ಸುದ್ದಿಗೋಷ್ಠಿ

ರೋಡ್ ಮಾರ್ಜಿನ್‌ ಬಿಡದೆ ವಾಣಿಜ್ಯ ಕಟ್ಟಡಗಳ‌ ನಿರ್ಮಾಣ-ಕ್ರಮವಹಿಸದ ಪುರಸಭೆ: ಆರೋಪ

ಕುಶಾಲನಗರ, ನ 15: ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಮುನ್ಸಿಪಲ್ ವಸತಿ ಗೃಹ ಮುಂಭಾಗ ರಾಜ್ಯ ಹೆದ್ದಾರಿ ನಿಯಮ‌ ಉಲ್ಲಂಘಿಸಿ ಅಕ್ರಮವಾಗಿ ವಾಣಿಜ್ಯ ಕಟ್ಟಡಗಳು‌ ನಿರ್ಮಾಣಗೊಳ್ಳುತ್ತಿವೆ ಎಂದು ದಂಡಿನಪೇಟೆ ನಿವಾಸಿಗಳು‌ ಆರೋಪಿಸಿದ್ದಾರೆ.

ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಂಡಿನಪೇಟೆ ನಿವಾಸಿಗಳಾದ ಮಹಮ್ಮದ್ ಮುಮ್ತಾಜ್, ಹೆಚ್.ನೂರುಲ್ಲಾ, ಎಂ.ಅಬ್ದುಲ್ ವಜೀದ್ ಹಾಗೂ ಮಹಮ್ಮದ್ ಅಪ್ಸರ್
ಎಂಬವರು, ದಂಡಿನಪೇಟೆಯಲ್ಲಿ ಹೆದ್ದಾರಿ ಬದಿಯಲ್ಲಿ ಸ್ಟೇಟ್ ಬ್ಯಾಂಕ್ ಪಕ್ಕದಲ್ಲಿ ಸ.ನಂ 99/5 ಎ ರಲ್ಲಿ ಶಿಥಿಲಗೊಂಡಿದ್ದ ಕಟ್ಟಡ ದುರಸ್ಥಿಗೆಂದು ಪುರಸಭೆಯಿಂದ ಅನುಮತಿ‌ ಪಡೆದಿರುವ ಮನ್ಸೂರ್ ಎಂಬವರು ರಿಪೇರಿ ಬದಲು ರಸ್ತೆ ಮಾರ್ಜಿನ್ ಬಿಡದೆ ಹೊಸ‌ ಕಟ್ಟಡ ನಿರ್ಮಿಸುತ್ತಿದ್ದಾರೆ. ಕಟ್ಟಡದ ಹಿಂಭಾಗ ಕೂಡ ರಸ್ತೆಯಿದ್ದು ಸೆಟ್ ಬ್ಯಾಕ್ ಬಿಟ್ಟಿಲ್ಲ.

ಈ ಬಗ್ಗೆ ಪುರಸಭೆ ಗಮನಕ್ಕೆ ತಂದ ಮೇರೆಗೆ ಅನುಮತಿ ರದ್ದುಪಡಿಸಲಾಗಿದೆ. ಆದರೂ ಕೂಡ ರಾತ್ರೋರಾತ್ರಿ ಹಾಗೂ ರಜಾ ದಿನಗಳಲ್ಲಿ ಕಟ್ಟಡ ಕಾಮಗಾರಿ ಭರದಿಂದ ನಡೆಸಿ ಬಹುತೇಕ ಪೂರ್ಣಗೊಳಿಸಲಾಗಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳು ಯಾವುದೇ ಕ್ರಮವಹಿಸದೆ ಮೌನ ವಹಿಸಿದ್ದಾರೆ ಎಂದು ಆರೋಪಿಸಿದರು.

ಸದರಿ ಕಟ್ಟಡದಲ್ಲಿ ಬೈಕ್ ವರ್ಕ್ ಶಾಪ್ ನಡೆಸುತ್ತಿದ್ದು ವಾಹನಗಳನ್ನು ಪುಟ್ಪಾತ್ ನಲ್ಲಿ ನಿಲುಗಡೆ ಗೊಳಿಸುವ ಕಾರಣ ನಡೆದಾಡಲು ಅನಾನುಕೂಲ ಎದುರಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಹೆದ್ದಾರಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ನಡೆದಾಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದನ್ನು ಪುರಸಭೆ ಗಮನಕ್ಕೆ ತಂದರೆ, ಕ್ರಮಕೈಗೊಳ್ಳುವ ಬದಲಾಗಿ ನಿಮ್ಮ ವೈಯಕ್ತಿಕ ದ್ವೇಷಕ್ಕೆ ಆರೋಪ ಮಾಡುತ್ತಿರುವುದಾಗಿ ನಮ್ಮನ್ನು ಸಾಗಹಾಕುತ್ತಿದ್ದಾರೆ. ಅಕ್ರಮಗಳನ್ನು ಪ್ರಶ್ನಿಸುವ ಹಕ್ಕು ಸಾಮಾನ್ಯ ಜನರಿಗಿಲ್ಲವೇ ಎಂದು ಅವರು ಪ್ರಶ್ನಿಸಿದರು.

ಈ‌ ಒಂದು ಕಟ್ಟಡದಿಂದ ಪಕ್ಕದಲ್ಲಿ ಕೂಡ ಕೆಲವು ಕಟ್ಟಡಗಳು ಅಗತ್ಯ ನಿಯಮಗಳನ್ನು ಗಾಳಿಗೆ ತೂರಿ ನಿರ್ಮಾಣ ಕಾರ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಇವುಗಳಿಗೆ ಕಡಿವಾಣ ಹಾಕದಿದ್ದಲ್ಲಿ ಪುರಸಭೆ ಮುಂಭಾಗ ಧರಣಿ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!