ಪ್ರತಿಭಟನೆ

ಪಾಕಿಸ್ತಾನ ಪರ ಘೋಷಣೆ : ಕುಶಾಲನಗರದಲ್ಲಿ ಬಿಜೆಪಿ ಪ್ರತಿಭಟನೆ

ಕುಶಾಲನಗರ ಫೆ 28: ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣ ವಿರೋಧಿಸಿ‌ ಕುಶಾಲನಗರದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಬಳಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಷ ವ್ಯಕ್ತಪಡಿಸಿದರು. ಪಾಕಿಸ್ತಾನ ಪರ ಘೋಷಣೆ ಕೂಗಿದವರ ವಿರುದ್ಧ ಕೂಡಲೆ ದೇಶದ್ರೋಹಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ಕೆ.ಜಿ.ಬೋಪಯ್ಯ, ಕಾಂಗ್ರೆಸ್ ಸರಕಾರ ಓಟಿಗಾಗಿ‌ ಯಾವ ಮಟ್ಟಕ್ಕೆ ಇಳಿಯಲಿದೆ ಎಂಬುದು ಈ ಪ್ರಕರಣದಿಂದ ಮತ್ತೆ ಸಾಬೀತಾಗಿದೆ. ಪಾಕಿಸ್ತಾನ‌ ಪರ ಘೋಷಣೆ ಕೂಗಿದವರನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗಿದೆ. ಇಲ್ಲಿನ ಅನ್ನ ತಿಂದು ದೇಶಾಭಿಮಾನ‌ ಮರೆತವರು ನಮಗೆ ಅಗತ್ಯವಿಲ್ಲ. ಪಾಕಿಸ್ತಾನದ ಪರ ಒಲವಿರುವವರನ್ನು ನೇರವಾಗಿ ಅಲ್ಲಿಗೆ ಕಳುಹಿಸಿ ಎಂದ ಅವರು, ಕಾಂಗ್ರೆಸ್ ಸರಕಾರದಿಂದ ಮುಂದಿನ ದಿನಗಳಲ್ಲಿ ಉಂಟಾಗಲಿರುವ ಅನಾಹುತಗಳ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಕೂಡಲೆ ಪ್ರಕರಣಕ್ಕೆ ಸಂಬಂಧಿಸಿದವರ ವಿರುದ್ದ ಸೂಕ್ತ ಕ್ರಮಕ್ಕೆ ಅವರು ಆಗ್ರಹಿಸಿದರು.

ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ರಾಜ್ಯ ಸರ್ಕಾರ ಪಾಕಿಸ್ತಾನ ಪರ ಘೋಷಣೆ ಕೂಗಿದವರ ವಿರುದ್ಧ ಪ್ರಕರಣ ದಾಖಲಿಸಲು‌ ವಿಳಂಭ ನೀತಿ‌ ಅನುಸರಿಸುತ್ತಿರುವುದು ಖಂಡನೀಯ.‌ ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು, ಗೆದ್ದಾಗ ಘೋಷಣೆ ಕೂಗುವುದು ಸಾಮಾನ್ಯ. ಅದರೆ ದೇಶದೊಳಗಿನ ವ್ಯವಸ್ಥೆ ಬದಲಿಗೆ ನೆರೆಯ ದೇಶಕ್ಕೆ ಜೈಕಾರ ಹಾಕಿರುವುದು ನಮ್ಮ‌ ನಡುವೆ ವಿಷವರ್ತುಲಗಳಿವುದನ್ನು ಸಾಬೀತುಪಡಿಸಿದೆ. ದೇಶ ಗಂಡಾಂತರದಲ್ಲಿದೆ ಎಂಬ ಆತಂಕ ಕಾಡುತ್ತಿದೆ ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ‌ ಮಾಜಿ ಅಧ್ಯಕ್ಷ ರಾಬಿನ್ ದೇವಯ್ಯ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ರಾಜ್ಯ ಎಸ್ಟಿ‌ ಮೋರ್ಚಾ ಉಪಾಧ್ಯಕ್ಷೆ ಮಂಜುಳಾ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಇಂದಿರಾ ರಮೇಶ್, ವಿವಿಧ ಘಟಕಗಳ ಪ್ರಮುಖರಾದ ಮೋಹಿತ್ ತಿಮ್ಮಯ್ಯ, ಮೋಕ್ಷಿತ್ ರಾಜ್, ದರ್ಶನ್ ಜೋಯಪ್ಪ, ಪ್ರಮುಖರಾದ ಮನುಕುಮಾರ್ ರೈ, ಜಿ.ಎಲ್.ನಾಗರಾಜ್, ಕುಮಾರಪ್ಪ, ಎಂ.ಡಿ.ಕೃಷ್ಣಪ್ಪ, ಸುಮನ್, ಹೆರೂರು ಚಂದ್ರಶೇಖರ್, ಚರಣ್, ನವನೀತ್ ಮತ್ತಿತರರು ಇದ್ದರು.

 

Related Articles

Leave a Reply

Your email address will not be published. Required fields are marked *

Back to top button
error: Content is protected !!