ಕುಶಾಲನಗರ, ಆ 27: ಕರ್ನಾಟಕ ಜನಪದ ಪರಿಷತ್ ಕುಶಾಲನಗರ ತಾಲೂಕು ಘಟಕ ಹಾಗೂ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಕುಶಾಲನಗರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ‘ವಿದ್ಯಾರ್ಥಿಗಳತ್ತ ಜಾನಪದ’ ಎಂಬ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕುಶಾಲನಗರ ಹೋಬಳಿ ಕಾರ್ಯನಿರತ ಪತ್ರಕರ್ತರ ಸಂಘದ ಬೆಳ್ಳಿ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಜಾನಪದ ಪರಿಷತ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಜನಪದ ಎಂಬುದು ನಿಂತ ನೀರಲ್ಲ. ಶಾಲೆಯ ಮೆಟ್ಟಿಲು ಹತ್ತದಿದ್ದರೂ ಜೀವನದ ಪಾಠಶಾಲೆಯಲ್ಲಿ ಎಲ್ಲಾ ರೀತಿಯ ಜ್ಞಾನ ಪಡೆದವರು ಜನಪದರು. ವಿದ್ಯಾರ್ಥಿಗಳು ಪಠ್ಯದೊಂದಿಗೆ ಜ್ಞಾನ ವೃದ್ದಿಸುವ ಇತರೆ ಪುಸ್ತಕಗಳನ್ನು ಕೂಡ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕಿದೆ. ಜನಪದ ಸಾಹಿತ್ಯದಲ್ಲಿ ಅಡಕಗೊಂಡಿರುವ ನೀತಿಯ ತಿರುಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ಕುಶಾಲನಗರ ತಾಲೂಕು ಜಾನಪದ ಪರಿಷತ್ ಘಟಕದ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂದಿನ ಆಧುನಿಕ ಯುಗದಲ್ಲಿ ಯುವ ಪೀಳಿಗೆಗೆ ಜಾನಪದ ಸಂಸ್ಕೃತಿ, ಸೊಗಡನ್ನು ಪರಿಚಯಿಸುವ ಕಾರ್ಯವನ್ನು ಪರಿಷತ್ ಮೂಲಕ ಕಳೆದ 9 ವರ್ಷಗಳಿಂದ ನಿರಂತರವಾಗಿ ಹಮ್ಮಿಕೊಂಡು ಬರಲಾಗುತ್ತಿದೆ ಎಂದರು.
ಕಲಾವಿದ, ಉಪನ್ಯಾಸಕ ನಂಜುಂಡಸ್ವಾಮಿ ಮಾತನಾಡಿದರು.
ಪದವಿಪೂರ್ವ ಕಾಲೇಜು ಉಪನ್ಯಾಸಕ ಫಿಲಿಪ್ ವಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭ ಜನಪದ ಪರಿಷತ್ ಗೆ ಸದಸ್ಯತ್ವ ನೋಂದಣಿ ಕಾರ್ಯ ನಡೆಸಲಾಯಿತು. ಗಾಯಕ ನಂಜುಂಡಸ್ವಾಮಿ ಹಾಗೂ ಉಪನ್ಯಾಸಕ ನಂದೀಶ್ ಜಾನಪದ ಗೀತೆ ಹಾಡಿದರು.
ಪರಿಷತ್ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಹಾ.ತಿ.ಜಯಪ್ರಕಾಶ್, ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾಜು ರೈ, ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರ ಮೋಹನ್ ಸೇರಿದಂತೆ ಪರಿಷತ್ ಹಾಗೂ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಉಪನ್ಯಾಸಕ ವೃಂದದವರು ಇದ್ದರು.
Back to top button
error: Content is protected !!