ಕುಶಾಲನಗರ, ಆ 14: ಸ್ವಾತಂತ್ರ್ಯ ಹೋರಾಟಲ್ಲಿ ಪಾಲ್ಗೊಳ್ಳದೆ ಸಂಗ್ರಾಮಕ್ಕೆ ವಿರುದ್ದವಾಗಿ ಬ್ರಿಟೀಷರ ಪರವಾಗಿ ಕೆಲಸ ಮಾಡಿದ ಬಿಜೆಪಿ ಚುನಾಚಣೆ ಸಮೀಪಿಸುತ್ತಿದ್ದಂತೆ ತೋರಿಕೆ ರಾಷ್ಟ್ರಪ್ರೇಮ ಮೂಲಕ ಜನರನ್ನು ಮರಳು ಮಾಡಲು ಹೊರಟಿದೆ ಎಂದು ಕಾಂಗ್ರೆಸ್ ಮುಖಂಡ ಚಂದ್ರಮೌಳಿ ಆರೋಪಿಸಿದರು.
ಕುಶಾಲನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಕೇಸರಿಕರಣ ಮಾಡುವತ್ತ ಗಮನ ಕೆಂದ್ರೀಕರಿಸಿದ್ದು, ಕೋಮು ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿದೆ. ಇರುವುದನೆಲ್ಲ ಮಾರಿ ಅಭಿವೃದ್ಧಿಯನ್ನೇ ಮರೆತಿದೆ. ಇದೆಲ್ಲವನ್ನು ಗಮನಿಸಿದ ಜನತೆ ಕಾಂಗ್ರೆಸ್ ನತ್ತ ಒಲವು ತಾಳುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆ ಹಾಗೂ ಸಿದ್ದರಾಮೋತ್ಸವದಲ್ಲಿ ಕಂಡುಬಂದ ಜನಸಾಗರ ಸ್ಪಷ್ಟ ಉದಾಹರಣೆ ಎಂದರು.
ದೇಶ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಹಿಂದಿನ ದಿನಗಳನ್ನು ನೋಡಿದಾಗ ಸಾಕಷ್ಡು ಬಲಿದಾನ , ತ್ಯಾಗವನ್ನು ನಾವು ಕಾಣುತ್ತೇವೆ.
ಸ್ವಾತಂತ್ರ್ಯದ ಬಳಿಕ ಜನತೆ ಕಾಂಗ್ರೆಸ್ ಅನ್ನು ಒಪ್ಪಿದರು. ಅಧಿಕಾರಕ್ಕೆ ತಂದರು. ಅರವತ್ತು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಿತು.
ಆದರೆ ಬಿಜೆಪಿ, ಆರ್ ಎಸ್ ಎಸ್ ಸ್ವಾತಂತ್ರ್ಯ ಹೋರಾಟವನ್ನೇ ಮಾಡಿಲ್ಲ. ಅವರದ್ದು ರಕ್ತ ಸಿಕ್ತ ಅಧ್ಯಾಯ ಮಾತ್ರ. ಬಿಜೆಪಿಗೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ಅರಿವೂ ಇಲ್ಲ, ದೇಶದ ಹಿತಾಸಕ್ತಿಯೂ ಇಲ್ಲ. ಮೋದಿಗೆ ದೇಶದ ಬಗ್ಗೆ ಕಿಂಚಿತ್ತು ಅರಿವಿಲ್ಲ. ಪತ್ರಿಕೆಗಳಿಗೆ ನೀಡಿದ ಜಾಹಿರಾತಿನ
ಸ್ವಾತಂತ್ರ್ಯ ಹೋರಾಟಗಾರರ ಪೈಕಿ ನೆಹರೂ ಪೋಟೊ ಇಲ್ಲ. ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಸೆರೆ ವಾಸ ಅನುಭವಿಸಿದ್ದಾರೆ. ಇಷ್ಟಾದರೂ ಅವರನ್ನು ಮರೆತ ಬಿಜೆಪಿ ಇಲ್ಲಿಯೂ ರಾಜಕೀಯ ಮಾಡುತ್ತಿದೆ ಎಂದು ಚಂದ್ರಮೌಳಿ ಬೇಸರ ವ್ಯಕ್ತಪಡಿಸಿದರು.
ಕೆಪಿಸಿಸಿ ವಕ್ತಾರ ಲಕ್ಷಣ್ ಮಾತನಾಡಿ, ಕಾಂಗ್ರೆಸ್ ಪಂಚವಾರ್ಷಿಕ ಯೋಜನೆಯ ಮೂಲಕ ದೊಡ್ಡ ಕಾರ್ಖಾನೆಗಳನ್ನು ಸ್ಥಾಪಿಸಿ ಅಭಿವೃದ್ಧಿಗೆ ನಾಂದಿ ಹಾಡಿತು. ಆದರೆ ಬಿಜೆಪಿ ಅದನ್ನು ಅದಾನಿ ಅಂಬಾನಿಗೆ ಮಾರುತ್ತಿದೆ. ಮೋದಿ ಅಧಿಕಾರಕ್ಕೆ ಬಂದಮೇಲೆ ಬೆಲೆ ಏರಿಕೆಯ ಜತೆಗೆ ನೂರ ಐವತ್ತೈದು ಲಕ್ಷ ಕೋಟಿ ಸಾಲ ಮಾಡಿದೆ. ಪ್ರತಿಯೊಬ್ಬ ಪ್ರಜೆಯ ಮೇಲೆ ಮೂರು ಲಕ್ಷ ಸಾಲ ಹೊರಿಸಿದೆ. ದೇಶದ ಯುವಕರನ್ನೇ ದಿಕ್ಕು ತಪ್ಪಿಸುತ್ತಿದೆ. ಯುವ ಜನತೆ ಕೆಲಸವಿಲ್ಲದೆ, ಪರಿತಪಿಸುವ ಸ್ಥಿತಿ ಬಂದಿದೆ. ಮೋದಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮ. ಅದಕ್ಕಾಗಿಯೇ ದೇಶವನ್ನು ಈ ಸ್ಥಿತಿಗೆ ತಂದು ತಲುಪಿಸಿದ್ದಾರೆ. ಇದೆಲ್ಲವನ್ನೂ ಜನತೆ ಗಮನಿಸಿದ್ದಾರೆ. ಮುಂದೆ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆ ಎಂದು ಲಕ್ಷ್ಮಣ್ ಭವಿಷ್ಯ ನುಡಿದರು. ಖಾದಿ ಉದ್ಯಮವನ್ನು ನಿರ್ಲಕ್ಷಿಸಿ ಪಾಲಿಸ್ಟರ್ ಅಮದು ಮಾಡಿಕೊಂಡು ಧ್ವಜ ತಯಾರಿಸಿ ಹಣಕ್ಕಾಗಿ ಮಾರಿಕೊಂಡಿದ್ದಾರೆ. ಮುಂದೊಂದು ದಿನ ಕಡ್ಡಾಯವಾಗಿ ತಲೆಮೇಲೆ ರಾಷ್ಟ್ರಧ್ವಜ ಹಾರಿಸಬೇಕೆಂಬ ಕಾನೂನು ತರುತ್ತಾರೆ ಎಂದು ವ್ಯಂಗ್ಯವಾಡಿದರು.
ಜೆಡಿಎಸ್ ಜೋಕರ್ ಇದ್ದಂತೆ. ಕುಮಾರ ಸ್ವಾಮಿ ಈ ಬಾರಿಯೂ ಮುಖ್ಯಮಂತ್ರಿ ಸ್ಥಾನಕ್ಕೆ ಟವಲ್ ಹಾಕುವ ಯೋಜನೆ ನಡೆಯುತ್ತಿದೆ. ಆದರೆ ಅದು ಸಫಲವಾಗುವುದಿಲ್ಲ ಎಂದು ಲಕ್ಷಣ್ ವ್ಯಂಗ್ಯವಾಡಿದರು.
ಕೊಡಗು ಸೇರಿದಂತೆ ರಾಜ್ಯದಲ್ಲಿ ಜನರು ಬದಲಾವಣೆ ತರಬೇಕಿದೆ. ಕಾಂಗ್ರೆಸ್ ಪರ ಒಲವು ತೋರಬೇಕಿದೆ. ಮತ್ತೆ ಬಿಜೆಪಿಯನ್ನು ಆರಿಸಿದಲ್ಲಿ ದ.ಕ.ಜಿಲ್ಲೆಯಂತೆ ಇಡೀ ರಾಜ್ಯ ಹಾಗೂ ದೇಶವನ್ನು ಕೋಮುಸಂಘರ್ಷದ ಭೂಮಿಯಾಗಿ ಪರಿವರ್ತನೆ ಮಾಡುವ ಆತಂಕ ವ್ಯಕ್ತಪಡಿಸಿದರು.
ನಂತರ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ, ಬಿಜೆಪಿ ಎಂದೂ ಕೂಡ ದೇಶದ ಸ್ವಾತಂತ್ರ್ಯವನ್ನು ಬಯಸಿಲ್ಲ.ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನೇ ಮಾಡಲಿಲ್ಲ. ಸ್ವಾತಂತ್ರ್ಯ ಹೋರಾಟ ಮಾಡಿದ ಗಾಂಧಿಯನ್ನೇ ಕೊಂದ ಆರ್ ಎಸ್ ಎಸ್ ಗೆ ದೇಶದ ಬಗ್ಗೆ ಕಾಳಜಿ ಇಲ್ಲ. ಈ ಬಾರಿಯ ಅಮೃತ ಮಹೋತ್ಸವ ದೇಶ ಭಕ್ತಿಯಲ್ಲ. ಇದರಲ್ಲೂ ರಾಜಕೀಯವಿದೆ. ಮುಂದಿನ ಚುನಾವಣೆಯಲ್ಲಿ ಜನರನ್ನು ಸೆಳೆಯುವ ಗಿಮಿಕ್ ಇದು. ಆದರೆ ಬಿಜೆಪಿ ತಂತ್ರ ಫಲಿಸುವುದಿಲ್ಲ ಎಂದು ಮಂಜುನಾಥ್ ಹೇಳಿದರು.
ಜಿಲ್ಲೆಯಲ್ಲಿ ಪ್ರತಿ ವರ್ಷ ಪ್ರವಾಹ ಪರಿಸ್ಥಿತಿ ಕಾಡುತ್ತಿದ್ದರೂ, ಜನತೆಯ ರಕ್ಷಣೆಯತ್ತಲೂ ಜಿಲ್ಲೆಯ ಶಾಸಕರು ವಿಫಲವಾಗಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭ ಡಿಸಿಸಿ ಸದಸ್ಯ ಸುರೇಶ್, ಕೆಪಿಸಿಸಿ ಎಸ್ಟಿ ಘಟಕದ ಸಂಘಟನಾ ಕಾರ್ಯದರ್ಶಿ ವೈ.ಟಿ ಪರಮೇಶ್, ಪ್ರಮುಖರಾದ ಗಂಗಾಧರ್, ಚಂದ್ರಶೇಖರ್ ಹಾಜರಿದ್ದರು.