ಕುಶಾಲನಗರ, ಜು 18: ಕೊಡಗು ಪ್ರೆಸ್ ಕ್ಲಬ್, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತ ರ ಸಂಘ, ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಪತ್ರಕರ್ತರಿಗೆ ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಪಾಲಿಬೆಟ್ಟದ ಕುಟ್ಟಂಡ ಅಜಿತ್ ಕರುಂಬಯ್ಯ ಅವರ ಗದ್ದೆಯಲ್ಲಿ ಭಾನುವಾರ ಆಯೋಜಿಸಲಾಗಿತ್ತು.
ವಿಭಿನ್ನವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮ ಪತ್ರಕರ್ತರು ಹಾಗೂ ಗ್ರಾಮಸ್ಥರಿಗೆ ರಸದೌತಣ ನೀಡುವಲ್ಲಿ ಯಶಸ್ವಿಯಾಯಿತು.
ಉದ್ಘಾಟನಾ ಸಮಾರಂಭದ ಅತಿಥಿಗಳನ್ನು ವಾಲಗ ವಾದ್ಯ ಗಳೊಂದಿಗೆ ಬರಮಾಡಿಕೊಳ್ಳ ಲಾಯಿತು.
ಕ್ರೀಡಾಕೂಟವನ್ನು ಗಾಳಿಯಲ್ಲಿ ಗುಂಡು ಹೊಡೆಯುವುದರ ಮೂಲಕ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕ ರವಿ ಟೆಲೆಕ್ಸ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಆಧುನಿಕ ಕಾಲಘಟ್ಟದಲ್ಲಿ ನಮ್ಮ ಪರಂಪರೆ, ಸಂಸ್ಕೃತಿ ಮರೆಯಾಗುತ್ತಿದೆ. ಅತಿಯಾದ ನಾಗರೀಕತೆಯಿಂದ ನಶಿಸುತ್ತಿರುವ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡಬೇಕಿದ್ದು, ಆ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳ ಆಯೋಜನೆ ಶ್ಲಾಘನೀಯ ಎಂದರು.
ಕ್ರೀಡೆ, ಕಲೆ, ಸಂಸ್ಕೃತಿ ಸಮೂಹ ಸಂಬಂಧಗಳನ್ನೂ ಬೆಸೆಯುತ್ತದೆ. ಮೊಬೈಲ್‌ನಲ್ಲಿ ಪಪ್‌ಜಿ, ರಮ್ಮಿಯಂತಹ ಆಟಗಳ ಬದಲಾಗಿ ಇಂತಹ ಕ್ರೀಡೆಗಳು ಮನೋವಿಕಾಸ, ದೈಹಿಕ ವಿಕಾಸಕ್ಕೆ ಸಹಕಾರಿಯಾಗಿದೆ. ಮನುಷ್ಯ ಒಂಟಿಯಾಗುತ್ತಿದ್ದು, ಸಮುದಾಯದೊಂದಿಗೆ ಬದುಕುವುದನ್ನು ರೂಢಿ ಮಾಡಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಮನುಷ್ಯ ಸಂಬಂಧ ಉಳಿಸುವ ಇಂತಹ ಕ್ರೀಡಾಕೂಟ ಪತ್ರಕರ್ತರಿಗೆ ಆಯೋಜನೆ ಉತ್ತಮ ಬೆಳವಣಿಗೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಬಿ.ಆರ್. ಸವಿತಾ ರೈ, ಗದ್ದೆಯ ನಾಟಿ ಸಂದರ್ಭದಲ್ಲಿ ಇಂತಹ ವಾತಾವರಣ ಕೊಡಗು ಜಿಲ್ಲೆಯಲ್ಲಿ ಕಂಡು ಬರುತ್ತದೆ. ಭಾಂದವ್ಯ ಬೆಸೆಯುವುದರ ಜೊತೆಗೆ ಸಂಸ್ಕೃತಿ ಅನಾವರಣಕ್ಕೆ ಇಂತಹ ಕಾರ್ಯಕ್ರಮಗಳು ವೇದಿಕೆ ಯಾಗಿದೆ. ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಹುಂಡಿ ಗ್ರಾಮದ ಕಾಫಿ ಉದ್ಯಮಿ ಎಂ. ನಿಯಾಜ್ ತಂಡ ಗಳಿಗೆ ಶುಭ ಕೋರಿದರು.
ಕಾಫಿ ಬೆಳೆಗಾರರಾದ ಕುಟ್ಟಂಡ ಸುಮನ್ ಕಾರ್ಯಪ್ಪ, ವಿರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಜಿ.ಪಂ. ಮಾಜಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ, ಕೊಡಗಿನ ಪತ್ರಕರ್ತರು ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಗಮನ ಸಳೆದಿದ್ದಾರೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿ ಗಳ ಗಮನ ಸೆಳೆದಿದ್ದಾರೆ. ಕಾರ್ಯಾಂಗ ಸರಿಪಡಿಸು ವಲ್ಲಿಯೂ ಪತ್ರಕರ್ತರ ಪಾತ್ರ ದೊಡ್ಡದಿದೆ. ಪತ್ರಕರ್ತರನ್ನು ಬೆಸೆಯುವ ಇಂತಹ ಕಾರ್ಯಕ್ರಮ ಇನ್ನಷ್ಟು ನಡೆಯುವಂತಾಗಬೇಕು ಎಂದರು.
ಸಮಾರೋಪ ಭಾಷಣ ಮಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪತ್ರಕರ್ತರು ಸಮಾಜಕ್ಕೆ ಏನು ಮಾಡುತ್ತಾರೆಂದು ಸಾರ್ವಜನಿಕರು ನಿರೀಕ್ಷಿಸುತ್ತಾರೆ. ಆದರೆ ಪತ್ರಕರ್ತರ ಬಗ್ಗೆ ಸಮಾಜ ಚಿಂತಿಸುವುದಿಲ್ಲ. ಪತ್ರಕರ್ತರು ಸಮಾಜದ ಒಂದು ಭಾಗ. ಇದನ್ನು ಪ್ರತಿಯೊಬ್ಬರು ಅರಿಯ ಬೇಕಿದೆ. ಕ್ರೀಡಾಕೂಟ ಆಯೋಜನೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸುವುದಾಗಿ ತಿಳಿಸಿದರು.
ಕುಟ್ಟಂಡ ನಂದ ಉತ್ತಯ್ಯ ಅವರ ಧರ್ಮಪತ್ನಿ ಕುಟ್ಟಂಡ ಭಾರತಿ ಉತ್ತಯ್ಯ ಅಧ್ಯಕ್ಷತೆ ವಹಿಸಿದ್ದರು.
ನಿಧನರಾದ ತಮ್ಮ ಪುತ್ರ ಕೆ.ಎಸ್. ಬಿನೀತ್ ಸ್ಮರಣಾರ್ಥ ಬಹುಮಾನ ಪ್ರಾಯೋಜಿಸಿದ್ದ ಸುನಿಲ್ ಮತ್ತು ದ್ರೌಪತಿ ಸುನಿಲ್, ಪಾಲಿಬೆಟ್ಟ ಗ್ರಾ.ಪಂ. ಉಪಾಧ್ಯಕ್ಷ ಎಂ.ಬಿ. ಪವಿತ್ರ, ಉದ್ಯಮಿ ಅಮೃತರಾಜನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕುಟ್ಟಂಡ ಅಜಿತ್ ಕರುಂಬಯ್ಯ ಹಾಗೂ ಪುತ್ತಂ ಪ್ರದೀಪ್ ಸಂಚಾಲಕತ್ವದಲ್ಲಿ ಕಾರ್ಯಕ್ರಮ ನಡೆಯಿತು.
*ಯಂಗ್ ಸ್ಪೈಡರ್ಸ್ ತಂಡ ಚಾಂಪಿಯನ್*
ಹ್ಯಾಂಡ್‌ಬಾಲ್ ಹಾಗೂ ಹಗ್ಗಜಗ್ಗಾಟದ 2 ಪಂದ್ಯಾಟ ದಲ್ಲೂ ಆದರ್ಶ್ ನಾಯಕತ್ವದ ಯಂಗ್ ಸ್ಪೈಡರ್ಸ್ ತಂಡ ಗೆದ್ದು ಬೀಗಿತು. ಶಂಶುದ್ದೀನ್ ನಾಯಕತ್ವದ ಮೀಡಿಯಾ ಕಿಂಗ್ಸ್ 2 ಪಂದ್ಯಾಟದಲ್ಲೂ ದ್ವಿತೀಯ ಸ್ಥಾನ ಪಡೆಯಿತು. ಆಟಗಾರರ ಬದಲಾವಣೆಯ ಹೊರತಾಗಿಯೂ ಆದರ್ಶ್ ನಾಯಕತ್ವದ ಯಂಗ್ ಸ್ಪೈಡರ್ಸ್ ತಂಡ ಪತ್ರಕರ್ತರ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಸತತ ನಾಲ್ಕನೇ ಬಾರಿಗೆ ಹ್ಯಾಂಡ್‌ಬಾಲ್‌ನಲ್ಲಿ ಪ್ರಥಮ ಸ್ಥಾನ ಪಡೆಯಿತು.
35 ವರ್ಷದೊಳಗಿನ ಓಟದ ಸ್ಪರ್ಧೆಯಲ್ಲಿ ಇಸ್ಮಾಯಿಲ್ ಪ್ರಥಮ, ಯುಗ ದೇವಯ್ಯ ದ್ವಿತೀಯ ಸ್ಥಾನ ಪಡೆದರು. 35 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಗೋಪಾಲ್ ಸೋಮಯ್ಯ ಪ್ರಥಮ, ಚನ್ನನಾಯಕ್ ದ್ವಿತೀಯ ಬಹುಮಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಚೈತನ್ಯ ಚಂದ್ರಮೋಹನ್ ಪ್ರಥಮ, ಬಿ.ಆರ್. ಸವಿತಾ ರೈ ದ್ವಿತೀಯ ಸ್ಥಾನ ಪಡೆದರು.
ಸ್ಥಳೀಯರಿಗಾಗಿ ನಡೆದ ಓಟದ ಸ್ಪರ್ಧೆಯಲ್ಲಿ ಪಾಲ ಪ್ರಥಮ, ಸುರೇಶ್ ದ್ವಿತೀಯ, ಮಕ್ಕಳ ವಿಭಾಗದಲ್ಲಿ ತಾನ್ಯ ಪ್ರಥಮ, ನಿತಿನ್ ದ್ವಿತೀಯ ಸ್ಥಾನ ಪಡೆದರು.
…..
ಗಮನ ಸೆಳೆದ ಗ್ರಾಮೀಣ ಸೊಗಡಿನ ಖಾದ್ಯಗಳು
ಕೊಡಗಿನ ವಿಶೇಷ ಖಾದ್ಯಗಳು ಗಮನ ಸೆಳೆಯಿತು.
ಬೆಲ್ಲದ ಕಾಫಿ, ತುಪ್ಪದ ಅನ್ನ, ಪುದೀನ ಚಟ್ನಿ, ಚಿಕನ್ ಸಾಂಬಾರ್, ಅನ್ನ, ನಾಟಿಕೋಳಿ ಸಾರು, ರಸಂ, ಮಾವಿನ ಹಣ್ಣು ಸಾರು, ಕಣಿಲೆ, ಕೆಸಸಾರು, ಏಡಿ ಸಾರು, ತೆರಮೆ ಸೊಪ್ಪು ಪಲ್ಯ, ಹಲಸಿನ ಕಾಯಿ ಪಲ್ಯ, ಅಣಬೆ ಸಾರು, ಸುಟ್ಟ ಒಣಮೀನು, ಮಾವಿನಕಾಯಿ ಚಟ್ನಿ ಮತ್ತಿತರ ಖಾದ್ಯಗಳು ಕೆಸರಿನಲ್ಲಿ ಮಿಂದೆದ್ದ ಪತ್ರಕರ್ತರ ಹಸಿವು ನೀಗಿಸಿತು.
Back to top button
error: Content is protected !!