ಕುಶಾಲನಗರ, ಅ 12: ಕೂಡುಮಂಗಳೂರು ಗ್ರಾ.ಪಂ ಸುಂದರನಗರದ ವಾರ್ಡ್ ಸಭೆಯು, ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರ ಅಧ್ಯಕ್ಷತೆಯಲ್ಲಿ ಸುಂದರನಗರ ಸಮುದಾಯ ಭವನದಲ್ಲಿ ನಡೆಯಿತು.
ಸಭೆಯಲ್ಲಿ ಸರ್ಕಾರದ ಯೊಜನೆಗಳ ಬಗ್ಗೆ ಹಾಗೂ ಸವಲತ್ತುಗಳ ಬಗ್ಗೆ ಕೆ.ಬಿ.ಶಂಶುದ್ಧೀನ್ ಅವರು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಉದ್ಯೋಗ ಖಾತ್ರಿ ಯೋಜನೆ, ಶೇ.೨೫ ರ ಅನುದಾನದ ಅಡಿಯಲ್ಲಿ ಎಸ್.ಸಿ, ಎಸ್.ಟಿ ಸಮುದಾಯದವರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳು, ಶೇ.೫ ರ ಅನುದಾನದಡಿ ವಿಶೇಷ ಚೇತನರ ಸವಲತ್ತುಗಳು ಹಾಗೂ ನಾನಾ ಇಲಾಖೆಗಳಿಂದ ಸಾರ್ವಜನಿಕರಿಗೆ ಲಭ್ಯವಿರುವ ಸವಲತ್ತುಗಳನ್ನು ಸಾರ್ವಜನಿಕರು ಬಳಸಿಕೊಳ್ಳುತವಂತೆ ಅವರು ಮನವಿ ಮಾಡಿದರು.
ನಂತರ ವಾರ್ಡ್‌ನಲ್ಲಿ ಚರಂಡಿ ಹಾಗೂ ರಸ್ತೆ ನಿರ್ಮಿಸಿಕೊಡುವುದರ ಬಗ್ಗೆ ಮನವಿ ಮಾಡಿದರು. ಈಗಾಗಲೇ ವಾರ್ಡನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸುತ್ತಾ ಬಂದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿಯತ್ತ ಶ್ರಮಿಸಲಾಗುವುದು ಎಂದು ಕೆ.ಬಿ.ಶಂಶುದ್ಧೀನ್ ಉತ್ತರಿಸಿದರು. ಸುಂದರನಗರದಲ್ಲಿ ರಸ್ತೆಗೆ ಅಡ್ಡಲಾಗಿರುವ ಕೆಲವು ಮರಗಳು ಹಾಗೂ ಅಪಾಯದ ಹಂತದಲ್ಲರುವ ಮರಗಳನ್ನು ತೆರವುಗೊಳಿಸುವ ಬಗ್ಗೆ ಮನವಿ ಮಾಡಲಾಯಿತು. ಈ ಬಗ್ಗೆ ಅರಣ್ಯ ಇಲಾಖೆಯವರಿಗೆ ಪತ್ರ ಬರೆಯುವುದಾಗಿ ಸಾರ್ವಜನಿಕರಿಗೆ ತಿಳಿಸಲಾಯಿತು.
ನಂತರ ಕೊಳಚೆ ನೀರಿನ ಸಮಸ್ಯೆ, ಮೋರಿ ಸಮಸ್ಯೆ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಸಭೆಯ ಗಮನಕ್ಕೆ ತಂದರು. ಸುಂದರನಗರ ಸಮುದಾಯ ಭವನದಲ್ಲಿ ಪುಂಡ ಹುಡುಗರ ಹಾವಳಿಯಿಂದ ಸಮುದಾಯ ಭವನ ಅಸ್ವಚ್ಚತೆಯಿಂದ ಕೂಡಿದೆ. ಯಾವುದೇ ಸಭೆ ಸಮಾರಂಭ ನಡೆಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಮುದಾಯ ಭವನಕ್ಕೆ ಸಿಸಿ ಕ್ಯಾಮರಾ ಅಳವಡಿಸುವಂಗೆ ಸಾರ್ವಜನಿಕರು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸದಸ್ಯ ಕೆ.ಬಿ.ಶಂಶುದ್ಧೀನ್, ಮುಂದಿನ ದಿನಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಮುಂದಾಗಲಾಗುವುದು. ಪುಂಡರ ಬಗ್ಗೆ ಗ್ರಾಮಾಂತರ ಠಾಣಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಾರ್ಡ್ ಸಭೆ ಅಧ್ಯಕ್ಷರಾದ ಕೆ.ಬಿ.ಶಂಶುದ್ಧೀನ್, ಊರಿನ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಬಹಳ ಮುಖ್ಯ. ಯಾವುದೇ ಸಮಸ್ಯೆಗಳಿದ್ದರೂ ಸದಸ್ಯರ ಗಮನಕ್ಕೆ ತಂದು, ಸಮಸ್ಯೆ ಪರಿಹರಿಸಿಕೊಳ್ಳಿ. ಈಗಾಗಲೇ ನಮ್ಮ ವಾರ್ಡ್ ನಲ್ಲಿ ಶಾಸಕರ ಅನುದಾನ, ಜಿ.ಪಂ ಹಾಗೂ ತಾ.ಪಂ ಅನುದಾನ, ಉದ್ಯೋಗ ಖಾತ್ರಿ ಯೋಜನೆಯಡಿ ಹಾಗೂ ಇನ್ನಿತರ ಇಲಾಖೆಯ ಅನುದಾನಗಳು ಸೇರಿದಂತೆ ಎರಡು ಕೋಟಿಯಷ್ಟು ಕಾಮಗಾರಿಗಳು ನಮ್ಮ ಅವಧಿಯಲ್ಲಿ ನಡೆದಿದೆ. ಮುಂದೆ ಮತ್ತಷ್ಟು ಅಭಿವೃದ್ಧಿಗೆ ಶ್ರಮವಹಿಸಲಾಗುವುದು ಎಂದರು.
ಈ ಸಂದರ್ಭ ವಾರ್ಡ್ ಸದಸ್ಯೆ ದೀಪ, ಗ್ರಾಮ ಲೆಕ್ಕಿಗ ಅವಿನಾಶ್, ಲೆಕ್ಕ ಸಹಾಯಕಿ ಮಮತಾ, ವಾಟರ್ ಮ್ಯಾನ್ ವಸಂತ್ ಕುಮಾರ್ ಹಾಗೂ ಸಾರ್ವಜನಿಕರು ಇದ್ದರು.
Back to top button
error: Content is protected !!