ಕುಶಾಲನಗರ, ಅ 03: ಕೊಡಗು ಜಿಲ್ಲಾ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಆಶ್ರಯದಲ್ಲಿ ಕುಶಾಲನಗರದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಕಾರು ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ರಾಜ್ಯ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರು ಹಾಗೂ ದೊಡ್ಡಬಳ್ಳಾಪುರದ ಯುವ ಶಾಸಕ ಧೀರಜ್ ಮುನಿರಾಜು ಮಾತನಾಡಿ, 2047 ಕ್ಕೆ ವಿಕಸಿತ ಭಾರತದ ಸಂಕಲ್ಪ ಹೊಂದಿರುವ ಪ್ರಧಾನಿ ಮೋದಿ ಅವರ ಕೈಬಲಪಡಿಸಬೇಕಿದೆ. ಹೊಸ ಪೀಳಿಗೆಯ ನಾಯಕರನ್ನು ಹುಟ್ಟು ಹಾಕುವ ಯೋಜನೆಯೊಂದಿಗೆ ಪ್ರತಿ ಮನೆಯನ್ನು ಸಂಪರ್ಕಿಸಿ ಪಕ್ಷ ಸಂಘಟಿಸಿ ಸದಸ್ಯತ್ವ ವೃದ್ದಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಮತದಾರರನ್ನು ಬಿಜೆಪಿ ಸದಸ್ಯರಾಗಿರುವ ಕೇಂದ್ರ ಹಾಗೂ ರಾಜ್ಯದ ಯೋಜನೆ ಅಭೂತಪೂರ್ವ ಯಶಸ್ಸಿಗೆ ಮಂಡಲ ಹಾಗೂ ಬೂತ್ ಮಟ್ಟದ ಮುಖಂಡರು, ಕಾರ್ಯಕರ್ತರು ಶ್ರಮಿಸಬೇಕಿದೆ ಎಂದರು.
ಬಿಜೆಪಿಯ ವಿವಿಧ ಸಾಮಾಜಿಕ ಕಾರ್ಯಕ್ರಮಗಳ ಪೈಕಿ ಸದಸ್ಯತ್ವ ಅಭಿಯಾನ ಜವಬ್ದಾರಿಯುತಾದ ಶ್ರೇಷ್ಠ ಕಾರ್ಯಕ್ರಮವಾಗಿದೆ ಎಂದರು. ತಾಂತ್ರಿಕತೆ ಬಳಸಿಕೊಂಡು ಸದಸ್ಯತ್ವ ಅಭಿಯಾನ ಮುನ್ನಡೆಸಬೇಕಿದೆ ಎಂದರು.
ರಾಜ್ಯ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸಂದೀಪ್ ರವಿ ಮಾತನಾಡಿ, ಪ್ರತಿ 6 ವರ್ಷಕ್ಕೊಮ್ಮೆ ಪ್ರಧಾನಿ, ರಾಷ್ಟ್ರೀಯ ಅಧ್ಯಕ್ಷರಾದಿಯಾಗಿ ಕಟ್ಟಕಡೆಯ ಕಾರ್ಯಕರ್ತನು ಕೂಡ ಸದಸ್ಯತ್ವ ನವೀಕರಣ ಮಾಡುವ ಸಂವಿಧಾನ ಹೊಂದಿರುವ ಏಕೈಕ ಪಕ್ಷ ಬಿಜೆಪಿ. ಇದೇ ನಮಗೂ ಇತರೆ ಪಕ್ಷಗಳಿಗೂ ಇರುವ ವಿಶೇಷತೆ. ಅಂತೆಯೇ ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಕೀರ್ತಿ ನಮ್ಮ ಪಕ್ಷಕ್ಕಿದೆ. ಅ.15 ರ ಒಳಗಾಗಿ ಎಲ್ಲರೂ ಕೂಡ ಹೆಚ್ಚು ಸದಸ್ಯತ್ವ ನೋಂದಣಿ ಕಾರ್ಯದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಿದೆ ಎಂದರು.
ಕೊಡಗು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್ ಕುಮಾರ್ ಮಾತನಾಡಿ, ಪಕ್ಷದ ಹಿರಿಯರು 23 ಕೋಟಿ ಸದಸ್ಯತ್ವದ ನಿಶ್ಚಯ ಮಾಡಿದ್ದಾರೆ. ಜಿಲ್ಲೆಯಲ್ಲಿ 1.5 ಲಕ್ಷ ಸದಸ್ಯತ್ವ ಗುರಿ ಹೊಂದಲಾಗಿದೆ.
ಬಿಜೆಪಿಯಲ್ಲಿರುವ ಮೋರ್ಚಾಗಳಲ್ಲಿಯೇ ಯುವಮೋರ್ಚಾ ಅತ್ಯಂತ ಸದೃಢ ಮೋರ್ಚಾವಾಗಿದ್ದು ಪಕ್ಷದ ಬೆನ್ನೆಲುಬಿನಂತೆ ಕಾರ್ಯನಿರ್ವಹಿಸುತ್ತಿದೆ ಎಂದರು.
ಕೊಡಗು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಮಹೇಶ್ ತಿಮ್ಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯತ್ವ ನೋಂದಣಿ ಕಾರ್ಯಕ್ರಮದ ಬಗ್ಗೆ ಮಾಹಿತಿ ಒದಗಿಸಿದರು. ಸದಸ್ಯತ್ವ ನೋಂದಣಿ ಅಭಿಯಾನದ ಅಂಗವಾಗಿ ಈಗಾಗಲೆ ರಾಜ್ಯ ನಾಯಕರು ಪ್ರತಿ ಜಿಲ್ಲೆಗಳಿಗೆ ಸಂಚರಿಸಿ ನೋಂದಣಿ ಅಭಿಯಾನ ನಡೆಸುತ್ತಿದ್ದು ರಾಜ್ಯದಲ್ಲಿ 1 ಕೋಟಿ.70 ಲಕ್ಷ ಹೊಸ ಸದಸ್ಯತ್ವದ ಗುರಿ ಹೊಂದಲಾಗಿದೆ ಎಂದರು.
ಇದೇ ಸಂದರ್ಭ ಸಾಂಕೇತಿಕವಾಗಿ ಹೊಸ ಸದಸ್ಯತ್ವ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಸಭೆಯಲ್ಲಿ
ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿಗಳಾದ ದೀಪಕ್, ಪ್ರಣಯ್
ಸಾಮಾಜಿಕ ಜಾಲತಾಣದ ರಾಜ್ಯ ಸಂಚಾಲಕ ಕಲಾನಾಥ್,
ಕುಶಾಲನಗರ ಬಿಜೆಪಿ ಅಧ್ಯಕ್ಷ ಎಂ.ಎಂ. ಚರಣ್, ಸೋಮವಾರಪೇಟೆ ಮಂಡಲದ ಯುವ ಮೋರ್ಚಾ ಅಧ್ಯಕ್ಷ ಮೋಹಿತ್,
ವಿರಾಜಪೇಟೆ ಮಂಡಲದ ಯುವ ಮೋರ್ಚಾ ಅಧ್ಯಕ್ಷ ಮೋನಪ್ಪ,
ಮಡಿಕೇರಿ ಗ್ರಾಮಾಂತರ ಯುವ ಮೋರ್ಚಾ ಅಧ್ಯಕ್ಷ ಚೇತನ್ ಬಂಗೇರ, ಕುಶಾಲನಗರ ಯುವ ಮೋರ್ಚಾ ಅಧ್ಯಕ್ಷ ರಾಮನಾಥನ್, ಪ್ರಧಾನ ಕಾರ್ಯದರ್ಶಿಗಳಾದ ಸಚಿನ್, ಆದರ್ಶ್, ಪ್ರಮುಖರಾದ ನವನೀತ್, ಸೇರಿದಂತೆ ಜಿಲ್ಲಾ, ಮಂಡಲ, ನಗರ ಘಟಕದ ಪದಾಧಿಕಾರಿಗಳು, ಸದಸ್ಯರು ಇದ್ದರು.
Back to top button
error: Content is protected !!