ಕಾರ್ಯಕ್ರಮ

ರಾಜಕೀಯ ರಹಿತವಾಗಿ, ಜನಸಾಮಾನ್ಯರ ಸೇವೆಗೆ ಪ್ರಾಧಿಕಾರ ಕಾರ್ಯನಿರ್ವಹಿಸಲಿ: ಶಾಸಕ ಮಂಥರ್ ಗೌಡ

ಕುಶಾಲನಗರ, ಜೂ 24: ಕುಶಾಲನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷರಾಗಿ ಪ್ರಮೋದ್ ಮುತ್ತಪ್ಪ, ಸದಸ್ಯರಾಗಿ ವಿ.ಎಸ್.ಸಜಿ, ಸಂಗೀತ, ಕೆ.ಆರ್.ಕಿರಣ್ ಕುಮಾರ್ ಅವರು ಬುಧವಾರ ಅಧಿಕಾರ ವಹಿಸಿಕೊಂಡರು.
ಕುಶಾಲನಗರದ ಶ್ರೀ ಗಣಪತಿ ದೇವಾಲಯದಲ್ಲಿ ಪೂಜೆ‌ ಸಲ್ಲಿಸಿ, ಪ್ರಾಧಿಕಾರದ ಕಛೇರಿಯಲ್ಲಿ ಹೋಮ‌ ನೆರವೇರಿಸಿದ ಬಳಿಕ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕಾರ ಮಾಡಿದರು.
ನಂತರ ನಡೆದ ಸಭಾ ಕಾರ್ಯಕ್ರಮವನ್ನು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಜನಸಾಮಾನ್ಯರ ಕೆಲಸ ಕಾರ್ಯಗಳು ಕಾನೂನಿನ‌ ಚೌಕಟ್ಟಿನಲ್ಲಿ ನಡೆಯುವಂತಾಗಬೇಕಿದೆ. ಜನಸೇವೆಗೆ ನೂತನ ಪದಾಧಿಕಾರಿಗಳು ಹಾಗೂ ಅಧಿಕಾರಿ ವರ್ಗದವರು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಅಧಿಕಾರದ ದರ್ಪ ತೋರದೆ ಕಛೇರಿಗೆ ಬರುವವರನ್ನು ಸೌಜನ್ಯದಿಂದ ರಾಜಕೀಯ ರಹಿತವಾಗಿ ಸ್ಪಂದಿಸಿ ಕುಶಾಲನಗರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮವಹಿಸಬೇಕಿದೆ ಎಂದು ಕರೆ ನೀಡಿದರು.

ಕೊಡಗು ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ‌ ಮಾತನಾಡಿ,ಕೊಡಗಿನ ವಾಣಿಜ್ಯ ನಗರಿ ಕುಶಾಲನಗರ ವೇಗವಾಗಿ ಬೆಳೆಯುತ್ತಿದೆ. ಹಲವು ಪ್ರಮುಖ ಯೋಜನೆಗಳು ಇಲ್ಲಿ‌ ಅನುಷ್ಠಾನಗೊಳ್ಳುತ್ತಿದ್ದು ಇದನ್ನು ಸುಸೂತ್ರವಾಗಿ ನಿರ್ವಹಿಸಿ ಸಮರ್ಪಕವಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿ ಪ್ರಾಧಿಕಾರಕ್ಕಿದೆ. ಕುಶಾಲನಗರವನ್ನು‌ ಮತ್ತಷ್ಟು ಅಭಿವೃದ್ಧಿಗೊಳಿಸುವ ಅವಕಾಶವನ್ನು ನೂತನ ಪದಾಧಿಕಾರಿಗಳು ಎಲ್ಲರ ಸಹಕಾರದ ಮೂಲಕ ಸಮರ್ಥವಾಗಿ ನಿಭಾಯಿಸಬೇಕಿದೆ ಎಂದರು.

ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡುರಾವ್ ಮಾತನಾಡಿ, ನೂತನ ಪದಾಧಿಕಾರಿಗಳ ಅವಧಿಯಲ್ಲಿ ಕುಶಾಲನಗರದ ಕೆರೆಗಳು ಅಭಿವೃದ್ದಿ ಹೊಂದಬೇಕಿದೆ ಎಂಬ ಆಶಯ ವ್ಯಕ್ತಪಡಿಸಿದರು. ಪ್ರಮುಖ ಕೆರೆ ತಾವರೆಕೆರೆಯನ್ನು ಉತ್ತಮ ಪ್ರವಾಸಿ ತಾಣವಾಗಿಸುವ ಯೋಜನೆ‌ ಮತ್ತೆ ಸಾಕಾರಗೊಳ್ಳಬೇಕಿದೆ. ನೂತನ ಪದಾಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ, ದೂರದೃಷ್ಟಿಯ ಯೋಜನೆಗಳನ್ನು ಕಾರ್ಯಗತಗೊಳಿಸಬೇಕಿದೆ ಎಂದರು.

ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಊರಿನ ಆಸ್ತಿಗಳನ್ನು ಉಳಿಸುವಲ್ಲಿ ಪ್ರಾಧಿಕಾರದ ಪದಾಧಿಕಾರಿಗಳು ದುಡಿಯಬೇಕಿದೆ. ಎಲ್ಲರಿಗೂ ಮಾದರಿಯಾಗಿ ಕಾರ್ಯನಿರ್ವಹಿಸಬೇಕಿದೆ. ಪಕ್ಷಕ್ಕಾಗಿ ದುಡಿಯುವವರಿಗೆ ಅಧಿಕಾರ, ಸ್ಥಾನಮಾನ ಒಲಿದುಬರಲಿದೆ. ನೂತನ ಶಾಸಕರ ಪ್ರಯತ್ನದಿಂದ ಕುಶಾಲನಗರಕ್ಕೆ ಮತ್ತಷ್ಟು ಹೊಸ ಯೋಜನೆಗಳು ಜಾರಿಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಅಧಿಕಾರ ವಹಿಸಿಕೊಂಡ ನೂತನ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಮಾತನಾಡಿ, ಸ್ಥಾನಮಾನಗಳಿಗೆ ಪೈಪೋಟಿ ಸಾಮಾನ್ಯ. ದೊರೆತ ಅಧಿಕಾರವನ್ನು ಜನಸಾಮಾನ್ಯರ ಸೇವೆ ಒದಗಿಸಲು ನೂತನ ಪದಾಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದರು.

ಈ ಸಂದರ್ಭ ಜಿಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ತಹಸೀಲ್ದಾರ್ ಕಿರಣ್ ಗೌರಯ್ಯ, ಪುರಸಭಾ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸ್ವಾತಿ ಸೇರಿದಂತೆ ಪುರಸಭಾ ಸದಸ್ಯರುಗಳು, ಕಾಂಗ್ರೆಸ್ ವಿವಿಧ ಘಟಕಗಳ ಪ್ರಮುಖರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!