ಸಭೆ

ನಂಜರಾಯಪಟ್ಟಣ ಗ್ರಾಮಪಂಚಾಯತ್ ನ 2024-25ನೇ ಸಾಲಿನ‌ ಮೊದಲನೇ ಅವಧಿಯ ಗ್ರಾಮ ಸಭೆ

ಕುಶಾಲನಗರ, ಜು 23: ನಂಜರಾಯಪಟ್ಟಣ ಗ್ರಾಮಪಂಚಾಯತ್ ನ 2024-25ನೇ ಸಾಲಿನ‌ ಮೊದಲನೇ ಅವಧಿಯ ಗ್ರಾಮ ಸಭೆ ಪಂಚಾಯತ್ ಅಧ್ಯಕ್ಷ ಸಿ.ಎಲ್.ವಿಶ್ವ ಅವರ ಅಧ್ಯಕ್ಷತೆಯಲ್ಲಿ ಹೊಸಪಟ್ಟಣ ಗ್ರಾಮದ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸಭೆಯ ಆರಂಭದಲ್ಲಿ ಹಿಂದಿನ ಸಭೆಯ ನಡಾವಳಿಯನ್ನು ಓದಿ ಅಂಗೀಕರಿಸಲಾಯಿತು. ಪಂಚಾಯತ್ ವ್ಯಾಪ್ತಿಯಲ್ಲಿ ಕೈಗೊಂಡ ಕಾಮಗಾರಿಗಳ ಕ್ರಿಯಾಯೋಜನೆ‌ ವಿವರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ವಿವಿಧ ವಿಲಾಖೆ ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿಯ ಯೋಜನೆಗಳ ಬಗ್ಗೆ ಸಭೆಗೆ ತಿಳಿಸಿದರು. ಇಲಾಖಾವಾರು ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು.
ಚಿಕ್ಲಿಹೊಳೆ ವ್ಯಾಪ್ತಿಯಲ್ಲಿ ಸಮರ್ಪಕವಾಗಿ ಜಂಗಲ್ ಕ್ಲಿಯರ್ ಕಾರ್ಯ ನಡೆಯುತ್ತಿಲ್ಲ, ಈ ಬಗ್ಗೆ ಸರಿಯಾದ ಪರಿಶೀಲನೆ ಅಗತ್ಯ, ನಾಲೆಗಳಲ್ಲಿ ಬೃಹತ್ ಹೊಂಡಗಳು‌ ನಿರ್ಮಾಣಗೊಂಡಿವೆ, ಅಣೆಕಟ್ಟೆ ನೀರು ಬದಲು ಮಳೆ ನೀರು ನಾಲೆ ‌ಮೂಲಕ ಕೃಷಿಕರ ಜಮೀನುಗಳಿಗೆ ನುಗ್ಗಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ, ಅಧಿಕಾರಿಗಳ ಧೋರಣೆಯಿಂದ ರೈತರು ಬೇಸತ್ತಿದ್ದಾರೆ ಎಂದು ಗ್ರಾಮಸ್ಥರಾದ ಕಾಳಿಂಗ, ರವಿ ಆರೋಪಿಸಿದರು. ಚಿಕ್ಲಿಹೊಳೆ ನಿರ್ವಹಣೆ ಜವಾಬ್ದಾರಿ ಗ್ರಾಮಪಂಚಾಯತ್ ಗೆ ವಹಿಸಿ‌ ಅನುದಾನ ಒದಗಿಸಿ ಎಂದು ಆಗ್ರಹಿಸಿದರು.
ಚಿಕ್ಲಿಹೊಳೆ ಜಲಾಶಯ ವ್ಯಾಪ್ತಿಯಲ್ಲಿ ಸ್ಥಳೀಯ ಗ್ರಾಮಸ್ಥರಿಗೆ ಉದ್ಯಮಕ್ಕೆ ಅವಕಾಶ ಕಲ್ಪಿಸಬೇಕಿದೆ. ಇತರೆ ಗ್ರಾಮಪಂಚಾಯತ್ ವ್ಯಾಪ್ತಿಯ ನಿವಾಸಿಗಳು ಇಲ್ಲಿ ಅಂಗಡಿಗಳನ್ನು ನಡೆಸುತ್ತಿರುವುದು ಖಂಡನೀಯ ಎಂದು ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಆಕ್ರೋಷ ವ್ಯಕ್ತಪಡಿಸಿದರು.
ಮೀನುಕೊಲ್ಲಿ ಅರಣ್ಯ ವ್ಯಾಪ್ತಿಯಲ್ಲಿ ಹ್ಯಾಂಗಿಂಗ್ ಸೋಲಾರ್ ಫೆನ್ಸ್ ಗಳು ನೆಲಕಚ್ಚಿದ್ದು ಈ ಬಗ್ಗೆ ಅರಣ್ಯ ಇಲಾಖೆ ಗಮನಹರಿಸಬೇಕಿದೆ ಎಂದು ಸದಸ್ಯ ರಕ್ಷಿತ್ ಮಾವಾಜಿ ಡಿಆರ್ಎಫ್ಒ ಸುಬ್ರಾಯ ಅವರನ್ನು ಆಗ್ರಹಿಸಿದರು. ಮಳೆಯಿಂದ ನೆಲಕ್ಕುರುಳಿದ ವಿದ್ಯುತ್ ಕಂಬಗಳು, ತಂತಿಗಳನ್ನು ನಿರ್ವಹಣೆ ಮಾಡುವಲ್ಲಿ ಚೆಸ್ಕಾಂ ವಿಳಂಭ ಧೋರಣೆ ಅನುಸರಿಸಿದೆ ಎಂದು ಆರೋಪಿಸಿದ ರಕ್ಷಿತ್ ಅವತು ಚೆಸ್ಕಾಂ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಕಾಡಾನೆಗಳ ಹಾವಳಿಯಿಂದ ಗಿರಿಜನರ ಬೆಳೆನಾಶಕ್ಕೆ ಪರಿಹಾರ ದೊರಕುತ್ತಿಲ್ಲ ಎಂಬ ವಿಚಾರದ ಬಗ್ಗೆ ಮಾತನಾಡಿದ ಸದಸ್ಯ ಆರ್.ಕೆ.ಚಂದ್ರ, ಅರಣ್ಯ ಹಕ್ಕು ಕಾಯ್ದೆ ಅನ್ವಯ ಸೂಕ್ತ ಪರಿಹಾರ ಒದಗಿಸಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕ್ರಮವಹಿಸಲು ಆಗ್ರಹಿಸಿದರು.
ಉಳಿದಂತೆ ಸ್ಮಶಾನ, ಪಡಿತರ ಚೀಟಿ, ಕೆರೆ ಒತ್ತುವರಿ, ಸ್ವಚ್ಚತೆ ಮತ್ತಿತರ ವಿಚಾರಗಳ ಬಗ್ಗೆ ಗಂಭೀರ ಚರ್ಚೆ ನಡೆಯಿತು.
ಅಧ್ಯಕ್ಷತೆ ವಹಿಸಿ‌ ಮಾತನಾಡಿದ ಅಧ್ಯಕ್ಷ ಸಿ.ಎಲ್.ವಿಶ್ವ, ನಂಜರಾಯಪಟ್ಟಣ ಗ್ರಾಮವನ್ನು ಹೋಬಳಿ ಕೇಂದ್ರವಾಗಿಸಬೇಕಿದೆ, ದುಬಾರೆಯಲ್ಲಿ ತೂಗುಸೇತುವೆ ನಿರ್ಮಾಣ ಮಾಡಬೇಕಿದೆ, ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಹ್ಯಾಂಗಿಂಗ್ ಫೆನ್ಸಿಂಗ್ ನಿರ್ಮಾಣ, ಖಾಯಂ ಪಶುವೈದ್ಯರ ನೇಮಕಾತಿ ಮತ್ತಿತರ ವಿಚಾರಗಳ ಬಗ್ಗೆ ಗ್ರಾಪಂ ಪಂಚಾಯತ್ ಮೂಲಕ ಸಂಬಂಧಿಸಿದ ಇಲಾಖೆಗಳಿಗೆ ಹಲವು ಪತ್ರ ವ್ಯವಹಾರ ನಡೆಸುತ್ತಾ ಬರುತ್ತಿದೆ. ಅದರೆ ಯಾವುದು ಕೂಡ ಕಾರ್ಯ ರೂಪಕ್ಕೆ ಬಂದಿಲ್ಲ. 8 ಕುಟುಂಬಗಳಿಗೆ ಸ್ಲೈಂಡಿಂಗ್ ರೈಲ್ವೇ ಬ್ಯಾರಿಕೆಡ್ ಅಳವಡಿಕೆ ಕಾರ್ಯ ನಡೆದಿದೆ.‌ಹಾನಿಗೊಳಗಾಗಿರುವ ಸ್ಲೈಂಡಿಂಗ್ ಬ್ಯಾರಿಕೆಡ್ ದುರಸ್ಥಿಗೆ ಅರಣ್ಯ ಇಲಾಖೆ ಕ್ರಮವಹಿಸಬೇಕಿದೆ ಎಂದು ಆಗ್ರಹಿಸಿದರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ದೇಗೌಡ ಸಭೆಯ ನೋಡಲ್ ಅಧಿಕಾರಿಯಾಗಿ ಪಾಲ್ಗೊಂಡಿದ್ದರು.

ಸಭೆಯಲ್ಲಿ ಉಪಾಧ್ಯಕ್ಷೆ ಕುಸುಮಾ, ಸದಸ್ಯರಾದ ಆರ್.ಕೆ.ಚಂದ್ರ, ರಕ್ಷಿತ್ ಮಾವಾಜಿ, ಸಮೀರ, ಜಾಜಿ, ಲೋಕನಾಥ್, ಗಿರಿಜಮ್ಮ, ಪಿಡಿಒ‌ ರಾಜಶೇಖರ್, ಕಾರ್ಯದರ್ಶಿ ಶೇಷಗಿರಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!