ಸವಿ ರುಚಿ

ಕುಶಾಲನಗರ ಗೌಡ ಸಮಾಜದಲ್ಲಿ ನಡೆದ ಆಟಿ ಸಂಭ್ರಮ-2022

ಕುಶಾಲನಗರ ಆ 09:
ಪ್ರತೀ ವರ್ಷದ ಮಳೆಗಾಲದ ಕೊರೆವ ಚಳಿಯಲ್ಲಿ ದೇಹವನ್ನು ರೋಗ ರುಜಿನಗಳಿಂದ ದೂರವಿಡುವ ಹಾಗು ದೇಹವನ್ನು ಬೆಚ್ಚಗೆ ಇಡುವಂತಹ ಬಗೆ ಬಗೆಯ ಖಾದ್ಯಗಳನ್ನು ಪ್ರದರ್ಶಿಸುವ ” ಆಟಿ ಸಂಭ್ರಮ 2022″ ಕುಶಾಲನಗರದ ಗೌಡ ಸಮಾಜದಲ್ಲಿ ಜರುಗಿತು.
ಕುಶಾಲನಗರದ ಪದ್ಮಾವತಿ ಗೌಡ ಮಹಿಳಾ ಒಕ್ಕೂಟ, ಗೌಡ ಮಹಿಳಾ ಸ್ವ ಸಹಾಯ ಸಂಘ, ಗೌಡ ಸಮುದಾಯದ ಮಾಜಿ ಯೋಧರ ಸಂಘ, ಯುವ ಘಟಕ ಗಳ ಸಹಯೋಗದ ವತಿಯಿಂದ ನಡೆದ ಆಟಿ ಸಂಭ್ರಮದಲ್ಲಿ ರೋಗ ನಿರೋಧಕ ಶಕ್ತಿ ವೃದ್ದಿಸುವ ಆಟಿ ಸೊಪ್ಪಿನಿಂದ ತಯಾರಿಸಿದ ಆಟಿ ಹಲ್ವಾ, ಆಟಿ ಪಾಯಸ, ಆಟಿ ಸೊಪ್ಪಿನ ನೀರು ದೋಸೆ, ಆಟಿ ಸೊಪ್ಪಿನ ಇಡ್ಲಿ, ಹಾಗೆಯೇ ಕಣಿಲೆ ಯಿಂದ ತಯಾರಿಸಿದ ಕಣಿಲೆ ಪಲ್ಯ, ಕಣಿಲೆ ಸಾರು, ಪತ್ರೊಡೆ, ಕಾಡು ಮಾವಿನ ಹಣ್ಣಿನ ಸಾರು, ಮೀನು ಕರಿ ಸಾರು, ಕೋಳಿ ಕಡುಬು ಸುಕ್ಕ ಸೇರಿದಂತೆ ಹತ್ತಾರು ಬಗೆ ಬಗೆಯ ಖಾದ್ಯಗಳು ನೋಡುಗರ ಬಾಯಲ್ಲಿ ನೀರು ಹರಿಸಿದವು.
ಹಾಗೆಯೇ ಕೊಡನೋಳನ ಪ್ರಮೀಳ ಎಂಬವರು ತಯಾರಿಸಿ ತಂದ ಆಟಿ ಸೊಪ್ಪಿನ ರಸದ ಕಾಫಿ ನೋಡುಗರ ಗಮನ ಸೆಳೆದರೆ, ಕರಂದ್ಲಾಜೆ ಕಲಾ ಆನಂದ್ ಅವರು ಸುರಿವ ಮಳೆ – ಕೊರೆವ ಚಳಿಯಿಂದ ಶೀತಕ್ಕೆ ತುತ್ತಾಗುವ ದೇಹವನ್ನು ಬೆಚ್ಚಗಿಡಬಲ್ಲ ಪಾನೀಯಗಳಾದ ಐರಿಶ್ ಚಾಕೋಲೇಟ್ ಕ್ರೀಂ ಪಂಚ್, ಬ್ರೆಜಿಲಿಯನ್ ಕಾಪುಸಿನೊ ಕೆನೋಫಿ, ಸ್ವಿಸ್ ರೋಸ್ ಕೋಗ್ನಾಕ್, ಕೆರೇಬಿಯನ್ ಕೋಕೋನಟ್ ಮಿಲ್ಕ್ ಮಾಕ್ ಟೇಲ್ ಬಾಟಲಿಗಳು ನೋಡುಗರನ್ನು ಆಕರ್ಷಿಸಿದವು.
ಹಾಗೆಯೇ ಕುದುಪಜೆ ದೇವಕಿ ಚಂದ್ರೇಶ್ ಅವರು ಸಿದ್ದಪಡಿಸಿ ತಂದಿದ್ದ ಕೋಳಿ ಕಡುಬು ಸುಕ್ಕಾ, ಪೊನ್ನಚ್ಚನ ಕವಿತಾ ಮೋಹನ್ ಅವರು ತಂದಿದ್ದ ಆಟಿ ಕುಕೀಸ್ ಹಾಗು ಆಟಿ ಸೊಪ್ಪಿನ ಚೌ ಚೌ ಬಾತ್, ಕುದುಪಜೆ ಗಿರಿಜಾವತಿ, ತೆಕ್ಕಡೆ ಹೇಮಾ ಮಾಲಿನಿ, ಕರ್ಕರನ ಬೀನಾ ಅವರು ತಯಾರಿಸಿದ್ದ ಮತ್ತಿ ಮೀನಿನ ಸಾರು, ಹಲಸಿನ ಬೀಜದ ಚಟ್ನಿ, ಆಟಿ ಹಲ್ವಾ, ಬೋಳನ ಸುಶೀಲ ಅವರು ಸಿದ್ದಪಡಿಸಿದ್ದ ಆಟಿ ಸೊಪ್ಪಿನ ನೀರು ದೋಸೆ, ಮೀನು ಕರಿ ಸಾರು ತಂದ ಚೀಯಂಡಿ ಶಾಂತಾ, ಪತ್ರೊಡೆ ಉಪ್ಪಿಟ್ಟು ಹಾಗು ಆಟಿ ಸೊಪ್ಪಿನ ಇಡ್ಲಿ ಮಾಡಿ ತಂದ ಚಿಲ್ಲನ ಲತಾ ಗಣಿ ಪ್ರಸಾದ್, ಕಣಿಲೆ ಪಲ್ಯ ಮಾಡಿ ತಂದ ನಡುವಟ್ಟಿರಾ ವನಿತಾ ಸುಜಿತ್, ಕಾಡು ಮಾವಿನ ಹಣ್ಣಿನ ಸಾಂಬಾರ್ ಮಾಡಿ ತಂದ ಸೂದನ ಲೀಲಾ ಗೋಪಾಲ್, ಕಣಿಲೆ ಸಾರು ಮಾಡಿ ತಂದ ಕುಲ್ಲಚ್ಚನ ಭಾಗೀರಥಿ ಮತ್ತಿತರರು ತಾವು ತಂದ ಖಾದ್ಯಗಳನ್ನು ಪ್ರದರ್ಶನಕ್ಕಿಟ್ಟರು.
ಖಾದ್ಯಗಳ ಪ್ರದರ್ಶನಕ್ಕೂ ಮುನ್ನಾ ನಡೆದ
ಕಾರ್ಯಕ್ರಮವನ್ನು ಕೊಳಂಬೆ ಯಮುನಾ ರಾಜಪ್ಪ ಉದ್ಘಾಟಿಸಿ ಆಟಿ ಸೊಪ್ಪಿನ ತಿನಿಸುಗಳ ಮಹತ್ವದ ಕುರಿತು ಮಾತನಾಡಿದರು.
ಪದ್ಮಾವತಿ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಅಚ್ಚಾಂಡಿರ ಲತಾ, ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಕುಲ್ಲಚ್ಚನ ಭಾಗೀರಥಿ, ಗೌಡ ಸಮಾಜದ ಅಧ್ಯಕ್ಷ ಕೂರನ ಪ್ರಕಾಶ್, ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ದೇವಜನ ಚಿಣ್ಣಪ್ಪ, ಕೊಡಗು ಅರೆ ಭಾಷೆ ಗೌಡ ಯುವಕ ಸಂಘದ ಅಧ್ಯಕ್ಷ ತುಂತಜೆ ದಯಾನ್ ಇದ್ದರು.
ಪಟ್ಟಂದಿ ಬೀನಾ ಸೀತಾರಾಂ ಸ್ವಾಗತಿಸಿದರು. ಬೈಮನ ಭೋಜಮ್ಮ ನಿರೂಪಿಸಿದರು.

Leave a Reply

Your email address will not be published. Required fields are marked *

Back to top button
error: Content is protected !!