ಕುಶಾಲನಗರ, ಆ 25: ಮುಳ್ಳುಸೋಗೆ ಗ್ರಾಪಂ ಸಾಮಾನ್ಯ ಸಭೆ ಗುರುವಾರ ನಿಗದಿಯಾಗಿತ್ತು. ಆದರೆ ಕೋರಂ ಕೊರತೆ ಕಾರಣ ಸಭೆ ಮುಂದೂಡಲಾಯಿತು. ಪಾಲ್ಗೊಂಡಿದ್ದ ಕೆಲವು ಸದಸ್ಯರ ಪೈಕಿ ಎಂ.ಎಸ್.ಶಿವಾನಂದ, ಮುರಳೀಧರ್, ರಮೇಶ್, ಚಿತ್ರ, ಎಂಬವರು ಗ್ರಾಪಂ ಅಧ್ಯಕ್ಷರು, ಪಿಡಿಒ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.
ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರ್ವಾಧಿಕಾರಿ ವರ್ತನೆ ತೋರಲಾಗುತ್ತಿದೆ. ತಮಗಿಷ್ಟ ಬಂದಂತೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಕೇವಲ ಪಂಚಾಯ್ತಿ ಕಟ್ಟಡ ಅಭಿವೃದ್ಧಿಗೆ ಮಾತ್ರ ಒತ್ತು ಕೊಡಲಾಗುತ್ತಿದ್ದು ಗ್ರಾಮಗಳ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಆರೋಪಿಸಿದರು. ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲಾ ವಿಚಾರಗಳನ್ನು ಗಮನಕ್ಕೆ ತಂದು ಚರ್ಚಿಸಿ ಆನಂತರ ಅನುಷ್ಠಾನಕ್ಕೆ ಮುಂದಾಗಬೇಕಿದೆ ಎಂದು ಆಗ್ರಹಿಸಿದರು. ಇದೇ ರೀತಿ ಮುಂದುವರೆದರೆ ಮುಂಬರುವ ಸಭೆಗಳನ್ನು ಸಹ ಬಹಿಷ್ಕರಿಸಲಾಗುವುದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಪಂ ಅಧ್ಯಕ್ಷ ಬಿ.ಕೆ.ಚೆಲುವರಾಜು, ಪ್ರಸಕ್ತ ಆಡಳಿತ ಮಂಡಳಿ ಅವಧಿಯಲ್ಲಿ ಗ್ರಾಮ ಸರ್ವಾಂಗೀಣ ಅಭಿವೃದ್ಧಿ ಕಂಡಿದೆ. ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದರು.
ಪ್ರತಿ ಸಭೆಯಲ್ಲಿ ಬಿಲ್ ಗಳ ಬಗ್ಗೆ ಸದಸ್ಯರ ಗಮನಕ್ಕೆ ತಂದು ಅನುಮೋದನೆ ಪಡೆದುಕೊಳ್ಳಲಾಗುತ್ತಿದೆ. ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಪ್ರತಿ ತಿಂಗಳ ಸಭಾ ನಡಾವಳಿ ಪ್ರಕಾರವೇ ತಾನು ಕಾರ್ಯನಿರ್ವಹಿಸುತ್ತಿದ್ದೇನೆ. ಇರುವಂತಹ ಅನುದಾನವನ್ನು ಸಮಪಾಲು ಪ್ರತಿ ಸದಸ್ಯರಿಗೆ ಒದಗಿಸಲಾಗುತ್ತಿದೆ ಎಂದು ಪಿಡಿಒ ಸುಮೇಶ್ ತಿಳಿಸಿದರು.
23 ಸದಸ್ಯರ ಪೈಕಿ 11 ಮಂದಿ ಸದಸ್ಯರು ಮಾತ್ರ ಪಾಲ್ಗೊಂಡಿದ್ದರು.
Back to top button
error: Content is protected !!