ಕುಶಾಲನಗರ, ಡಿ. 21:
ಭಾರತ್ ಸ್ಕೌಟ್ಸ್ & ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆ, ಕುಶಾಲನಗರ ಸ್ಥಳೀಯ ಸಂಸ್ಥೆ ವತಿಯಿಂದ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಶನಿವಾರ
ಸ್ಕೌಟ್ಸ್ & ಗೈಡ್ಸ್ ಮಕ್ಕಳ ಮೇಳ( ರ್ಯಾಲಿ ) ದ ಅಂಗವಾಗಿ
ಕುಶಾಲನಗರ ಪಟ್ಟಣದಲ್ಲಿ ಕೊಡಗು ಜಿಲ್ಲಾಮಟ್ಟದ ಪರಿಸರ ಜಾಗೃತಿ ಜಾಥಾ ನಡೆಸಲಾಯಿತು.
ಜಿಲ್ಲೆಯ ವಿವಿಧ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಂದ ಆಗಮಿಸಿದ್ದ. 500 ಕ್ಕೂ ಹೆಚ್ಚು ಮಂದಿ
ಸ್ಕೌಟ್ಸ್ & ಗೈಡ್ಸ್ ವಿದ್ಯಾರ್ಥಿಗಳು ಕುಶಾಲನಗರ ಪಟ್ಟಣದಲ್ಲಿ ಬೃಹತ್ ಪರಿಸರ ಜಾಗೃತಿ ಆಂದೋಲನ ನಡೆಸುವ ಮೂಲಕ ಜನರಲ್ಲಿ ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುತ್ತಿರುವ ಮಾಲಿನ್ಯದ ದುಷ್ಪರಿಣಾಮಗಳು, ನೆಲ- ಜಲ, ಅರಣ್ಯ, ವನ್ಯಜೀವಿಗಳ ಸಂರಕ್ಷಣೆ, ಜೀವಿ- ಸಂಕುಲಗಳ ಸಂರಕ್ಷಣೆ ಕುರಿತಾದ ಪರಿಸರ ಘೋಷಣೆಗಳನ್ನು ಪ್ರಚುರಪಡಿಸುವ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದರು.
ಕುಶಾಲನಗರ ಪಿ.ಎಂ.ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾವರಣದಿಂದ ಆರಂಭಗೊಂಡ ಪರಿಸರ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ನೀಡುವ ಮೂಲಕ ಚಾಲನೆ ನೀಡಿದ ಮಡಿಕೇರಿ ಕ್ಷೇತ್ರದ ಶಾಸಕ ಡಾ ಮಂತರ್ ಗೌಡ ಮಾತನಾಡಿ,
ಪ್ರತಿಯೊಬ್ಬರೂ ಪರಿಸರದ ಬಗ್ಗೆ ಕಾಳಜಿ ವಹಿಸಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡುವುದು
ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಉತ್ತಮ ಪರಿಸರ ವ್ಯವಸ್ಥೆ ಹೊಂದಿರುವ ಕೊಡಗಿನ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಪರಿಸರದ ಮೇಲೆ ಇಂದು ಆಗುತ್ತಿರುವ ಹಾನಿಯನ್ನು ಅರಿತು ಅದರ ಸಂರಕ್ಷಣೆಯ ಬಗ್ಗೆಯೂ ಆಲೋಚಿಸಬೇಕಾದಾದು ಅತ್ಯಗತ್ಯ ಇದೆ ಎಂದರು.
*”ಪರಿಸರ ಸಂರಕ್ಷಣೆಯಲ್ಲಿ ನಮ್ಮೆಲ್ಲರ ಹೊಣೆ*” ಎಂಬ ಕಾರ್ಯಕ್ರಮದಲ್ಲಿ
ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಜಿಲ್ಲೆಗೆ ಮಾದರಿಯಾಗುವಂತೆ ಬೃಹತ್ ಪರಿಸರ ಜಾಗೃತಿ ಆಂದೋಲನ ಹಮ್ಮಿಕೊಂಡು ಜನರಲ್ಲಿ ಪರಿಸರ ಪ್ರಜ್ಞೆ ಬೆಳೆಸುತ್ತಿರುವುದನ್ನು ಶಾಸಕ ಡಾ ಮಂತರ್ ಗೌಡ ಶ್ಲಾಘಿಸಿದರು.
ಮಡಿಕೇರಿಯಲ್ಲಿನ
ಸ್ಕೌಟ್ಸ್ ಮತ್ತು ಗೈಡ್ಸ್ ಭವನ ಕಟ್ಟಡದ ದುರಸ್ತಿ ಗಾಗಿ ತಾವುಗಳು ಶಾಸಕರ ನಿಧಿಯಿಂದ ರೂ.3 ಲಕ್ಷ ಮೊತ್ತವನ್ನು ಮಂಜೂರುಗೊಳಿಸಿದ್ದು, ಮುಂದಿನ ದಿನಗಳಲ್ಲಿ ಸ್ಕೌಟ್ಸ್, ಗೈಡ್ಸ್ ಭವನ ನಿರ್ಮಾಣಕ್ಕೆ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಭಾರತ್ ಸ್ಕೌಟ್ಸ್, ಗೈಡ್ಸ್ ನ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ಮಾತನಾಡಿ,
ಸ್ವಚ್ಛ ಭಾರತಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಇಂತಹ ಪರಿಸರ ಕಾರ್ಯಕ್ರಮಗಳು ಪೂರಕವಾಗಿವೆ ಎಂದರು.
ಪ್ಲಾಸ್ಟಿಕ್ ಬಳಕೆ ನಿರ್ಮೂಲನೆ ಕುರಿತು ಇಂದು ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದರು.
ಪರಿಸರ ಜಾಗೃತಿಯ ಮಹತ್ವ ಕುರಿತು ಮಾಹಿತಿ ನೀಡಿದ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿಯೂ ಆದ ಪರಿಸರ ಸಂಘಟಕ ಟಿ.ಜಿ.ಪ್ರೇಮಕುಮಾರ್, ನಾವು ನಾಳಿನ ಉತ್ತಮ ಭವಿಷ್ಯಕ್ಕಾಗಿ
ನೆಲ- ಜಲ, ಅರಣ್ಯ ಹಾಗೂ ಪರಿಸರ ಸಂರಕ್ಷಣೆಗೆ ಪಣ ತೊಡಗಬೇಕು. ಇಂತಹ ಪರಿಸರ ಜಾಥಾಗಳು ಮಕ್ಕಳು ಭವಿಷ್ಯದಲ್ಲಿ
ಪರಿಸರ ರಾಯಭಾರಿಗಳಾಗಿ ರೂಪುಗೊಳ್ಳಲು ಸಹಕಾರಿಯಾಗಿವೆ ಎಂದರು.
ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯ,
ಕುಢಾದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಬಿಇಓ ಎಸ್.ಭಾಗ್ಯಮ್ಮ,
ಸ್ಕೌಟ್ಸ್, ಗೈಡ್ಸ್ ನ ಕುಶಾಲನಗರ
ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ
ಪ್ರವೀಣ್ ದೇವರಗುಂಡ ಸೋಮಪ್ಪ, ಕಾರ್ಯಾಧ್ಯಕ್ಷ ಎ.ಎಂ.ತಮ್ಮಯ್ಯ, ಉಪಾಧ್ಯಕ್ಷರಾದ
ಕೆ.ವಿ.ಅರುಣ್, ಕೆ.ಪಿ.ರಾಜು, ಕಾರ್ಯದರ್ಶಿ ಎಂ.ಎಸ್.ಗಣೇಶ್, ನಿವೃತ್ತ ಕರ್ನಲ್ ಸಿ.ಎಂ.
ಕಾವೇರಪ್ಪ, ಜಿಲ್ಲಾ
ಸ್ಕೌಟ್ಸ್ ಆಯುಕ್ತ ಜಿಮ್ಮಿ ಸಿಕ್ವೇರಾ,
ಗೈಡ್ಸ್ ಸಂಸ್ಥೆಯ ಪ್ರಮುಖರಾದ
ಎಚ್.ಆರ್.ಮುತ್ತಮ್ಮ,
ಎಂ.ಧನಂಜಯ, ಮೈಥಿಲಿರಾವ್, ಸಿ.ಎಂ.ಸುಲೋಚನ,
ಕೆ.ಬಿ.ಉಷಾರಾಣಿ, ಕಾರ್ಯದರ್ಶಿ ವಸಂತಿ, ಖಜಾಂಚಿ ಮುದ್ದಯ್ಯ, ಜಿಲ್ಲಾ ಸಂಘಟಕಿ ಯು.ಸಿ.ದಮಯಂತಿ,
ಕಾವೇರಿ ನದಿ ಸಂರಕ್ಷಣಾ ಸಂಚಾಲಕ ಎಂ.ಎನ್.ಚಂದ್ರಮೋಹನ್,
ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕಿ ಬಿ.ಆರ್.ಗಾಯಿತ್ರಿ, ತಾಲ್ಲೂಕು ದೈಹಿಕ ಶಿಕ್ಷಣ ಅಧೀಕ್ಷಕಿ ಸುಕುಮಾರಿ,
ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಬಿ.ಎನ್.ಪುಷ್ಪ,
ಸಂಪನ್ಮೂಲ ವ್ಯಕ್ತಿ ಡಾ ಸದಾಶಿವಯ್ಯ ಎಸ್.ಪಲ್ಲೇದ್,
ಪಿ.ಎಂ.ಶ್ರೀ ಶಾಲೆಯ
ಎಸ್ ಡಿ ಎಂ ಸಿ ಅಧ್ಯಕ್ಷ ಬಿ.ಎಸ್
ಚಂದನ್ ಕುಮಾರ್, ಮುಖ್ಯ ಶಿಕ್ಷಕಿ ಎಂ.ಎಂ.ಭಾರತಿ, ಸಿ.ಆರ್.ಪಿ.ಗಳಾದ ಟಿ.ಈ.ವಿಶ್ವನಾಥ್, ಶೃತಿ, ಪ್ರಮುಖರಾದ ಜಾಜಿ ಮತ್ತಿತರರು ಇದ್ದರು.
ಕುಶಾಲನಗರ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಾಗಿದ ಪರಿಸರ ಜಾಥಾದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ನ ಸ್ವಯಂ ಸೇವಕರು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಭಿತ್ತಿ ಫಲಕಗಳನ್ನು ಹಿಡಿದು ವಿವಿಧ ಪರಿಸರ ಘೋಷಣೆಗಳನ್ನು ಪ್ರಚುರಪಡಿಸುವ ಮೂಲಕ
ನಾಗರಿಕರಲ್ಲಿ ಪರಿಸರ ಪ್ರಜ್ಞೆ ಮೂಡಿಸಿದರು.
ವಿದ್ಯಾರ್ಥಿಗಳು ಜಾಥಾದಲ್ಲಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಇರುವುದೊಂದೇ ಭೂಮಿ, ಇದರ ಸಂರಕ್ಷಿಸಿ, ಸಂಪೋಷಿಸಿ,
ಪ್ಲಾಸ್ಟಿಕ್ ತ್ಯಜಿಸಿ ಮಾಲಿನ್ಯ ತಡೆಯಿರಿ, ಜಲವೇ ಜೀವಜಾಲ, ಹಸಿರೇ ಉಸಿರು, ನೆಲ – ಜಲ, ಅರಣ್ಯ, ಜೀವ ಸಂಕುಲಗಳ ಸಂರಕ್ಷಣೆ , ಪಶ್ಚಿಮಘಟ್ಟಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಬೈಸಿಕಲ್ ಬಳಸಿ ಇಂಧನ ಉಳಿಸಿ,
ಜೀವನದಿ ಕಾವೇರಿ ಸಂರಕ್ಷಿಸಿ, ಜಲಮೂಲಗಳ ಸಂರಕ್ಷಿಸಿ ಎಂಬಿತ್ಯಾದಿ ಪರಿಸರ ಪೂರಕ ಘೋಷಣೆಗಳ ಕುರಿತು ನಾಗರಿಕರ ಗಮನ ಸೆಳೆದರು.
Back to top button
error: Content is protected !!