ಕೃಷಿ

ಮುಸುಕಿನ ಜೋಳಕ್ಕೆ ಸೈನಿಕ ಹುಳು ಕಾಟ: ಹತೋಟಿ ಕ್ರಮಗಳ ಬಗ್ಗೆ ಕೃಷಿ ಇಲಾಖೆಯಿಂದ ಪ್ರಾತ್ಯಕ್ಷಿತೆ ಕಾರ್ಯಾಗಾರ

ಪಿರಿಯಾಪಟ್ಟಣ, ಜು 05: ತಾಲ್ಲೂಕಿನಾದ್ಯಂತ ರೈತರ ಜಮೀನಿನಲ್ಲಿ ಬೆಳೆದಿದ್ದ ಮುಸುಕಿನ ಜೋಳಕ್ಕೆ ಸೈನಿಕ ಹುಳುಗಳ ಕಾಟ ಎದುರಾದ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೈ.ಪ್ರಸಾದ್ ನೇತೃತ್ವದಲ್ಲಿ ನವಿಲೂರು ಗ್ರಾಮದ ರೈತರ ಜಮೀನಿಗೆ ಭೇಟಿ ನೀಡಿ ಹತೋಟಿ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಮಾತನಾಡಿ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಮುಸುಕಿನ ಜೋಳವು ಪ್ರಮುಖ ಬೆಳೆಯಾಗಿದ್ದು, ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಲಾಗಿದ್ದು, ಈಗಾಗಲೇ ಬಿತ್ತನೆಯಿಂದ ಹಿಡಿದು 20-25 ದಿನದ ಬೆಳೆ ವರೆಗೂ ಅಲ್ಲಲ್ಲಿ ಸೈನಿಕ ಹುಳುವಿನ ಬಾಧೆ ಕಂಡು ಬಂದಿದ್ದು ರೈತರು ಈ ಪೀಡೆಯ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮವಾಗಿ ರೈತರಿಗೆ ಅಗತ್ಯ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಮರಿ ಹುಳು ಹಸಿರು ಬಣ್ಣದಲ್ಲಿದ್ದು ತಲೆಯ ಮೇಲ್ಭಾಗದಲ್ಲಿ ತಲೆಕೆಳಗಾದ ಙ ಚಿಹ್ನೆಯನ್ನು ಹೊಂದಿರುತ್ತದೆ. ಇದರ ಉದರದ 8 ಮತ್ತು 9ನೇ ಭಾಗದಲ್ಲಿ ನಾಲ್ಕು ಉಬ್ಬಿದ ಕಪ್ಪು ಚುಕ್ಕೆಗಳು ಚಚ್ಚೌಕಾರದ ರೀತಿಯಲ್ಲಿ ಕಂಡುಬರುತ್ತದೆ. ಒಂದುವರೆ ಇಂಚು ಉದ್ದದ ಹುಳುವು ಪತಂಗಗಳಾಗಿ ಸಾವಿರಾರು ಸಂಖ್ಯೆಗಳಲ್ಲಿ ಆಹಾರವನ್ನು ಹುಡುಕಿಕೊಂಡು ಬಹಳ ದೂರ ಸಾಗಿ ಆಹಾರ ಬೆಳೆಯಿರುವ ಪ್ರದೇಶಗಳಲ್ಲಿ ಗಿಡಗಳ ಎಲೆಗಳ ಮೇಲೆ ಮೊಟ್ಟೆಗಳನ್ನು ಇಡುತ್ತವೆ. ಒಂದು ಹೆಣ್ಣು ಪತಂಗವು ಸರಾಸರಿ 150 ರಿಂದ 200 ಹಸಿರು ಮಿಶ್ರಿತ ಮೊಟ್ಟೆಗಳನ್ನು ಗರಿಯ ತಳಭಾಗದಲ್ಲಿ ಗುಂಪು ಗುಂಪಾಗಿ ಇಡುತ್ತವೆ. 4-5 ದಿನಗಳ ನಂತರ ಮೊಟ್ಟೆ ಒಡೆದು ಮರಿಗಳು ಹೊರಬಂದು 18-28 ದಿನಗಳವರೆಗೆ ಬೆಳೆಗಳಿಗೆ ಹಾನಿ ಮಾಡುತ್ತವೆ ಮತ್ತು 7-13 ದಿನಗಳಲ್ಲಿ ಮಣ್ಣಿನಲ್ಲಿ ಕೋಶಾ ವ್ಯಸ್ಥೆಯಲ್ಲಿರುತ್ತವೆ. ಒಟ್ಟು 30-45 ದಿನಗಳಲ್ಲಿ ಸೈನಿಕ ಹುಳು ಜೀವನ ಚಕ್ರವನ್ನು ಪೂರ್ಣಗೊಳಿಸುತ್ತವೆ.

ಈ ಕೀಟವು ಹಗಲು ವೇಳೆಯಲ್ಲಿ ಮಣ್ಣು, ಕಾಂಡದ ಮಧ್ಯ ಮತ್ತು ಗರಿಗಳ ತಳ ಭಾಗದಲ್ಲಿ ವಾಸಿಸುತ್ತವೆ. ಸಂಜೆಯ ವೇಳೆ ಹುಳುಗಳು ಚಟುವಟಿಕೆ ಪ್ರಾರಂಭಿಸಿ ಬೆಳೆಯ ಎಲೆಯನ್ನು ಸಂಪೂರ್ಣವಾಗಿ ತಿಂದು ಹಾಕುತ್ತವೆ. ತೀವ್ರವಾಗಿ ಹಾನಿಗೊಳಗಾದ ಬೆಳೆಯಲ್ಲಿ ಎಲೆಯ ದಿಂಡು ಕಾಣಸಿಗುತ್ತವೆ.

ಹತೋಟಿ ಕ್ರಮ: ಸ್ಪೋಡೋಪ್ಟೆರಾ ಪ್ರೂಜಿಪರ್ಡಾ ಫೆರಮೋನ್ ಟ್ರಾಪ್ (ಮೋಹಕ ಬಲೆಗಳು)- 8 ಸಂಖ್ಯೆ ಪ್ರತಿ ಎಕರೆಗೆ ಬಿತ್ತನೆಯಾದ ಒಂದು ವಾರದಿಂದ ತೆನೆಯ ಹಂತದವರೆಗೆ ಅಳವಡಿಸಬೇಕು. ಮೋಹಕ ಬಲೆಯ ರಾಸಾಯನಿಕವನ್ನು/ ಲ್ಯೂರ್‌ನ್ನು ಪ್ರತಿ 20 ದಿನಗಳಿಗೊಮ್ಮೆ ಬದಲಾಯಿಸುವುದು.

ತತ್ತಿನಾಶಕ ಕೀಟನಾಶಕವಾದ ಥೈಯೋಡಿಕಾರ್ಬ್ 25 ಡಬ್ಲೂ. ಪಿ. (ಲಾರ್ವಿನ್) @ 1 ಗ್ರಾಂ./ಲೀಟರ್ ಗರಿಗಳ ಮೇಲ್ಭಾಗ ಮೊಟ್ಟೆಗಳ ಗುಂಪು ಕಂಡುಬದಾಗ ಸಿಂಪಡಿಸುವುದು. ಆರ್ಥಿಕ ನಷ್ಟ ರೇಖೆಗೆ ಅನುಗುಣವಾಗಿ ಇಮಾಮೆಕ್ಟೆನ್ ಬೆಂಜೋಯೇಟ್ 5% ಎಸ್.ಜಿ. @ 0.6 ಗ್ರಾಂ/ಲೀಟರ್ ನೀರಿಗೆ ಬೆರಸಿ ಸಿಂಪಡಿಸುವುದು.

4. ಪೀಡೆ ಬಾಧೆಯು ಹೆಚ್ಚಾದಾಗ ರಸಾಯನಿಕ ಕೀಟನಾಶಕಗಳಾದ ನೊವಲ್ಯೂರಾನ್ + ಇಮಾಮೆಕ್ಟಿನ್ ಬೆಂಜೋಯೇಟ್ (ಬ್ಯಾರಾಜೈಡ್) @ 3 ಮಿ.ಲೀ/ಲೀಟರ್ ಅಥವಾ ಸ್ಪೆö ನೋಡೋರಮ್ 11.2% ಎಸ್.ಪಿ. @ ೦.5 ಮಿಲಿ/ಲೀಟರ್ ನೀರಿಗೆ ಬೆರಸಿ ಸಿಂಪಡಿಸುವುದು.

ಯಾವುದೇ ಸಂಶಯಗಳಿಗಾಗಿ ಹಾಗೂ ಇತರೇ ಹೆಚ್ಚಿನ ಮಾಹಿತಿಗಾಗಿ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿನ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು ಎಂದರು.

ಈ ಸಂದರ್ಭದಲ್ಲಿ ನೂರಾರು ರೈತರು ಸೈನಿಕ ಹುಳುಗಳು ಮುಸುಕಿನ ಜೋಳಕ್ಕೆ ಅಂಟಿರುವ ರೋಗ ಬಾಧೆ ಕುರಿತು ಮಾಹಿತಿ ಪಡೆದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!