ವಿಶೇಷ

ನಾವು ಬದುಕುಳಿಯಲು ಅಯ್ಯಪ್ಪನೇ ರಕ್ಷೆ:: ರಸ್ತೆ ಅಪಘಾತ ಘಟನೆ ಬಗ್ಗೆ ವಿವರಿಸಿದ‌ ಲಿಂಗಂ

60 ಬಾರಿ ಅಯ್ಯಪ್ಪ ದರ್ಶನಗೈದ ಲಿಂಗಂ‌ ಹೇಳಿಕೆ

ಕುಶಾಲನಗರ ಜ 17: : ನಾವು ಮೂವರು ಬದುಕುಳಿದಿದ್ದೇ ಪವಾಡ. ಅಷ್ಟು ಮಾತ್ರವಲ್ಲ. ಅಯ್ಯಪ್ಪನೇ ನಮಗೆ ಜೀವದಾನ ನೀಡಿದ್ದಾನೆ.
ಇದು ಶಬರಿ ಮಲೆಯ ಅಯ್ಯಪ್ಪನ ದರ್ಶನ ಪಡೆದು ಹಿಂದಿರುಗುವಾಗ ಕೇರಳದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಾರಣಾಂತಿಕವಾಗಿ ಗಾಯಗೊಂಡು ಬದುಕುಳಿದು ಬಂದ ಕುಶಾಲನಗರದ ಲಿಂಗಂ ಎಂಬವರ ಅಭಿಮತ.
45 ವರ್ಷಗಳಿಂದ ಚಾಚು ತಪ್ಪದೇ ಪ್ರತೀ ವರ್ಷವೂ ಶಬರಿ ಮಾಲೆಗೆ ಹೋಗಿ ಅಯ್ಯಪ್ಪನ ದರ್ಶನ ಪಡೆದು ಬರುತ್ತಿದ್ದೇನೆ. ಈ ನಡುವೆ 15 ಬಾರಿ ವಿಷು ಪೂಜೆಗೂ ಹೋಗಿ ಬಂದಿದ್ದೇನೆ. ಹಾಗಾಗಿ ನನ್ನ ಪರಮ ಆರಾಧ್ಯ ದೈವ ಅಯ್ಯಪ್ಪ ನನ್ನೊಡನೆ ನನ್ನ ಮಗನನ್ನು ಬಚಾವ್ ಮಾಡಿದ್ದಾನೆ ಎಂದು ‘ ಶಕ್ತಿ ‘ ಯೊಂದಿಗೆ ಲಿಂಗಂ ಹೇಳು ಹೇಳುತ್ತಲೇ ಕಣ್ಣೀರಾದರು.
ಕಳೆದ ಹದಿನೈದು ದಿನಗಳ ಹಿಂದೆ ಶಬರಿ ಮಲೆ ಯಾತ್ರೆ ತೆರಳಿದ್ದ ಕುಶಾಲನಗರದ ನಾಲ್ವರ ಪೈಕಿ ಕಾರು ಚಾಲಿಸುತ್ತಿದ್ದ ಹಾರಂಗಿಯ ಚಿಕ್ಕತ್ತೂರಿನ ಚಂದ್ರು ಎಂಬವರು ಸ್ಥಳದಲ್ಲೇ ಧಾರುಣವಾಗಿ ಮೃತಪಟ್ಟಿದ್ದರು.
ಉಳಿದಂತೆ ಕಾರಿನ ಮುಂಬದಿಯ ಆಸನದಲ್ಲಿದ್ದ ಲಿಂಗಂ, ಹಿಂಬದಿಯ ಸೀಟಿನಲ್ಲಿದ್ದ ಹರೀಶ್ ಹಾಗೂ ಲಿಂಗಂ ಪುತ್ರ ಸಂತೋಷ್ ಈ ಮೂವರು ಗಂಭೀರವಾಗಿ ಗಾಯಗೊಂಡಿದ್ದರು.

ಘಟನೆಯನ್ನು ಲಿಂಗಂ ವಿವರಿಸಿದ್ದು ಹೀಗೆ :
ನಾವು ಬೆಟ್ಟವನ್ನೇರುವಾಗ ಬರೋಬ್ಬರಿ 10 ಲಕ್ಷಕ್ಕೂ ಹೆಚ್ಚಿನ ಭಕ್ತಗಣವಿತ್ತು.
ನಾವು ಶಬರಿಮಲೆಯ ಪಂಪಾ ನದಿಯ ಸನ್ನಿಧಾನ ತಲುಪಿದ ಬಳಿಕ ದೇವರ ದರ್ಶನಕ್ಕಾಗಿ ಸತತವಾಗಿ 26 ಗಂಟೆಗಳಿಗೂ ಹೆಚ್ಚು ಕಾಲ ಸರದಿ ಸಾಲಿನಲ್ಲಿದ್ದೆವು.
ಕೊನೆಗೆ ಮಧ್ಯರಾತ್ರಿ 1 ಗಂಟೆಯ ಆಸುಪಾಸಿನಲ್ಲಿ ಅಯ್ಯಪ್ಪನ ದರ್ಶನವಾಯ್ತು. ಬಳಿಕ ದೇವಾಲಯದ ಮುಖ್ಯ ಅರ್ಚಕರ ದರ್ಶನಗೈದು ಅವರ ಪಾದವನ್ನು ಮುಟ್ಟಬೇಕೆಂದು ನಿರ್ಧರಿಸಿ ಅದೂ ಕೂಡ ದೇವರ ದಯೆಯಿಂದ ಸಾಧ್ಯವಾಯಿತು.
ನಂತರ ಬೆಟ್ಟವಿಳಿದು ಕೆಳಗೆ ಬಂದು ಸ್ವಲ್ಪ ದೂರ ಸಾಗಿದ ನಂತರ ಹೊಟ್ಟೆ ಹಸಿವಾಗಿ ಪರೋಟ ತಿಂದೆವು.
ಸಮಯ ಮಧ್ಯ ರಾತ್ರಿ ಎರಡು ಗಂಟೆ ಯಾಗಿದೆ.‌ ತುಂಬಾ ಆಯಾಸವೂ ಆಗಿದೆ.
ಹಸಿದ ಹೊಟ್ಟೆಯೂ ತುಂಬಿದೆ. ಕಾರಿನಲ್ಲಿಯೇ
ಸ್ವಲ್ಪ ಹೊತ್ತು ನಿದ್ರೆ ಮಾಡೋಣ. ಬಳಿಕ ಹೊರಡೋಣ ಅಂತಾ ನಾನು ಪರಿ ಪರಿಯಾಗಿ ಬೇಡಿದರೂ ಕೂಡ ಕಾರು ಚಾಲಿಸುತ್ತಿದ್ದ ಚಂದ್ರು, ಅಣ್ಣಾ ನನಗೆ 30 ವರ್ಷಗಳ ಚಾಲನಾ ಅನುಭವ.
ನೀವು ವಿಶ್ರಾಂತಿ ಮಾಡಿ. ಕಾರಲ್ಲಿ ಮಲಗಿ. ನಾನು ನಿಧಾನ ಗಾಡಿ ಓಡಿಸುತ್ತೇನೆ. 100 ಕಿಮೀ ಕ್ರಮಿಸಿದ ನಂತರ ನಾನು ಕೂಡ ನಿದ್ರೆ ಮಾಡುತ್ತೇನೆ ಎಂದು ಚಂದ್ರು ಹೇಳಿದರು. ಆದಾಗ್ಯೂ ನನಗೆ ಬಹಳಷ್ಟು ಆಯಾಸವಾದರೂ ಕೂಡ ಸುರಕ್ಷಿತವಾಗಿ ಮನೆ ತಲುಪಬೇಕೆಂಬ ಬಯಕೆಯಿಂದ ನಿದ್ರೆ ಮಾಡದೆ ಚಂದ್ರು ಜೊತೆ ಮಾತಾಡಿಕೊಂಡೇ ಇದ್ದೆ.
ಕಾರು 100 ರಿಂದ 110 ರ ವೇಗದಲ್ಲಿತ್ತು. ಚಂದ್ರುಗೆ ನಿದ್ರೆ ಆವರಿಸಿತು. ಕಾರು ರಸ್ತೆಯನ್ನು ಬಿಟ್ಟು ಎಡ ಬದಿಗೆ ಸರಿಯಿತು.
ನಾನು ಕೂಡಲೇ ಚಂದ್ರು ಎಂದು ಕೂಗುವಷ್ಟರಲ್ಲಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಭಕ್ಕೆ ಅಪ್ಪಳಿಸತ್ತು.
ನನಗೆ ಕಾರಿನ ಮುಂಬದಿಯ ಬಾಗಿಲು ಹೊಡೆದ ರಭಸಕ್ಕೆ ಅಪ್ಪಚ್ಚಿಯಾಗಿದ್ದೆ.
ಚಂದ್ರುಗೆ ಕಾರಿನ ಮುಂಬದಿಯ ಸೀಳೊಂದು ಚೂರಿಯಾಕಾರದಲ್ಲಿ ಸೀಳಿ ಬಂದು ಅವರ ಎಡಬದಿಯ ಎದೆಗೆ ನಾಟಿತ್ತು.
ಚಂದ್ರು ಜೀವ ಬಿಡುವಾಗ ಅಣ್ಣಾ ಅಣ್ಣಾ ಎಂದು ಎರಡು ಸಾರಿ ಹೇಳಿದ್ದು ಮಾತ್ರ ನನಗೆ ಕರುಳು ಕಿತ್ತು ಬರ್ತಾ ಇದೆ. ತಡೆಯೋಕೆ ಆಗ್ತಾ ಇಲ್ಲ ಎಂದು ಲಿಂಗಂ ಕಣ್ಣೀರು ಹಾಕುತ್ತಾ ವಿವರಿಸಿದರು.
ತಕ್ಷಣವೇ ಚಿಕಿತ್ಸೆಯ ನೆರವು :
ಕಾರು ಅಪಘಾತಕ್ಕೀಡಾದ ಕೆಲವೇ ಕಿಮೀ ದೂರದಲ್ಲಿ ಆಸ್ಪತ್ರೆ ಇತ್ತು. ಕೇರಳದ ಪೋಲೀಸರು ನಮ್ಮನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಿ ತುರ್ತು ಚಿಕಿತ್ಸೆ ನೀಡಿದರು. ಅವರು ಅದೆಷ್ಟು ಪ್ರಾಮಾಣಿಕರು ಎಂದರೆ, ನಮ್ಮ ಬಳಿ ಇದ್ದ ನಾಲ್ಕು ಬೆಲೆ ಬಾಳುವ ಮೊಬೈಲ್ ಗಳು ಹಾಗೂ ನನ್ನ ಬಳಿ ಇದ್ದ 21 ಸಾವಿರ ನಗದು ಹಣ ಎಲ್ಲವನ್ನು ಜೋಪಾಕ ಮಾಡಿ ನಮಗೆ ಆಸ್ಪತ್ರೆಯಲ್ಲಿ ಒಪ್ಪಿಸಿದರು.
ಇದಕ್ಕೂ ಮೊದಲು ನಮ್ಮ ಕರ್ನಾಟಕದ ಅಯ್ಯಪ್ಪ ಭಕ್ತರು ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ನಮ್ಮ ಸ್ಥಿತಿ ಹಾಗೂ ಛಿದ್ರಗೊಂಡ ಕಾರಿನ ಚಿತ್ರಣವನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ ಬಳಿಕ ನಮ್ಮ ಸ್ನೇಹಿತರು ಹಾಗೂ ಕುಟುಂಬ ಸದಸ್ಯರಿಗೆ ವಿಷಯ ಮುಟ್ಟಲು ಸಹಕಾರಿಯಾಗಿದೆ ಎಂದು ಲಿಂಗಂ ಕೃತಜ್ಞತೆ ಸಲ್ಲಿಸಿದರು.
ಕೇರಳದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯ ನಂತರ ಲಿಂಗಂ ಹಾಗೂ ಅವರ ಪುತ್ರ ಸಂತೋಷ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಯಿತು. ಇನ್ನೋರ್ವ ಹರೀಶ್ ಎಂಬವರನ್ನು ಮೈಸೂರಿನ‌ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಯಿತು. ಇದೀಗ ಈ ಮೂವರು ವಿಶ್ರಾಂತಿಯಲ್ಲಿದ್ದಾರೆ.
ಆದರೆ ಜೊತೆಯಲ್ಲಿ ತೆರಳಿದ್ದ ಚಂದ್ರು ಅಗಲಿಕೆ ಈ ಮೂವರ ಮನಶ್ಯಾಂತಿ ಕದಡಿದೆ.
ವಿಮೆ ಇದ್ದರೆ ಲಕ್ಷಗಳ ಪರಿಹಾರ ಸಿಗುತ್ತಿತ್ತು :
ಮೃತ ಚಂದ್ರು ಅವರಿಗೆ ಸೇರಿದ ಕಾರಿಗೆ ಯಾವುದೇ ವಿಮೆ ಪಾವತಿಸಿರಲಿಲ್ಲ ಎನ್ನಲಾಗಿದ್ದು, ವಿಮೆ ಇದ್ದಿದ್ದರೆ ಮಾರ್ಗಮಧ್ಯೆ ಮೃತ ಪಟ್ಟ ಶಬರಿ ಮಲೆ ಭಕ್ತರಿಗೆ ದೇವಾಲಯ ಟ್ರಸ್ಟ್ ವತಿಯಿಂದ 25 ಲಕ್ಷ ರೂಗಳ ವರೆಗೂ ಪರಿಹಾರದ ಹಣ ದೊಕುತಿತ್ತು ಎಂದು ಲಿಂಗಂ ದುಃಖ ವ್ಯಕ್ತಪಡಿಸಿದರು.
ವರದಿ : ಕೆ.ಎಸ್.ಮೂರ್ತಿ

Related Articles

Leave a Reply

Your email address will not be published. Required fields are marked *

Back to top button
error: Content is protected !!