇಂದ್ರ ಸರ್ಕಾರದ ಅಧೀನದಲ್ಲಿ ಎಲ್ಲಾ ಜನಾಂಗಗಳು ನೆಮ್ಮದಿಯಾಗಿರಲು ಸಾಧ್ಯವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಸರ್ಕಾರದ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಜಿ. ಬೋಪಯ್ಯ ಅವರು ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಯಾರೇ ಧನಿಯೆತ್ತಿದರೂ, ಅವರೆಲ್ಲರೂ ದಂಗೆ ಕೋರರು, ದೇಶದ್ರೋಹಿಗಳು ಎಂಬ ರೀತಿಯಲ್ಲಿ ಶಿಕ್ಷೆ ಅನುಭವಿಸಬೇಕಾಗಿತ್ತು. ಅಂತಹ ಕಾಲದಲ್ಲಿ ಬಿರ್ಸಾಮುಂಡ ಎಳೆಯ ಪ್ರಾಯದಲ್ಲಿ ಬುಡಕಟ್ಟು ಜನರ ಆಶಾಕಿರಣವಾಗಿ ಉತ್ತಮ ಸಂಘಟನೆಗೆ ಕಾರಣರಾದರು. ಭಗತ್ ಸಿಂಗ್, ರಾಜಗುರು, ಚಂದ್ರಶೇಖರ್ ಆಜಾದ್ ಅವರಂತೆ ಬಿರುಸಾಮುಂಡ ಅವರು ಬ್ರಿಟಿಷರ ದೃಷ್ಟಿಯಲ್ಲಿ ದೇಶದ್ರೋಹದ ಆರೋಪಕ್ಕೆ ಒಳಗಾಗಬೇಕಾಯಿತು. ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಪರಿಶಿಷ್ಟ ಜನಾಂಗ ತಮ್ಮ ಮೂಲಭೂತ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಟ ಮಾಡಬೇಕಾದ ಅನಿವಾರ್ಯತೆಯ ಸಂದರ್ಭದಲ್ಲಿ ಭಗವಾನ್ ಬಿರ್ಸಾಮುಂಡಾವರ ಹೋರಾಟದ ಪ್ರೇರಣೆ ಪಡೆದುಕೊಳ್ಳಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಬಿಜೆಪಿ ಎಸ್. ಟಿ. ಮೋರ್ಚಾ ಅಧ್ಯಕ್ಷ ಎಂ.ಎಂ. ಪರಮೇಶ್ವರ್ ಮಾತನಾಡಿ, ರಾಜ್ಯ ಸರಕಾರ ಅರಣ್ಯ ಹಕ್ಕಿನಡಿ ಆದಿವಾಸಿಗಳಿಗೆ ಮೂಲಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕಿದೆ. ತಪ್ಪಿದಲ್ಲಿ‌ ನಮ್ಮ ಹಕ್ಕುಗಳಿಗಾಗಿ ರಾಜ್ಯಾದ್ಯಂತ ಹೋರಾಟ ರೂಪಿಸಬೇಕಾಗುತ್ತದೆ ಎಂದರು.

ರಾಜ್ಯ ಬಿಜೆಪಿ ಎಸ್. ಟಿ. ಮೋರ್ಚಾ ಕಾರ್ಯಕಾರಿ ಸಮಿತಿಯ ಸದಸ್ಯ ಡಿ.ಆರ್. ಪ್ರಭಾಕರ್ ಅವರು ಬಿರ್ಸಾ ಮುಂಡ ಅವರ ಹೋರಾಟದ ಪರಿ ಕುರಿತಂತೆ ಮಾತನಾಡಿದರು. ಅರಣ್ಯ ಹಕ್ಕು,‌ನೆಲ‌,ಜಲ, ವಿದ್ಯಾಭ್ಯಾಸದ ಅರಿವನ್ನು ಮೂಡಿಸಿ‌ ಮತಾಂತರ ವಿರೋಧಿಸಿ ಸಮುದಾಯದವರನ್ನು ಒಗ್ಗೂಡಿಸಲು ಶ್ರಮಿಸಿದರು ಎಂದರು.

ವೇದಿಕೆಯಲ್ಲಿ ಬುಡಕಟ್ಟು ಜನರ ಹಿರಿಯ ಹೋರಾಟಗಾರ, ಪರಿಶಿಷ್ಟ ಜನಾಂಗದ ರಾಜ್ಯ ಪ್ರಶಸ್ತಿ ವಿಜೇತ ಜೆ. ಪಿ. ರಾಜು, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಕಾಳಪ್ಪ, ಉಪಾಧ್ಯಕ್ಷ ಆರ್. ಕೆ.ಚಂದ್ರು, ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಉಸ್ತುವಾರಿ ಬಿ.ಬಿ. ಭಾರತೀಶ್, ವಿರಾಜಪೇಟೆ, ಸೋಮವಾರಪೇಟೆ ಮಂಡಲಗಳ ಅಧ್ಯಕ್ಷರುಗಳಾದ ಮುತ್ತುರಾಜ್, ಪ್ರವೀಣ್ ಕುಮಾರ್ ಇದ್ದರು.
ಕಾರ್ಯಕ್ರಮದಲ್ಲಿ
ಬುಡಕಟ್ಟು ಸಮುದಾಯಕ್ಕಾಗಿ ದುಡಿದ ಜೆ ಪಿ ರಾಜು, ಚಿಕ್ಕಯ್ಯ ತೊರೆನೂರು, ಮಂಜುನಾಥ ನಾಯಕ, ಮಲ್ಲಾಪುರ ಸಿದ್ದಣ್ಣ, ಮಣಿ., ವೈ ಕೆ ರಾಜು, ಪ್ರಕಾಶ, ಬಿ.ಕೆ. ಕಾಳಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಭಗವಾನ್ ಬಿರ್ಸಾಮುಂಡ ಅವರ ಚಿತ್ರಪಟಕ್ಕೆ ವೇದಿಕೆಯ ಗಣ್ಯರು ಪುಷ್ಪ ನಮನ ಸಮರ್ಪಿಸಿದರು.
ಕಾರ್ಯಕ್ರಮದ ನಿರ್ವಹಣೆಯನ್ನು ಶ್ರಾವ್ಯ, ಪ್ರಕೃತಿ, ಮತ್ತು ಪ್ರಭಾಕರ್ ನಿರ್ವಹಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!