ಕುಶಾಲನಗರ, ಆ 18: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಡಿಕೇರಿಯಲ್ಲಿ ಕಾರ್ಯಕ್ರಮ ಮುಗಿಸಿ ಹಿಂತಿರುಗುವ ಮಾರ್ಗಮಧ್ಯೆ ಗುಡ್ಡೆಹೊಸೂರಿನಲ್ಲಿ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮುತ್ತಿಗೆ ಹಾಕಿದರು.
ಗುಡ್ಡೆಹೊಸೂರು ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ನೆರೆದ ಪ್ರತಿಭಟನಾಕಾರರು ಸಿದ್ದರಾಮಯ್ಯ ಪರ ಧಿಕ್ಕಾರ ಕೂಗಿ ಆಕ್ರೋಷ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಕಾರು ಹಾದುಹೋಗುತ್ತಿದ್ದಂತೆ ಸಾವರ್ಕರ್ ಭಾವಚಿತ್ರ ಹಿಡಿದು ಕಾರಿಗೆ ಮುತ್ತಿಗೆ ಹಾಕಲಾಯಿತು.
ಇದೇ ಸಂದರ್ಭ ಕಾರ್ಯಕರ್ತನೋರ್ವ ಕಾರಿಗೆ ಮೊಟ್ಟೆ ಎಸೆದ ಘಟನೆ ನಡೆಯಿತು.
ಈ ಮಧ್ಯೆ ಕಾರಿಗೆ ಕಲ್ಲು ಎಸೆಯುವ ಪ್ರಯತ್ನ ನಡೆಯಿತು ಎಂದು ಪೊಲೀಸರು ಪ್ರತಿಭಟನಾಕಾರರ ಮೇಲೆ ಶಕ್ತಿ ಪ್ರದರ್ಶಿಸಿದರು. ಈ ಸಂದರ್ಭ ಕಾರ್ಯಕರ್ತರು ಪೊಲೀಸರ ಮಧ್ಯೆ ತೀವ್ರ ತಳ್ಳಾಟ ನೂಕಾಟ ಉಂಟಾಗಿ ಮಾತಿಗೆ ಮಾತು ಬೆಳೆದ ಹಿನ್ನಲೆಯಲ್ಲಿ ಕೂಡುಮಂಗಳೂರು ಗ್ರಾಪಂ ಉಪಾಧ್ಯಕ್ಷ ಭಾಸ್ಕರ್ ನಾಯಕ್ ಮತ್ತು ಸೋಮವಾರಪೇಟೆ ಮಂಡಲ ಬಿಜೆಪಿ ವಕ್ತಾರ ಕೆ.ಜಿ.ಮನು ಅವರನ್ನು ಪೊಲೀಸರು ಎಳೆದೊಯ್ದು ಪೊಲೀಸ್ ವಾಹನಕ್ಕೆ ಹತ್ತಿಸಿದರು. ಇದರಿಂದ ಕೆರಳಿದ ಮಂಡಲ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೃಷ್ಣಪ್ಪ, ಜಿಪಂ ಮಾಜಿ ಸದಸ್ಯೆ ಮಂಜುಳಾ, ಹಿಂಜಾವೆಯ ಮಂಜು, ಗುಡ್ಡೆಹೊಸೂರು, ಕೂಡುಮಂಗಳೂರು ಗ್ರಾಪಂ ಸದಸ್ಯರಾದ ಪ್ರವೀಣ್, ನಿತ್ಯಾನಂದ, ಮಣಿಕಂಠ ಸ್ವಯಂಪ್ರೇರಿತವಾಗಿ ಪೊಲೀಸ್ ವಾಹನಕ್ಕೆ ಹತ್ತಿದರು. ಈ ನಡುವೆ ಪ್ರತಿಭಟನಾಕಾರರು ಪೊಲೀಸರ ವಿರುದ್ದವೇ ಧಿಕ್ಕಾರ ಕೂಗಿ ಆಕ್ರೋಷ ವ್ಯಕ್ತಪಡಿಸಿದರು.
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅಯ್ಯಪ್ಪ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದರು.
ಈ ಸಂದರ್ಭ ಕುಡಾ ಅಧ್ಯಕ್ಷ ಎಂ.ಎಂ.ಚರಣ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಅಮೃತ್ ರಾಜ್, ಜನಪ್ರತಿನಿಧಿಗಳಾದ ಇಂದಿರಾ ರಮೇಶ್, ಶೈಲಾ ಕೃಷ್ಣಪ್ಪ, ಪ್ರಮುಖರಾದ ನವನೀತ್, ಚಂದ್ರಶೇಖರ್ ಹೆರೂರು, ಸುಮನ್, ವೇದಾವತಿ, ಬಿ.ಜೆ.ಅಣ್ಣಯ್ಯ ಮತ್ತಿತರರು ಇದ್ದರು.